ಮಂಗಳೂರು: “ಹಮೇ ನೇತಾ ನಹಿ ನೀತಿ ಚಾಹಿಯೇ” ಎಂದು ‘ಸಿಪಿಐಎಂ’ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೂಡುಬಿದಿರೆಯಲ್ಲಿ ಆಯೋಜಿಸಲಾಗಿದ್ದ ‘ಸಿಪಿಐಎಂ ರಾಜ್ಯ ಸಮ್ಮೇಳನ’ದಲ್ಲಿ ಅವರು ಮಾತನಾಡಿದರು. ತಮ್ಮದು ಭ್ರಷ್ಟಾಚಾರ ರಹಿತ ಸರ್ಕಾರ ಎಂದು ಪ್ರಧಾನಿ ಹೇಳುತ್ತಾರೆ.
ಆದರೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ನಡೆದ ಅನೇಕ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಈವರೆಗೆ ನಡೆದಿಲ್ಲ ಎಂದು ಅವರು ಆರೋಪಿಸಿದರು. ‘ಪನಾಮಾ ಪೇಪರ್ಸ್’ ಅವ್ಯವಹಾರ ಪ್ರಕರಣದ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಕೇಳಿಬಂದರೂ ಪ್ರಧಾನಿ ಸ್ಥಾನಕ್ಕೆ ನರೇಂದ್ರ ಮೋದಿಯವರು ರಾಜೀನಾಮೆ ನೀಡಿಲ್ಲ.
ಆದರೆ ಪನಾಮ ಪ್ರಕರಣದ ಪಟ್ಟಿಯಲ್ಲಿ ಹೆಸರಿದ್ದ ಕಾರಣಕ್ಕೆ ಪಾಕಿಸ್ತಾನದ ಪ್ರಧಾನಿ ರಾಜೀನಾಮೆ ನೀಡಿದರು ಎಂದು ಅವರು ಕುಟುಕಿದರು. ಮೋದಿ ವಿರುದ್ಧ ವಾಗ್ದಾಳಿ “ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ನಡೆದಿದ್ದ ಭ್ರಷ್ಟಾಚಾರದ ತನಿಖೆ ನಡೆಸದೆ ಯಾವ ರೀತಿ ಭ್ರಷ್ಟಾಚಾರ ಮುಕ್ತ ರಾಷ್ಟ್ರ ಮಾಡುತ್ತಾರೆ? ಇವರು ದೇಶದ ಸಂಪತ್ತನ್ನು ಲೂಟಿ ಮಾಡಲು ಹೊರಟಿದ್ದಾರೆ ಎಂದು ಯೆಚೂರಿ ಮೋದಿ ಸರಕಾರವನ್ನು ಜರೆದಿದ್ದಾರೆ. ನೋಟು ಅಮಾನ್ಯ, ಜಿಎಸ್‌ಟಿ ಹೇರಿಕೆಯಿಂದ ಕೋಟ್ಯಂತರ ಜನರು ಜರ್ಝರಿತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ಗಮನ ಬೇರೆಡೆಗೆ ಸೆಳೆಯಲು ಕೋಮು ಧ್ರುವೀಕರಣ ತಂತ್ರ ಅನುಸರಿಸಲಾಗುತ್ತಿದೆ,” ಎಂದು ಅವರು ಆರೋಪಿಸಿದರು.
ಕ್ರಿಮಿನಲ್ ಅಪರಾಧ ಈಗ ಕೇಂದ್ರ ಸರ್ಕಾರ ತ್ರಿವಳಿ ತಲಾಕ್ ಕಾನೂನು ಜಾರಿಗೆ ಹೊರಟಿದೆ. ಏಕಾಏಕಿ ತಲಾಖ್ ಗೆ ಸಿಪಿಎಂ ಕೂಡ ವಿರೋಧವಿದೆ. ಆದರೆ ಬಿಜೆಪಿ ಸರ್ಕಾರ ಈ ಹೊಸ ಕಾನೂನಿನ ಮೂಲಕ ಮದುವೆ ಎನ್ನುವ ಸಾಮಾಜಿಕ ಸಂಬಂಧವನ್ನು ಕ್ರಿಮಿನಲ್ ಅಪರಾಧವನ್ನಾಗಿ ಮಾಡಲು ಹೊರಟಿದೆ ಎಂದು ಅವರು ದೂರಿದರು. ಪತ್ನಿ ಮಕ್ಕಳ ಹೊಣೆ ಯಾರಿಗೆ? ತ್ರಿವಳಿ ತಲಾಖ್ ನೀಡುವವರನ್ನು 3ವರ್ಷ ಜೈಲಿಗೆ ಕಳಿಸುತ್ತೇವೆ ಎನ್ನುತ್ತಾರೆ.
ಆ ಸಂದರ್ಭದಲ್ಲಿ ಅವರ ಪತ್ನಿ- ಮಕ್ಕಳ ಹೊಣೆಗಾರಿಕೆ ನೋಡುವವರು ಯಾರು? ಅವರಿಗೆ ಪರಿಹಾರವೇನೆಂದು ಎಲ್ಲೂ ಹೇಳಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಧರ್ಮ ಯುದ್ಧ “ಕೇಂದ್ರ ಸರ್ಕಾರವೇ ಧರ್ಮದ ಆಧಾರದಲ್ಲಿ ಯುದ್ಧ ಸಾರಲು ಹೊರಟಿದೆ.
ರಾಜಕೀಯ ದಾಳಿ, ಹಿಂಸೆಗಳಲ್ಲಿ ಆರ್ ಎಸ್ಎಸ್ ಕಾರ್ಯಕರ್ತರು ತೊಡಗಿದ್ದಾರೆ. ದೇಶದ ಹಿಂಸಾಚಾರಗಳನ್ನು ಆರ್ ಎಸ್ಎಸ್ ನಡೆಸುತ್ತಿದೆ ಎಂದು ಎಲ್ಲ ಪ್ರಕರಣಗಳ ನ್ಯಾಯಾಂಗ ತನಿಖೆಗಳು ಬಹಿರಂಗಗೊಳಿಸಿವೆ. ದಾಳಿ ಮಾಡೋರು ಅವರು, ಆದರೆ ಅದನ್ನು ಕಮ್ಯೂನಿಸ್ಟರ ಮೇಲೆ ಹೇರುತ್ತಿದ್ದಾರೆ,” ಎಂದು ಯೆಚೂರಿ ಕಿಡಿಕಾರಿದರು.
ಅಶ್ವಮೇಧದ ಕುದುರೆಗೆ ಬ್ರೇಕ್ ನರೇಂದ್ರ ಮೋದಿ, ಅಮಿತ್ ಶಾ ತಾವು ಸೋಲಲಾರೆವು ಅಶ್ವಮೇಧ ಯಾಗ ಮಾಡುತ್ತಿದ್ದೇವೆ ಎಂದು ತಿಳಿದಿದ್ದಾರೆ. ಬಿಜೆಪಿ ಅವರು ಯಾವಾಗಲೂ ಪಠಿಸುವ ಶ್ರೀರಾಮ, ಅಶ್ವಮೇಧ ಯಾಗ ಮಾಡಿದಾಗ ಆತನ ಅವಳಿ ಮಕ್ಕಳಾದ ಲವ-ಕುಶರು ಕುದುರೆ ತಡೆದಿದ್ದರು. ಈಗ ಮೋದಿ ಅವರ ಅಶ್ವಮೇಧವನ್ನು ದೇಶದ ಅವಳಿ ಶಕ್ತಿಗಳಾದ ರೈತರು ಮತ್ತು ಕಾರ್ಮಿಕರು ತಡೆದೇ ತಡೆಯುತ್ತಾರೆ ಎಂದು ಸೀತಾರಾಮ ಯೆಚೂರಿ ವಿಶ್ವಾಸ ವ್ಯಕ್ತಪಡಿಸಿದರು.
Click this button or press Ctrl+G to toggle between Kannada and English