ರಾಜಕೀಯ ಪಕ್ಷಗಳಿಂದ ನಿರ್ಲಕ್ಷ್ಯ: ಶ್ರೀಧರ ಶೆಟ್ಟಿ

4:42 PM, Wednesday, January 3rd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

karnatakaವಿಟ್ಲ: ವಿಟ್ಲ ಹೋಬಳಿಯನ್ನು ತಾಲ್ಲೂಕು ಕೇಂದ್ರವಾಗಿ ಘೋಷಣೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಕಾರದಲ್ಲಿ ವಿಟ್ಲದ ನಾಲ್ಕು ಮಾರ್ಗ ಜಂಕ್ಷನ್‍ನಲ್ಲಿ ಮಂಗಳವಾರ ವಾಹನ ತಡೆದು ಪ್ರತಿಭಟನೆ ನಡೆಸಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ಮಾತನಾಡಿ, 45 ವರ್ಷದಿಂದ ವಿಟ್ಲ ತಾಲ್ಲೂಕು ಕೇಂದ್ರ ಮಾಡಿ ಎಂದು ಆಗ್ರಹಿಸುತ್ತಿದ್ದರೂ, ಸರ್ಕಾರಗಳು ಸ್ಪಂದಿಸುತ್ತಿಲ್ಲ. ಗ್ರಾಮೀಣ ಭಾಗದ ಜನತೆಗೆ ಇನ್ನೂ ಶಕ್ತಿ ತುಂಬಿಲ್ಲ. ಈ ಭಾಗದಲ್ಲಿರುವ ರೈತರಿಗೆ ಹಾಗೂ ನಾಗರಿಕರ ಇಚ್ಛಾ ಶಕ್ತಿಯ ಕೊರತೆ ಇದೆ ಎಂದರು.

ವಿಟ್ಲ ಗ್ರಾಮ ಪಂಚಾಯಿತಿಯು, ಪಟ್ಟಣ ಪಂಚಾಯಿತಿ ಆಗಿದೆ. ಅಭಿವೃದ್ಧಿ ಹಾಗೂ ಹೊಸ ಕಟ್ಟಡಗಳು ತಲೆ ಎತ್ತುತ್ತಿದೆ. ಆದರೆ ತಾಲ್ಲೂಕು ಆಗಬೇಕು ಎಂಬ ಬೇಡಿಕೆಗೆ ವ್ಯಾಪಾರಿಗಳಿಂದ ಬೆಂಬಲ ಸಿಗದಿರುವುದು ಬೇಸರದ ವಿಚಾರವಾಗಿದೆ. ಜನರಿಗೆ ಸದ್ಯಕ್ಕೆ ತಾಲ್ಲೂಕು ಕೇಂದ್ರದ ಪ್ರಯೋಜನದ ಬಗ್ಗೆ ಅರ್ಥವಾದಂತೆ ಕಾಣುತ್ತಿಲ್ಲ. ನಿನ್ನೆ ಮಾಡಿದ ಮನವಿಗೆ ಯಾರೊಬ್ಬರೂ ಸ್ಪಂದಿಸಿಲ್ಲ. ಹಾಗೆಂದು ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.

45 ವರ್ಷದಿಂದ ತಾಲ್ಲೂಕು ಆಗಬೇಕು ಎಂಬ ಬೇಡಿಕೆ ಪಟ್ಟಿಯಲ್ಲಿತ್ತು. ಬೇರೆ ಎಲ್ಲ ಪ್ರದೇಶಗಳು ತಾಲ್ಲೂಕು ಕೇಂದ್ರವಾಗಿವೆ. ಆ ಪಟ್ಟಿಯಲ್ಲಿದ್ದ ವಿಟ್ಲ ತಾಲ್ಲೂಕು ಕೇಂದ್ರ ಬೇಡಿಕೆ ಜಾರಿ ಹೋಗಿದೆ ಎಂದು ದೂರಿದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಧರ ಶೆಟ್ಟಿ ಬೈಲು ಮಾತನಾಡಿ, 60 ಸಾವಿರ ಜನಸಂಖ್ಯೆ ಇರುವ ಭಾಗವನ್ನು ತಾಲ್ಲೂಕು ಕೇಂದ್ರ ಮಾಡಲಾಗಿದೆ. ಆದರೆ ಒಂದೂವರೆ ಲಕ್ಷ ಜನಸಂಖ್ಯೆ ಇರುವ ವಿಟ್ಲವನ್ನು ಇನ್ನೂ ಘೋಷಣೆ ಮಾಡದ್ದರ ಹಿಂದೆ ಮೂರು ರಾಜಕೀಯ ಪಕ್ಷಗಳಿವೆ ಎಂದು ಆಪಾದಿಸಿದರು.

ವಿಧಾಸಭೆಯಲ್ಲಿ ಶಾಸಕರ ವೇತನ ಹೆಚ್ಚಳವಾಗುತ್ತದೆ ಎಂದಾದರೆ, ಮೇಜು ಕುಟ್ಟಿ ಬೆಂಬಲ ನೀಡಲು ಎಲ್ಲ ಪಕ್ಷದವರಿದ್ದಾರೆ. ಜನರಿಗೆ ಅಗತ್ಯವಾದ ವ್ಯವಸ್ಥೆಯ ಬಗ್ಗೆ ಮಾತನಾಡಲು ಯಾವೊಬ್ಬನಿಗೂ ಬಾಯಿ ಬರುತ್ತಿಲ್ಲ, ಆಸಕ್ತಿಯೂ ಇಲ್ಲ. ವಿಟ್ಲ ತಾಲ್ಲೂಕು ಕೇಂದ್ರವಾಗಬೇಕೆಂಬ ಕಾಳಜಿ ಈ ಭಾಗದ ಜನಪ್ರತಿನಿಧಿಗಳಿಗಿಲ್ಲ. ಅಂಗಡಿ ಮಾಲೀಕರಿಗೆ ವ್ಯಾಪಾರವೇ ಮುಖ್ಯ ಹೊರತು ಜನರಿಗೆ ಅಗತ್ಯವಾದ ಹೋರಾಟ ಮುಖ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಸ್ತೆ ತಡೆ: ಬಂಟ್ವಾಳ ತಹಶೀಲ್ದಾರ್ ತುರ್ತು ಕಾರ್ಯ ನಿಮಿತ್ತ ಬೆಂಗಳೂರು ತೆರಳಿದ್ದರಿಂದ, ಮನವಿ ಪಡೆಯಲು ಜಿಲ್ಲಾಧಿಕಾರಿ ಸ್ಥಳೀಯ ಕಂದಾಯ ನಿರೀಕ್ಷಕರನ್ನು ಕಳುಹಿಸುವುದಾಗಿ ದೂರವಾಣಿ ಮೂಲಕ ಹೇಳಿದ್ದಕ್ಕೆ ರೈತ ಸಂಘ ತೀವ್ರ ಆಕ್ಷೇಪ ವ್ಯಕ್ತ ಪಡಿಸಿತು.

ಸ್ಥಳೀಯರು ಬರುವುದಾದರೆ ಮನವಿಯ ಪ್ರತಿಯನ್ನು ಅಂಚೆ ಡಬ್ಬಿಗೆ ಹಾಕಿ ಸರ್ಕಾರಕ್ಕೆ ತಲುಪಿಸಲಾಗುತ್ತದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ನಿಗದಿತ ಸಮಯದ ಒಳಗೆ ಬರದಿದ್ದರೆ, ಬರುವವರೆಗೆ ರಸ್ತೆ ತಡೆ ನಡೆಸುವುದಾಗಿ ಹೇಳಿದರು. ಆದರೂ ಮಂಗಳೂರಿನಿಂದ ಅಧಿಕಾರಿ ಬರುವುದು ಅರ್ಧ ತಾಸು ತಡವಾದ್ದರಿಂದ ನಾಲ್ಕು ಮಾರ್ಗದಲ್ಲಿ ರಸ್ತೆ ತಡೆದು ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಮಧ್ಯಾಹ್ನದ ಹೊತ್ತಿಗೆ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಕಚೇರಿ ತಹಶೀಲ್ದಾರ್ ಮಾಣಿಕ್ಯ ಮನವಿ ಸ್ವೀಕರಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು, ಹಸೈನಾರ್ ಕಡಂಬು, ಲಯನ್ಸ್ ಕ್ಲಬ್‌ ನ ಡಾ. ಇರ್ಮಾಡಿ ಶರಶ್ಚಂದ್ರ ಶೆಟ್ಟಿ, ಲಕ್ಷ್ಮೀನಾರಾಯಣ ಅಡ್ಯಂತಾಯ, ವಿಟ್ಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಕೆ. ಮೂಸ ಮಾತನಾಡಿದರು.

ಕರಾವಳಿ ಕರ್ನಾಟಕ ಗಡಿ, ನೆಲ ಜಲ ಸಂರಕ್ಷಣಾ ಸಮಿತಿಯ ಅಧ್ಯಕ್ಷ ರಾಮಣ್ಣ ಶೆಟ್ಟಿ ಪಾಳಿಗೆ, ಹಿರಿಯ ಹೋರಾಟಗಾರ ಮುರುವ ಮಹಾಬಲ ಭಟ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಸಂತ ಶೆಟ್ಟಿ, ಮನೋಹರ್ ರೈ, ದಯಾನಂದ ರೈ ಕಬ್ಬಿನಹಿತ್ತಲು, ಲಿಂಗಪ್ಪ ಗೌಡರು, ಸುದರ್ಶನ್ ಪಡಿಯಾರ್ ಭಾಗವಹಿಸಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English