ಮಂಗಳೂರು: ಪಡೀಲ್ ನಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಾಣ ಕುರಿತಂತೆ ಮತ್ತೆ ಪೂರ್ವಭಾವಿ ಚಟುವಟಿಕೆಗಳು ಆರಂಭಗೊಂಡಿವೆ. ಮಂಗಳೂರು ಉಪವಿಭಾಗದ ವೃಕ್ಷಾಧಿಕಾರಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿಯಲ್ಲಿ ಜ.4 ರಂದು ಸಾರ್ವಜನಿಕ ಆಕ್ಷೇಪಣೆ ಸಭೆಯನ್ನು ನಿಗದಿಪಡಿಸಲಾಗಿದ್ದು, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ನೀಡಿರುವ ನಿವೇಶನದಲ್ಲಿರುವ ಮರಗಳನ್ನು ಕಡಿಯುವ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸುವಂತೆ ಸೂಚಿಸಲಾಗಿದೆ.
ತಾಲೂಕಿನ ಅಳಪೆ ಗ್ರಾಮದಲ್ಲಿ ಅರಣ್ಯ ಇಲಾಖೆಗೆ ಸೇರಿದ 5.89 ಎಕರೆ ಪ್ರದೇಶದಲ್ಲಿ 41 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಕಚೇರಿಗಳ ಸಂಕೀರ್ಣ ನಿರ್ಮಾಣ ಯೋಜನೆ ಮಂಜೂರಾಗಿದ್ದು, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಲಾನ್ಯಾಸ ನೆರವೇರಿಸಿದ್ದಾರೆ.
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮಕ್ಕೆ ಸೇರಿದ ಈ ಜಾಗ ಹಸಿರು ತಾಣವಾಗಿದ್ದು, ಡೀಮ್ಡ್ ಅರಣ್ಯವಾಗಿದೆ. ಅಲ್ಲಿ ಮರಗಳ ಹನನ ಮಾಡಬಾರದು. ಯೋಜನೆ ಕೈಬಿಡಬೇಕು ಎಂದು ವಾದಿಸಿ ಪರಿಸರವಾದಿಗಳು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ)ದ ಮೆಟ್ಟಿಲೇರಿದ್ದರು.
ಈ ಹಿನ್ನೆಲೆಯಲ್ಲಿ ನ್ಯಾಯಾಧೀಕರಣ ಯೋಜನೆ ಅನುಷ್ಠಾನಕ್ಕೆ ತಡೆಯಾಜ್ಞೆ ನೀಡಿತ್ತು. ಆದರೆ ಅರ್ಜಿ ಪರವಾಗಿ ಅರ್ಜಿದಾರರ ಕಡೆಯಿಂದ ಸಮರ್ಪಕವಾಗಿ ಪ್ರತಿನಿಧಿಸುವಲ್ಲಿ ಕೆಲವು ಲೋಪವಾಗಿದೆ ಎನ್ನುವ ಹಿನ್ನೆಲೆಯಲ್ಲಿ ಎನ್‌ಜಿಟಿ ಅರ್ಜಿಯನ್ನು ಡಿ.20 ರಂದು ವಜಾಗೊಳಿಸಿತ್ತು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣಕ್ಕೆ ನಿಗದಿಪಡಿಸಲಾಗಿರುವ ಪ್ರದೇಶದಲ್ಲಿ ಇರುವ ಮರಗಳನ್ನು ಕಡಿಯುವುದಕ್ಕೆ ಸಂಬಂಧಪಟ್ಟಂತೆ ನಿಯಮಗಳ ಪ್ರಕಾರ ಅರಣ್ಯ ಇಲಾಖೆ ಪೂರಕ ಕ್ರಮಗಳನ್ನು ಆರಂಭಿಸಿದ್ದು, ಸಾರ್ವಜನಿಕ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ಕೋರಿದೆ.
ಜ.4 ರೊಳಗಾಗಿ ಲಿಖಿತವಾಗಿ ಮಂಗಳೂರು ಉಪವಿಭಾಗದ ವೃಕ್ಷಾಧಿಕಾರಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಸಲ್ಲಿಸಬಹುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಈ ಜಾಗ ಹಸಿರು ತಾಣವಾಗಿದ್ದು, ಡೀಮ್ಡ್ ಅರಣ್ಯವಾಗಿದೆ. ಅಲ್ಲಿ ಮರಗಳ ಹನನ ಮಾಡಬಾರದು. ಯೋಜನೆ ಕೈ ಬಿಡಬೇಕು ಎಂದು ಪರಿಸರವಾದಿಗಳು ಸಲ್ಲಿಸಿದ್ದ ಮೊದಲ ಅರ್ಜಿ ತಿರಸ್ಕೃತಗೊಂಡಿರುವ ಹಿನ್ನೆಲೆಯಲ್ಲಿ ಮತ್ತೆ ಎನ್ ಜಿಟಿಗೆ ಪರಿಸರವಾದಿಗಳು ಮರು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಎನ್‌ಜಿಟಿ ಜ.2 ರಂದು ಸ್ವೀಕರಿಸಿದ್ದು ಜ.22 ರಂದು ವಿಚಾರಣೆ ಬರಲಿದೆ ಎಂದು ಪರಿಸರ ವಾದಿಗಳು ತಿಳಿಸಿದ್ದಾರೆ.
ನೆಲ ಮಹಡಿ, ಮೊದಲ, ಎರಡನೇ ಹಾಗೂ ಮೂರನೇ ಮಹಡಿ ಸೇರಿದಂತೆ ಟೆರೇಸ್ ಫ್ಲೋರ್ ಇದರಲ್ಲಿರಲಿದೆ. ಸುಂದರ ಶೈಲಿಯ ಜಿಲ್ಲಾ ಸಂಕೀರ್ಣದಲ್ಲಿ ಒಟ್ಟು 38 ಇಲಾಖೆಗಳಿರಲಿವೆ. ಬೇಸ್‌ಮೆಂಟ್ ಪ್ಲೋರ್‌ನಲ್ಲಿ 2, ನೆಲ ಮಹಡಿಯಲ್ಲಿ 13, ಮೊದಲ ಮಹಡಿಯಲ್ಲಿ 11 ಹಾಗೂ ಎರಡನೇ ಮಹಡಿಯಲ್ಲಿ 12 ಇಲಾಖೆಗಳಿರಲಿವೆ.
ಉಳಿದಂತೆ 400 ಜನರು ಆಸೀನರಾಗುವ ಸಭಾಭವನ, 3 ಮೀಟಿಂಗ್ ಹಾಲ್, ಬ್ಯಾಂಕ್, ಎಟಿಎಂ, ಕ್ಯಾಂಟೀನ್, ಅಂಚೆ ಕಚೇರಿ, ಪೊಲೀಸ್ ಹೊರಠಾಣೆ ಸೌಲಭ್ಯಗಳಿರಲಿವೆ.
Click this button or press Ctrl+G to toggle between Kannada and English