ಮಂಗಳೂರು: ಜಿಲ್ಲೆಯ ಬಿಜೆಪಿ ಕಾರ್ಯಕರ್ತ ದೀಪಕ್ ಹತ್ಯೆ ಸಂಬಂಧ ಆರೋಪಿಗಳನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಬಂಧಿಸಿದ್ದು, ಪೊಲೀಸರ ಕ್ಷೀಪ್ರ ಕಾರ್ಯಾಚರಯನ್ನು ಎಡಿಜಿಪಿ ಕಮಲ್ ಪಂತ್ ಶ್ಲಾಘಿಸಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರ ಈ ಕ್ಷೀಪ್ರ ಕಾರ್ಯಾಚರಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸ್ ತಂಡಕ್ಕೆ 1.20 ಲಕ್ಷ ರೂ. ಬಹುಮಾನ ಘೋಷಿಸಿದರು.
ಆರೋಪಿಗಳು ಸ್ವಿಫ್ಟ್ ಕಾರಿನಲ್ಲಿ ಕಾವೇರಿ ರಸ್ತೆಯ ಚೆಕ್‌ಪೋಸ್ಟ್ ಬಳಿ ವೇಗವಾಗಿ ಹೋಗುತ್ತಿದ್ದಾಗ ಹೋಮ್‌ಗಾರ್ಡ್ ಒಬ್ಬರು ಮೂಲ್ಕಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಅದರಂತೆ ಸಬ್ಇನ್ಸ್‌ಪೆಕ್ಟರ್ ಶೀತಲ್‌ಕುಮಾರ್, ಮೂವರು ಸಿಬ್ಬಂದಿ ಖಾಸಗಿ ಕಾರಿನಲ್ಲಿ ಬೆನ್ನಟ್ಟಿದ್ದರು. ಈ ವೇಳೆ ಮಿಜಾರಿನಲ್ಲಿ ಪೊಲೀಸರು ಫೈರಿಂಗ್ ಮಾಡಿ ಆರೋಪಿಗಳನ್ನು ಅಡ್ಡಗಟ್ಟಿ, ನಾಲ್ವರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಡಿಜಿಪಿ ಕಮಲ್ ಪಂತ್ ಹೇಳಿದ್ದಾರೆ.
ಆರೋಪಿಗಳ ವಿಚಾರಣೆ ನಡೆಯುತ್ತಿದ್ದು, ಹೆಚ್ಚಿನ ತನಿಖೆ ಮೂಲಕ ಹತ್ಯೆಯ ನಿಜವಾದ ಕಾರಣ ತಿಳಿದುಬರಲಿದೆ. ಫೈರಿಂಗ್ ಮಾಡುವಾಗ ಆರೋಪಿಗಳಾದ ಪಿಂಕಿ ನವಾಜ್, ರಿಜ್ವಾನ್‌ಗೆ ಗಾಯವಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನಿಬ್ಬರಾದ ಮೂಲ್ಕಿ ನೌಷಾದ್, ರಿಜ್ವಾನ್, ನಿರ್ಷಾದ್‌ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಬಂಟಿಂಗ್ಸ್ ಹಿನ್ನಲೆಯಲ್ಲಿ ಈ ಕೊಲೆ ನಡೆದಿದೆ ಎಂದು ದೂರು ದಾಖಲಿಸಿದವರು ಹೇಳುತ್ತಿದ್ದು, ಹೆಚ್ಚಿನ ತನಿಖೆಯಿಂದ ಹತ್ಯೆಯ ನಿಜವಾದ ಕಾರಣ ತಿಳಿದುಬರಲಿದೆ ಎಂದರು.
ಜಿಲ್ಲೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದ್ದು, 10 ಸಿ.ಆರ್.ಐ.ಪಿ, 3 ಎಸ್ಪಿ, 1 ಎ.ಎಸ್ಪಿ, 400 ಪೊಲೀಸರು ಹಾಗೂ ಇನ್ನೂ ಹೆಚ್ಚಿನ ಪೊಲೀಸರನ್ನು ನಗರದಾದ್ಯಂತ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.
ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಮಾತನಾಡಿ, ಆರೋಪಿಗಳಾದ ಪಿಂಕಿ ನವಾಜ್ ವಿರುದ್ಧ 10 ಪ್ರಕರಣ, ರಿಜ್ವಾನ್ ವಿರುದ್ಧ 2 ಪ್ರಕರಣ, ನೌಷಾದ್ ಮೇಲೆ 1 ಪ್ರಕರಣ, ನಿರ್ಷಾನ್ ಮೇಲೆ 1 ಪ್ರಕರಣ ಈ ಮೊದಲೇ ದಾಖಲಾಗಿವೆ. ಈ ಹತ್ಯೆಗೆ ನಿಜವಾದ ಕಾರಣ ತನಿಖೆಯಿಂದ ತಿಳಿದುಬರಲಿದೆ ಎಂದರು.
ಈ ಹತ್ಯೆಯ ದಿನ ನಗರದ ಗೋವಿಂದ ದಾಸ್ ಕಾಲೇಜು ಪಕ್ಕ ಒಬ್ಬರ ಮೇಲೆ ದಾಳಿ ನಡೆದು ತಲೆಗೆ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದು ಪ್ರಕರಣ ನಗರದ ಕೊಟ್ಟಾರ ಚೌಕಿ ಬಳಿ ವ್ಯಕ್ತಿಯೋರ್ವನಿಗೆ ಚೂರಿ ಇರಿತವಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದರು.
ಈ ವೇಳೆ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ, ಡಿ.ಸಿ.ಪಿ ಉಮಾಪ್ರಶಾಂತ್, ಕಾರ್ಯಾಚರಣೆಯಲ್ಲಿ ಭಾಗಿಯಾದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English