ರಾಜ್ ಕೋಟ್: ಅನಾರೋಗ್ಯ ಪೀಡಿತ ತಾಯಿ ಜಯಶ್ರೀ(64) ಎಂಬುವವರನ್ನು ಸ್ವಂತ ಮಗನೇ ಟೆರೆಸ್ ನಿಂದ ನೂಕಿ ಕೊಲೆ ಮಾಡಿದ ಅಮಾನವೀಯ, ಹೀನಾತಿಹೀನ ಘಟನೆ ಗುಜರಾತಿನ ರಾಜಕೋಟ್ ನಲ್ಲಿ ನಡೆದಿದೆ. ತಾಯಿಯನ್ನು ಟೆರೆಸ್ ನಿಂದ ನೂಕಿ ಕೊಲೆ ಮಾಡಿದ ನಂತರ, ಮನೆಯಲ್ಲಿ ಏನೂ ಆಗಿಯೇ ಇಲ್ಲ ಎಂಬಂತೆ ಕುಳಿತಿದ್ದ ಮಗ ಸಂದೀಪ್(36) ಗೆ ಅಪಾರ್ಟ್ ಮೆಂಟಿನ ಭದ್ರತಾ ಸಿಬ್ಬಂದಿ ಬಂದು, ‘ನಿಮ್ಮ ತಾಯಿ ಟೆರೆಸ್ ನಿಂದ ಬಿದ್ದಿದ್ದಾರೆ’ ಎಂಬ ಮಾಹಿತಿ ನೀಡಿದ್ದಾರೆ. ನಂತರ ಆತಂಕಗೊಂಡವನಂತೆ ಓಡಿದ ಕಾಲೇಜೊಂದರಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಆಗಿರುವ ಸಂದೀಪ್, ‘ಈ ಘಟನೆ ನಡೆದಾಗ ನಾನು ಟೆರೆಸ್ ನಲ್ಲಿ ಇರಲೇ ಇಲ್ಲ.
ಟೆರೆಸ್ ಗೆ ತೆರಳಿದ್ದ ನನ್ನ ತಾಯಿ ನೀರು ತರುವಂತೆ ನನ್ನನ್ನು ಮನೆಗೆ ಕಳಿಸಿದ್ದರು. ಆಗ ಅವರು ಆಯತಪ್ಪಿ ಬಿದ್ದಿರಬೇಕು’ ಎಂದು ಪೊಲೀಸರ ಮುಂದೆ ನಾಟಕವಾಡಿದ್ದಾನೆ. ಕೆಲವು ದಿನಗಳಿಂದ ಬ್ರೈನ್ ಹೆಮರೆಜ್ ಕಾಯಿಲೆಯಿಂದ ಬಳಲುತ್ತಿದ್ದ ತಾಯಿ ಜಯಶ್ರೀ ಅವರು ಬಾತ್ ರೂಮ್ ಕೆಲಸಗಳಿಗೂ ಮತ್ತೊಬ್ಬರ ಮೇಲೆ ಅವಲಂಬಿತರಾಗಿದ್ದರು.
ಈ ವಿಷಯವನ್ನು ತಿಳಿದ ಪೊಲೀಸರು ತಕ್ಷಣವೇ ಸಂದೀಪ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಬಾತ್ ರೂಮ್ ಗೆ ಹೋಗುವುದಕ್ಕೂ ಮತ್ತೊಬ್ಬರ ಮೇಲೆ ಅವಲಂಬಿತರಾಗುವ ವ್ಯಕ್ತಿ, ಟೆರೆಸ್ ವರೆಗೂ ಒಬ್ಬರೇ ನಡೆದುಕೊಂಡು ಹೋಗಲು ಸಾಧ್ಯವಿಲ್ಲ ಎಂಬುದನ್ನು ಅರಿತ ಪೊಲೀಸರು ತಕ್ಷಣವೇ ಅಪಾರ್ಟ್ ಮೆಂಟಿನ ಸಿಸಿಟಿವಿ ಕ್ಯಾಮೆರಾ ಫೂಟೇಜ್ ಪರೀಕ್ಷಿಸಿದ್ದಾರೆ.
ತಾಯಿಯನ್ನು ಮಗ ಬಲವಂತವಾಗಿ ಟೆರೆಸ್ ಗೆ ಕರೆದೊಯ್ಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವುದರಿಂದ ಸಂದೀಪನೇ ಕೊಲೆಗಾರ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಪೊಲೀಸರು ಅನುಮಾನ ವ್ಯಕ್ತಪಡಿಸುತ್ತಿದ್ದಂತೆಯೇ ಎದೆ ನೋವು ಎಂದು ಹೇಳಿ ಸಂದೀಪ್ ಆಸ್ಪತ್ರೆ ಸೇರಿದ್ದಾನೆ. ಆತ ಗುಣಮುಖನಾಗುತ್ತಿದ್ದಂತೆಯೇ ಬಂಧಿಸಿ, ವಿಚಾರಣೆ ನಡೆಸುವುದಾಗಿ ಪೊಲೀಸರು ಹೇಳಿದ್ದಾರೆ. ಅನಾರೋಗ್ಯಪೀಡಿತಳಾಗಿರುವ ಕಾರಣಕ್ಕೆ ಹೆತ್ತ ತಾಯಿಯನ್ನೇ ಕೊಲ್ಲುವುದು ಎಷ್ಟು ಕ್ರೌರ್ಯ? ಅನಾರೋಗ್ಯ ಪೀಡಿತ ಮಗುವನ್ನು ನಿದ್ದೆ ಬಿಟ್ಟು, ಕಣ್ಣಲ್ಲಿ ಕಣ್ಣಿಟ್ಟು ಸಾಕುವ ಅಮ್ಮಂದಿರಿಗೆ ಮಕ್ಕಳ ಕೊಡುಗೆ ಇದೇನಾ..?
Click this button or press Ctrl+G to toggle between Kannada and English