ಮಂಗಳೂರು: ತಮ್ಮ ವೈಯಕ್ತಿಕ ನೆಲೆಯಲ್ಲಿ ದೀಪಕ್ ರಾವ್ ಕುಟಂಬಕ್ಕೆ ಪರಿಹಾರದ ಚೆಕ್ ನೀಡಲು ಹೋದ ಸ್ಥಳೀಯ ಶಾಸಕ ಶಾಸಕ ಮೋಯ್ದೀನ್ ಬಾವಾ ಅವರನ್ನು ಕುಟುಂಬಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಮಾತ್ರವಲ್ಲ ದೀಪಕ್ ರಾವ್ ಕಟುಂಬ ಬಾವಾ ಅವರ ಚೆಕ್ ಸ್ಥೀಕರಿಸಲು ನಿರಾಕರಿಸಿ ವಾಪಸ್ ಕಳುಹಿಸಿದೆ.
ಸುರತ್ಕಲ್ ನ ಕಾಟಿಪಳ್ಳದಲ್ಲಿ ಬರ್ಬರವಾಗಿ ಹತ್ಯೆಗೊಳಗಾದ ದೀಪಕ್ ರಾವ್ ಕುಟುಂಬಕ್ಕೆ ವೈಯಕ್ತಿಕ ನೆಲೆಯಲ್ಲಿ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮೊಯ್ದಿನ್ ಬಾವಾ ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ಘೋಷಿಸಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳನ್ನು ಕರೆದು ಕೊಂಡು ದೀಪಕ್ ರಾವ್ ಅವರ ಮನೆಗೆ ಮೋಯ್ದೀನ್ ಬಾವಾ ತೆರಳಿದ್ದರು. ಚೆಕ್ ಹಿಡಿದುಕೊಂಡು ಹೋಗಿದ್ದ ಶಾಸಕ ಮೊಯಿದೀನ್ ಬಾವಾ ಅವರಿಗೆ ದೀಪಕ್ ರಾವ್ ಕುಟುಂಬ ಆರಂಭದಲ್ಲೇ ವಿರೋಧ ವ್ಯಕ್ತಪಡಿಸಿದೆ. “ನಿನ್ನೆ ಮನೆ ಕಡೆಗೆ ತಲೆಹಾಕದ ನೀವು ಇಂದೇಕೆ ಬಂದಿದ್ದೀರಿ?” ಎಂದು ಪ್ರಶ್ನಿಸಿದೆ. ಬಾವಾ ಅವರೊಂದಿಗೆ ಸ್ಥಳೀಯ ಕಾರ್ಪೋರೇಟರ್ ಪ್ರತಿಮಾ ಕುಳಾಯಿ, ವಿಧಾನ ಪರಿಷತ್ ಮುಖ್ಯಸಚೇತಕ ಐವನ್ ಡಿಸೋಜಾ ಕೂಡ ತೆರಳಿದ್ದರು. ಅವರನ್ನು ಸ್ಥಳೀಯ ನಿವಾಸಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.
ಪಿಎಫ್ಐ ಕಾರ್ಯಕರ್ತರ ಜತೆ ಶಾಸಕರಿರುವ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವುದನ್ನು ಪ್ರಸ್ಥಾಪಿಸಿದ ಮನೆ ಮಂದಿ, “ದೀಪಕ್ ಕೊಲೆಗಾರರೊಂದಿಗೆ ಶಾಸಕರ ಸಂಬಂಧವೇನು?” ಎನ್ನುವುದನ್ನು ಇದೇ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ. ದೀಪಕ್ ಮೃತದೇಹವನ್ನು ಮನೆಯವರಿಗೂ ತಿಳಿಸದೆ ಆಸ್ಪತ್ರೆಯಿಂದ ಪೊಲೀಸರೇ ಅನಾಥ ಶವದ ರೀತಿಯಲ್ಲಿ ಕರೆ ತಂದಿರುವ ಹಿಂದೆಯೂ ಶಾಸಕರ ಕೈವಾಡವಿದೆ ಎಂದು ನೇರವಾಗಿ ಆರೋಪಿಸಿದ್ದಾರೆ.
ಶಾಸಕರ ಜತೆಗೆ ಸ್ಥಳೀಯ ಕಾರ್ಪೋರೇಟರ್ ಆಗಿರುವ ಪ್ರತಿಭಾ ಕುಳಾಯಿ ಅವರನ್ನೂ ತರಾಟೆಗೆ ತೆಗೆದುಕೊಂಡ ಸ್ಥಳೀಯರು ಅಂತ್ಯಸಂಸ್ಕಾರದ ವೇಳೆ ಬರಲಿಕ್ಕಾಗದವರು ಇಂದು ಬಂದು ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆಯಿಲ್ಲ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಬಾವಾ ಅವರು ಎಷ್ಟೇ ಸಮಜಾಯಿಷಿ ನೀಡಿದರೂ, ಅತ್ತರೂ ಅದಕ್ಕೊಪ್ಪದ ದೀಪಕ್ ಕುಟುಂಬ ಶಾಸಕರು ತನ್ನ ವೈಯಕ್ತಿಕ ನೆಲೆಯಲ್ಲಿ ತಂದ 5 ಲಕ್ಷ ರೂಪಾಯಿಗಳ ಚೆಕ್ಕನ್ನು ಸ್ವೀಕರಿಸಲು ನಿರಾಕರಿಸಿತು. ದೀಪಕ್ ತಮ್ಮ ಸತೀಶ್ ತಮಗೆ ಮಾತು ಬರದಿದ್ದರೂ ತನ್ನ ಆಕ್ರೋಶವನ್ನು ಶಾಸಕರಿಗೆ ಮನವರಿಕೆ ಮಾಡಿಕೊಟ್ಟರು. ಮಾಧ್ಯಮಗಳ ಮುಂದೆಯೇ ಈ ಎಲ್ಲಾ ಘಟನೆ ನಡೆದಿರುವುದರಿಂದ ವಿಚಲಿತರಾದ ಶಾಸಕ ಮೋಯ್ದಿನ್ ಬಾವಾ ಮತ್ತು ಇತರ ಜನಪ್ರತಿನಿಧಿಗಳ ತಂಡ ಮನೆಯಿಂದ ಹೊರ ನಡೆಯಿತು.
ಮನೆಯಿಂದ ಹೊರ ಬಂದ ಶಾಸಕ ಬಾವಾ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ದೀಪಕ್ ರಾವ್ ಕುಟುಂಬ ತನ್ನ ವೈಯಕ್ತಿಕ ಧನ ಸಹಾಯವನ್ನು ಸ್ವೀಕರಿಸದಿರಲು ಹಿಂದೂ ಸಂಘಟನೆಗಳೇ ಕಾರಣ ಎಂದು ಆರೋಪಿಸಿದ್ದಾರೆ.
Click this button or press Ctrl+G to toggle between Kannada and English