ಮಂಗಳೂರು: ಅಖೀಲ ಭಾರತ ಬಿಲ್ಲವರ ಯೂನಿಯನ್, ಬಿಲ್ಲವರ ಮಹಿಳಾ ಸಂಘ ಹಾಗೂ ಕುದ್ರೋಳಿಯ ನಾರಾಯಣ ಗುರು ವಿದ್ಯಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ರವಿವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಅವರ 157ನೇ ಜನ್ಮ ದಿನಾಚರಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ನಾರಾಯಣ ಗುರು ಅವರ ಜನ್ಮದಿನವನ್ನು ಆಚರಿಸುವುದರ ಜತೆಗೆ ಅವರ ಆದರ್ಶಗಳನ್ನೂ ಪಾಲಿಸಬೇಕು. ಬಿಲ್ಲವ ಸಮಾಜದ ಅಭಿವೃದ್ಧಿಗೆ ಸರಕಾರ ಅನೇಕ ಸವಲತ್ತುಗಳನ್ನು ಒದಗಿಸುತ್ತಿದೆ, ನಗರದ ಕುಂಜತ್ತಬೈಲ್‌ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಿಲ್ಲವ ವಿದ್ಯಾರ್ಥಿ ನಿಲಯಕ್ಕೆ 2 ಕೋ. ರೂ. ಅನುದಾನ ನೀಡಲು ಸರಕಾರ ಬದ್ಧವಿದೆ ಎಂದು ಭರವಸೆಯಿತ್ತರು. ಬಿ. ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಬಿಲ್ಲವ ವಿದ್ಯಾರ್ಥಿ ನಿಲಯಕ್ಕೆ 2 ಎಕರೆ ಜಾಗ ಹಾಗೂ 2 ಕೋ. ರೂ. ಅನುದಾನ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಈಗಾಗಲೇ 1 ಎಕರೆ ಜಮೀನು ಒದಗಿಸಲಾಗಿದೆ. ಸೆ. 14ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಜಾಗ ಮಂಜೂರುಗೊಳಿಸುವುದಾಗಿ ತಿಳಿಸಿದರು.
ಅ. ಭಾ. ಬಿಲ್ಲವರ ಯೂನಿಯನ್ ಮತ್ತು ನಾರಾಯಣ ಗುರು ವಿದ್ಯಾಸಂಸ್ಥೆಗಳ ಅಧ್ಯಕ್ಷ ನವೀನ್ ಚಂದ್ರ ಡಿ. ಸುವರ್ಣ ಅವರು ಅಧ್ಯಕ್ಷತೆ ವಹಿಸಿದ್ದರು. ಆಕಾಶವಾಣಿ ಉದ್ಘೋಷಕ ಮುದ್ದು ಮೂಡುಬೆಳ್ಳೆ ಅವರು ಗುರು ಸಂದೇಶ ನೀಡಿದರು.
ಬಿಲ್ಲವರ ಮಹಿಳಾ ಸಂಘದ ಅಧ್ಯಕ್ಷೆ ಸುಮಲತಾ ಎನ್. ಸುವರ್ಣ, ಯೂನಿಯನ್ ಪದಾಧಿಕಾರಿಗಳಾದ ವಸಂತ ಕುಮಾರ್, ಕೆ. ಲೋಕನಾಥ್, ದೇರಣ್ಣ, ಕೆ. ಟಿ. ಸುವರ್ಣ ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English