ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಕಾಸರಗೋಡು ಚಿನ್ನಾ ಅವರು ಸೋಮವಾರ ಇಲ್ಲಿನ ಲಾಲ್‌ಬಾಗ್‌ನ ಕೊಂಕಣಿ ಅಕಾಡೆಮಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ವಹಿಸಿಕೊಂಡರು.
ಕಾರ್ಯಕ್ರಮವನ್ನು ಮಂಗಳೂರು ಮೇಯರ್ ಕೆ. ಪ್ರವೀಣ್, ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ನೇಮಕಾತಿ ಆದೇಶದ ಪ್ರತಿಯನ್ನು ರಿಜಿಸ್ಟಾರ್ ಡಾ| ದೇವದಾಸ್ ಪೈ ಅವರು ಚಿನ್ನಾ ಕಾಸರಗೋಡು ಅವರಿಗೆ ಹಸ್ತಾಂತರಿಸಿದರು. ಚಿನ್ನಾ ಅವರು ಸಹಿ ಮಾಡುವ ಮೂಲಕ ಅಧಿಕಾರ ಸ್ವೀಕರಿಸಿದರು. ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷ ಕುಂದಾಪುರ ನಾರಾಯಣ ಖಾರ್ವಿ, ಮಾಜಿ ಅಧ್ಯಕ್ಷ ಎರಿಕ್ ಒಝೇರಿಯೊ, ಕೊಂಕಣಿ ಪ್ರಚಾರ ಸಂಚಾಲನದ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ ಅವರು ವೇದಿಕೆಯಲ್ಲಿದ್ದರು.
ಕೊಂಕಣಿ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಏಳಿಗೆಗೆ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ನೂತನ ಅಧ್ಯಕ್ಷ ಚಿನ್ನಾ ಕಾಸರಗೋಡು ಅವರು ಈ ಸಂದರ್ಭದಲ್ಲಿ ತಿಳಿಸಿದರು. ತನ್ನನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಕರ್ನಾಟಕ ಸರಕಾರ ಮತ್ತು ಕೊಂಕಣಿ ಜನತೆಗೆ ಅಭಿನಂದನೆ ಸಲ್ಲಿಸಿದ ಅವರು ಕೊಂಕಣಿ ದೊಡ್ಡ ಭಾಷೆ. ಈ ಭಾಷೆಯನ್ನು ಮಾತನಾಡುವ ಹಲವು ಸಮುದಾಯಗಳಿವೆ. ಪ್ರತೀ 50 ಕಿಲೋ ಮೀಟರ್ ದೂರ ಕ್ರಮಿಸಿದಂತೆ ಈ ಭಾಷೆಯ ಶೈಲಿಯಲ್ಲಿ ಬದಲಾವಣೆ ಕಂಡು ಬರುತ್ತಿದೆ. ಆದರೆ ಈ ಭಾಷೆಯ ತಾಯಿ ಒಬ್ಬರೇ ಆಗಿರುತ್ತಾರೆ ಎಂದರು.
ಮುಂದಿನ 3 ವರ್ಷಗಳ ತನ್ನ ಅಧಿಕಾರಾವಧಿಯಲ್ಲಿ ಕೊಂಕಣಿಯನ್ನು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ತಲುಪಿಸುವ ದಿಶೆಯಲ್ಲಿ ಯಾವುದೇ ಗೊಂದಲ ಅಥವಾ ವಿವಾದಕ್ಕೆ ಅಶಕಾಶವಾಗದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಿಸ್ತು ಬದ್ಧವಾಗಿ ಕಾರ್ಯನಿರ್ವಹಿಸುತ್ತೇನೆ. ಅಕಾಡೆಮಿಯ ಕಚೇರಿಯಲ್ಲಿರುವ ಪುಸ್ತಕಗಳನ್ನು ಜನರು ಓದ ಬೇಕಾಗಿರುವುದರಿಂದ ಅವುಗಳನ್ನು ಶಾಲೆ, ಕಾಲೇಜು, ಸಂಘ- ಸಂಸ್ಥೆಗಳಿಗೆ ವಿತರಿಸುವ ಉದ್ದೇಶವಿದೆ ಎಂದು ಹೇಳಿದರು.
ಮಾಜಿ ಅಧ್ಯಕ್ಷ ಕುಂದಾಪುರ ನಾರಾಯಣ ಖಾರ್ವಿ ಮಾತನಾಡಿ 2008 ರಲ್ಲಿ ತಾನು ಅಧಿಕಾರ ಸ್ವೀಕರಿಸಿದ ಮೊದಲ 6 ತಿಂಗಳಲ್ಲಿ ಸದಸ್ಯರ ನೇಮಕಾತಿ ಆಗದ ಕಾರಣ ಯಾವುದೇ ಕೆಲಸ ಮಾಡಲು ಸಾಧ್ಯವಾಗಿಲ್ಲ. 30 ತಿಂಗಳಲ್ಲಿ 400 ಕಾರ್ಯಕ್ರಮಗಳನ್ನು ತಾನು ನಡೆಸಿದ್ದೇನೆ. ಕೊನೆಯ ಕಾರ್ಯಕ್ರಮ ಗುಜರಾತ್‌ನಲ್ಲಿ ನಡೆದಿದೆ. ಈಗ ಅಕಾಡೆಮಿಗೆ ಕೊಂಕಣಿ ಭಾಷಿಗರೇ ಆದ ರಿಜಿಸ್ಟ್ರಾರ್ ಲಭಿಸಿದ್ದಾರೆ. ಕೊಂಕಣಿ ಡಿಎಡ್ ಮತ್ತು ಬಿಎಡ್ ಕೋರ್ಸಿಗೆ ಸಂಬಂಧಿಸಿ ಸಿಲೆಬಸ್ ತಯಾರಿಸಲಾಗಿದೆ. ಹೆತ್ತವರು ತಮ್ಮ ಮಕ್ಕಳಿಗೆ ಶಾಲೆಯಲ್ಲಿ ಕೊಂಕಣಿಯನ್ನು ಕಲಿಸುವ ಸಂಕಲ್ಪ ಮಾಡಿದರೆ ಕೊಂಕಣಿ ಭಾಷೆಯ ಉಳಿವು ಸಾಧ್ಯ ಎಂದು ಹೇಳಿದರು.
ಎರಿಕ್ ಒಝೇರಿಯೊ ಅವರು ಮಾತನಾಡಿ ನೂತನ ಅಧ್ಯಕ್ಷರು ಕೊಂಕಣಿ ಭಾಷೆಯ ಲಿಪಿಗೆ ಸಂಬಂಧಿಸಿ ಯಾವುದೇ ಒತ್ತಡ/ ವಿವಾದಕ್ಕೆ ಒಳಗಾಗದೆ ಯಥಾ ಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗ ಬೇಕು ಎಂದು ಸಲಹೆ ಮಾಡಿದರು. ಕಲಾಂಗಣ್‌ನ್ನು ಅಕಾಡೆಮಿಯ ಯಾವುದೇ ಕಾರ್ಯಕ್ರಮಕ್ಕೆ ಉಚಿತವಾಗಿ ನೀಡಲಾಗುವುದೆಂದು ಭರವಸೆ ಇತ್ತರು.
ಮಾಜಿ ಅಧ್ಯಕ್ಷರಾದ ಎರಿಕ್ ಒಝಾರಿಯೋ ಮತ್ತು ಕುಂದಾಪುರ ನಾರಾಯಣ ಖಾರ್ವಿ ಅವರನ್ನು ನೂತನ ಅಧ್ಯಕ್ಷರು ಸಮ್ಮಾನಿಸಿದರು.ಚಿನ್ನಾ ಕಾಸರಗೋಡು ಅಧ್ಯಕ್ಷತೆಯಲ್ಲಿ ಅಕಾಡೆಮಿಯು ಚೆನ್ನಾಗಿ ಕಾರ್ಯನಿರ್ವಹಿಸಲಿ ಎಂದು ಮೇಯರ್ ಅವರು ಶುಭ ಹಾರೈಸಿದರು.
“ರಾಕ್ಣೋ ಕೊಂಕಣಿ ವಾರ ಪತ್ರಿಕೆಯ ಸಂಪಾದಕ ಫಾ| ಫ್ರಾನ್ಸಿಸ್ ರೊಡ್ರಿಗಸ್, ಕೊಂಕಣಿ ಭಾಷಾ ಮಂಡಲದ ಗೀತಾ ಸಿ. ಕಿಣಿ, ಎಂ. ರಘುನಾಥ ಶೇಟ್, ವಸಂತಿ ಆರ್.ನಾಯಕ್, ನಾಮದೇವ ಶೆಣೈ, ಪುಂಡಲೀಕ ಮರಾಠೆ, ಪಾಂಡುರಂಗ ನಾಯಕ್, ದೀಪಾಲಿ ಕಂಬದಕೋಣೆ, ಐವನ್ ಡಿ’ಸೋಜಾ ಮುಂತಾದವರು ಉಪಸ್ಥಿತರಿದ್ದರು. ರಿಜಿಸ್ಟ್ರಾರ್ ಡಾ| ದೇವದಾಸ್ ಪೈ ಸ್ವಾಗತಿಸಿ ವಂದಿಸಿದರು.
Click this button or press Ctrl+G to toggle between Kannada and English