ಮಂಗಳೂರು: ದೀಪಕ್ ರಾವ್, ಅಬ್ದುಲ್ ಬಷೀರ್ ಕೊಲೆ ಪ್ರಕರಣ ಸೇರಿದಂತೆ 2000 ಇಸವಿಯ ನಂತರ ನಡೆದ ಎಲ್ಲಾ ಕೋಮು ದ್ವೇಷ, ಪ್ರತೀಕಾರದ ಕೊಲೆ ಪ್ರಕರಣಗಳನ್ನು ಮರು ತನಿಖೆಗೆ ಒಳಪಡಿಸಬೇಕು. ಅದಕ್ಕಾಗಿ “ವಿಶೇಷ ತನಿಖಾ ತಂಡ”ವನ್ನು ರಚಿಸಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ.
ಸುರತ್ಕಲ್ ಡಿವೈಎಫ್ಐ ಘಟಕದ ವತಿಯಿಂದ ದೀಪಕ್ ರಾವ್ ಮತ್ತು ಅಬ್ದುಲ್ ಬಷೀರ್ ಗೌರವಾರ್ಥ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಈ ಒತ್ತಾಯ ಮಾಡಿದ್ದಾರೆ. “ದೀಪಕ್ ರಾವ್, ಅಬ್ದುಲ್ ಬಶೀರ್ ಕೊಲೆ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯ ಜನತೆಯಲ್ಲಿ ಭೀತಿಯ ಅಲೆಯನ್ನು ಎಬ್ಬಿಸಿದೆ.
ದೀಪಕ್ ಕೊಲೆಗೆ ಸಂಬಂಧಿಸಿ ಹಲವು ಊಹಾಪೂಹಗಳು ಹಬ್ಬುತ್ತಿದ್ದು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ದೀಪಕ್ ಕೊಲೆಯ ಹಿಂದೆ ಬಿಜೆಪಿ ಕಾರ್ಪೊರೇಟರ್ ಪಾತ್ರದ ಕುರಿತು ಆರೋಪಿದ್ದಾರೆ. ಜತೆಗೆ ಈ ಹಿಂದಿನ ಮತೀಯ ದ್ವೇಷದ ಕೊಲೆಗಳನ್ನು ಸರಿಯಾಗಿ ತನಿಖೆ ಮಾಡದೆ ಇರುವ ಕುರಿತು ಸಾರ್ವಜನಿಕರಲ್ಲಿ ಗಂಭೀರ ಅನುಮಾನಗಳಿದ್ದು, ಇದರಿಂದ ಸೂತ್ರಧಾರರು ತಪ್ಪಿಸಿಕೊಂಡು ಸರಣಿ ಕೊಲೆಗಳು ನಡೆಯುವಂತಾಗಿದೆ,” ಎಂದು ಕಾಟಿಪಳ್ಳ ಹೇಳಿದ್ದಾರೆ. “ಜಿಲ್ಲೆಯಲ್ಲಿ ಕೋಮು ಸಂಬಂಧಿ ದ್ವೇಷ, ಪ್ರತೀಕಾರಕ್ಕೆ ಕಳೆದ ಒಂದೂವರೆ ದಶಕದಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಮಂದಿ ಕೊಲೆಯಾಗಿದ್ದಾರೆ.
ಹತ್ತಕ್ಕೂ ಹೆಚ್ಚು ಕೊಲೆಯತ್ನ ಪ್ರಕರಣಗಳು ನಡೆದಿದ್ದು, ಅಪರಾಧಿಗಳು ಪತ್ತೆಯಾಗದೆ ಉಳಿದಿದ್ದಾರೆ. ಈ ಕೊಲೆ, ಪ್ರತಿಕಾರದ ಕೊಲೆಗಳಿಂದ ಜಿಲ್ಲೆಯ ಸಾಮಾಜಿಕ ಸ್ಥಿತಿ ಗಂಭೀರವಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಜಿಲ್ಲೆ ಸದಾ ಉದ್ವಿಗ್ನವಾಗಿರುತ್ತದೆ,” ಎಂದು ಮುನೀರ್ ಕಾಟಿಪಳ್ಳ ಆತಂಕ ವ್ಯಕ್ತಪಡಿಸಿದ್ದಾರೆ. “ಇಂತಹ ಸರಣಿ ಕೊಲೆಗಳನ್ನು ತಡೆಗಟ್ಟುವ ಪ್ರಯತ್ನಗಳು ವಿಫಲವಾಗುತ್ತಿವೆ. ಕೋಮುದ್ವೇಷ ಹಿನ್ನಲೆಯ ಕೊಲೆಗಳಲ್ಲಿ ಯಾವ ಪ್ರಕರಣದಲ್ಲೂ ಆರೋಪಿಗಳಿಗೆ ಶಿಕ್ಷೆಯಾಗದಿರುವುದು ಪೊಲೀಸರ ತನಿಖಾ ವೈಫಲ್ಯವನ್ನು ಎತ್ತಿತೋರಿಸುತ್ತದೆ.
ಬೆಂಜನ ಪದವು ರಾಜೇಶ್ ಪೂಜಾರಿ, ಪೊಳಲಿ ಅನಂತು ಕೊಲೆ ಪ್ರಕರಣದಲ್ಲಿ ಒತ್ತಡವನ್ನು ಭರಿಸಲಾಗದೆ ಅಮಾಯಕರನ್ನು ಬಂಧಿಸಿ ಆರೋಪ ಪಟ್ಟಿ ಹೊರಿಸಿರುವುದು ನಡೆದಿದೆ.
ಈ ರೀತಿಯ ಕೊಲೆಗಳನ್ನು ನಿಷ್ಪಕ್ಷವಾಗಿ, ರಾಜಕೀಯ ಪ್ರಭಾವಕ್ಕೆ ಒಳಗಾಗದೆ ತನಿಖೆ ಮಾಡಿದ್ದರೆ ಕರಾವಳಿಯ ಸ್ಥಿತಿ ಇಷ್ಟು ಹದಗೆಡುತ್ತಿರಲಿಲ್ಲ. ನಡು ಬೀದಿಯಲ್ಲಿ ಅಮಾಯಕರು ಸಾಯುತ್ತಿರಲಿಲ್ಲ,” ಎಂದು ಮುನೀರ್ ಕಾಟಿಪಳ್ಳ ಅಭಿಪ್ರಾಯಪಟ್ಟಿದ್ದಾರೆ. “ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪ್ರತಿಯೊಬ್ಬರು ಇಂತಹ ಕೊಲೆಗಳನ್ನು ಮಟ್ಟ ಹಾಕುವ ಮಾತಾಡುತ್ತಿದ್ದಾರೆ. ಆದರೆ ಕೊಲೆಗಳ ಹಿಂದಿರುವ ಪ್ರಭಾವಿಗಳ ಬಂಧನವಾಗದೆ ಈ ಸರಣಿ ನಿಲ್ಲುವುದು ಅಸಾಧ್ಯ.
ಕರಾವಳಿಯಲ್ಲಿ ಕೋಮು ಘರ್ಷಣೆಯ ವಿರುದ್ದ ಮುಖ್ಯಮಂತ್ರಿಗಳ ಹೇಳಿಕೆ ಪ್ರಾಮಾಣಿಕವಾದದ್ದೇ ಆದರೆ 2000 ಇಸವಿಯಿಂದ ಈಚೆಗೆ ನಡೆದ ಮತೀಯ ದ್ವೇಷದ ಹಿನ್ನಲೆಯ ಎಲ್ಲಾ ಕೊಲೆಗಳನ್ನು ಮರು ತನಿಖೆಗೆ ಒಳಪಡಿಸಲಿ, ಅದಕ್ಕಾಗಿ ದಕ್ಷ ಅಧಿಕಾರಿಗಳನ್ನೊಳಗೊಂಡ ‘ವಿಶೇಷ ತನಿಖಾ ತಂಡ’ ರಚಿಸಲಿ,” ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.
Click this button or press Ctrl+G to toggle between Kannada and English