ಮಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ವಿಪಕ್ಷದವರು ರಾಜ್ಯ ಸರಕಾರದ ಎಲ್ಲಾ ಜನಪ್ರೀಯ ಯೋಜನೆಗಳು ನಮ್ಮದು ಎನ್ನುತ್ತಿದ್ದಾರೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್ ವ್ಯಂಗ್ಯವಾಡಿದರು.
ಮಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಬರುವಾಗ ವಿಪಕ್ಷದವರು ರಾಜ್ಯ ಸರಕಾರದ ಎಲ್ಲಾ ಜನಪ್ರಿಯ ಯೋಜನೆಗಳು ನಮ್ಮದು ಎನ್ನುತ್ತಿದ್ದಾರೆ. ಅದ್ಯಾಕೆ ಗುಜರಾತ್ ಸೇರಿ ಬಿಜೆಪಿ ಆಡಳಿತದ ರಾಜ್ಯದಲ್ಲಿ ಅನ್ನಭಾಗ್ಯ ಈವರೆಗೆ ಜಾರಿಗೆ ತಂದಿಲ್ಲ.
ಬಿಜೆಪಿಯವರು ತಾವು ಅಧಿಕಾರದಲ್ಲಿದ್ದಾಗ ಏನೂ ಕೆಲಸ ಮಾಡದೇ ಈಗ ಎಲ್ಲವೂ ನಮ್ಮದು ಎನ್ನುವುದು ಎಷ್ಟು ಸರಿ? ಎಂದು ಅವರು ಪ್ರಶ್ನಿಸಿದರು. ಮಂಗಳೂರು ಹೊರವಲಯದ ಕಾಟಿಪಳ್ಳದಲ್ಲಿ ನಡೆದ ದೀಪಕ್ ರಾವ್ ಪ್ರಕರಣದಲ್ಲಿ ಬಂಧಿತ ಆರೋಪಿಗಳು ಸುಪಾರಿ ಕಿಲ್ಲರ್ಸ್, ಹಾಗಾದರೆ ದೀಪಕ್ ರಾವ್ ಹತ್ಯೆಗೆ ಸುಪಾರಿ ಕೊಟ್ಟವರಾರು?.
ಈ ಬಗ್ಗೆ ಸಮಗ್ರ ತನಿಖೆಯಾಗಬೇಕಿದೆ ಸಾವಿನ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯ ಇಲ್ಲ. ದೀಪಕ್ ರಾವ್ ಪ್ರಕರಣದ ಆರೋಪಿಗಳ ಸಂಬಂಧಿಕರು ಯಾರ ಜೊತೆ ಬಿಸಿನೆಸ್ ಮಾಡುತ್ತಿದ್ದಾರೆ. ಅವರಿಗೆ ಸುಪಾರಿ ಕೊಟ್ಟವರಾರು? ಈ ಹತ್ಯೆ ಹಿಂದಿರುವ ಕೈವಾಡ ಯಾರದ್ದು ಈ ಎಲ್ಲಾ ವಿಚಾರಗಳ ಬಗ್ಗೆ ತನಿಖೆಯಾಗಬೇಕಿದೆ ಎಂದರು.
ದೀಪಕ್ ರಾವ್ ಹತ್ಯೆ ಪ್ರಕರಣದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರಸ್ಥಾಪಿಸಿದ ಅವರು ದೀಪಕ್ ರಾವ್ ಪ್ರಕರಣದ ಮಾಹಿತಿ ಇದ್ದಲ್ಲಿ ಕುಮಾರ ಸ್ವಾಮಿ ಅವರು ಪೊಲೀಸರಿಗೆ ನೀಡಲಿ ಎಂದು ಅವರು ಹೇಳಿದರು. ಕಾಂಗ್ರೆಸ್ ಸಮಾವೇಶಕ್ಕೆ ಕೊಲ್ಲೂರಿನಿಂದ ಊಟ ವಿವಾದ ವಿಚಾರವಾಗಿ ಮಾತನಾಡಿ, ಅವರು ನಿನ್ನೆ ಬೈಂದೂರಿನಲ್ಲಿ ನಡೆದದ್ದು ಸರ್ಕಾರಿ ಕಾರ್ಯಕ್ರಮ.
ಉಡುಪಿ ಜಿಲ್ಲಾಧಿಕಾರಿ ಊಟದ ವ್ಯವಸ್ಥೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಬಡವರು, ಸಾರ್ವಜನಿಕರು ಊಟ ಮಾಡಿದ್ದಾರೆ. ಅನ್ನದ ಬೆಲೆ ಗೊತ್ತಿದ್ದವರು ಟೀಕೆ ಮಾಡೋದಿಲ್ಲ ಎಂದು ಅವರು ಕಿಡಿಕಾರಿದರು.
Click this button or press Ctrl+G to toggle between Kannada and English