ಪ್ರೋಟೀನ್ ಇಲ್ಲದಿದ್ದರೆ ಕಣ್ಣೀರೂ ಇಲ್ಲ: ನೊಬೆಲ್ ವಿಜ್ಞಾನಿ ಡಾ. ಅಡಾ ಯೊನಾಥ್

9:05 PM, Tuesday, January 9th, 2018
Share
1 Star2 Stars3 Stars4 Stars5 Stars
(No Ratings Yet)
Loading...

Ada-Yonath ಮಂಗಳೂರು: ಜೀವಕೋಶಗಳಲ್ಲಿರುವ ರೈಬೋಸೋಮುಗಳು ಹಸಿವೆ, ತೀವ್ರ ಚಳಿ ಇತ್ಯಾದಿ ಒತ್ತಡದ ಅವಧಿಯಲ್ಲಿ ಶಿಸ್ತುಬದ್ಧವಾಗಿ ಕೋಶಗಳ ಒಳಭಾಗದಲ್ಲಿ ಮುದುಡಿ ಸೇರಿಕೊಂಡು ಸ್ಥಿರವಾಗಿರುತ್ತವೆ ಎಂದು 2009 ನೇ ಸಾಲಿನಲ್ಲಿ ರಸಾಯನ ಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಇಸ್ರೇಲಿನ ಡಾ. ಅಡಾ. ಇ. ಯೊನಾಥ್ ಹೇಳಿದ್ದಾರೆ.

ಮಂಗಳೂರಿಗೆ ಸಮೀಪದ ಅಡ್ಯಾರಿನ ಸಹ್ಯಾದ್ರಿ ಕಾಲೇಜಿನಲ್ಲಿ ಆಯೋಜನೆಗೊಂಡಿರುವ 5 ದಿನಗಳ ಸಹ್ಯಾದ್ರಿ ಸಮಾವೇಶದಲ್ಲಿ ಮಂಗಳವಾರದಂದು ತಮ್ಮ ಸಂಶೋಧನೆಯಾದ ರೈಬೋಸೋಮುಗಳ ಕುರಿತಂತೆ ಉಪನ್ಯಾಸ ನೀಡಿದ ಡಾ. ಅಡಾ, ಎಕ್ಸ್ ರೇ ಗಳಿಂದ ರೈಬೋಸೋಮುಗಳಿಗೆ ಹಾನಿಯಾಗುತ್ತದೆ, ಅದೇ ರೀತಿ ಆಂಟಿ ಬಯೋಟಿಕ್ ಗಳೂ ಅವುಗಳನ್ನು ಘಾಸಿ ಮಾಡುತ್ತವೆ ಎಂದರು. ಉತ್ತರ ದ್ರುವದಲ್ಲಿ ವಾಸಿಸುವ ಬಿಳಿ ಕರಡಿಗಳು ಚಳಿಗಾಲದಲ್ಲಿ 6 ತಿಂಗಳುಗಳ ಕಾಲ ಧೀರ್ಘ ನಿದ್ರೆಗೆ ಹೋಗುತ್ತವೆ. ಈ ಅವಧಿಯಲ್ಲಿ ಅವುಗಳು ಆಹಾರ ಸೇವಿಸುವುದಿಲ್ಲ. ಆಗ ಅವುಗಳ ಜೀವಕೋಶಗಳ ರೈಬೋಸೋಮುಗಳು ಕೋಶದ ಒಳಭಾಗದಲ್ಲಿ ಸೇರಿಕೊಂಡು ಹರಳುಗಟ್ಟುತ್ತವೆ ಮತ್ತು ಸ್ಥಿರವಾಗಿರುತ್ತವೆ. ಇಲ್ಲಿ ಆ ಪ್ರಾಣಿಗಳು ಅನುಭವಿಸುವ ಕಾಲಮಾನದ ಒತ್ತಡವಾದ ತೀವ್ರ ಚಳಿಯು ನಿಗದಿತ ಮತ್ತು ನಿಯಮಿತ ಅವಧಿಯಲ್ಲಿ ರೈಬೋಸೋಮುಗಳು ಕೋಶದ ಒಳಭಾಗದಲ್ಲಿ ಸ್ಥಿರವಾಗಿ ಮುದುಡಿಕೊಂಡಿರುವಂತೆ ಮಾಡುತ್ತದೆ, ಆ ಪ್ರ್ರಾಣಿಗಳು ನಿದ್ದೆಯಿಂದೆದ್ದ ಬಳಿಕ ರೈಬೋಸೋಮುಗಳು ಮತ್ತೆ ಕ್ರಿಯಾಶೀಲವಾಗಿ ಪ್ರೊಟೀನುಗಳನ್ನು ತಯಾರಿಸುತ್ತವೆ ಎಂದರು.

ಸ್ಕೂಟರ್ ಅಪಘಾತ ಮೂಡಿಸಿದ ಆಸಕ್ತಿ:
ಸ್ಕೂಟರ್ ಅಪಘಾತದಲ್ಲಿ ಬಿದ್ದು ತಮ್ಮ ತಲೆಗೆ ಪೆಟ್ಟಾಯಿತು. ಅ ಕಾಲದಲ್ಲಿ ಹೆಲ್ಮೆಟುಗಳು ಇರಲಿಲ್ಲ. ಇದರಿಂದಾಗಿ ತಾವು ಹಲವು ತಿಂಗಳುಗಳ ಕಾಲ ಮನೆಯಲ್ಲಿ ಉಳಿಯಬೇಕಾಯಿತು. ಆ ಸಂಧರ್ಭದಲ್ಲಿ ಉತ್ತರ ದ್ರುವದ ಬಿಳಿ ಕರಡಿಗಳ ಕುರಿತಂತೆ ಓದಿದೆ. ಅಲ್ಲಿಯವರೆಗೂ ನನಗೆ ಅವುಗಳ ಬಗ್ಗೆ ಆಸಕ್ತಿ ಇರಲಿಲ್ಲ. ಬಳಿಕ ಆರೋಗ್ಯ ಸರಿಯಾದ ನಂತರ ಈ ಕರಡಿಗಳು ಆರು ತಿಂಗಳು ಕಾಲ ಆಹಾರವಿಲ್ಲದೆ, ಪ್ರೊಟೀನುಗಳ ತಯಾರಿಕೆಯನ್ನು ಹೇಗೆ ಸ್ಥಗಿತಗೊಳಿಸುತ್ತವೆ ಎಂಬ ನಿಟ್ಟಿನಲ್ಲಿ ಸಂಶೋಧನೆ ಕೈಗೆತ್ತಿಕೊಂಡೆ ಎಂದ ಡಾ. ಅಡಾ ತಾವು ಬಿಳಿ ಕರಡಿಗಳ ಕುರಿತು ಮಾಹಿತಿ ಸಂಗ್ರಹಕ್ಕೆ ಕಾರಣವಾದ ಘಟನೆಯನ್ನು ಸ್ಮರಿಸಿಕೊಂಡರು.

ತೀರಾ ಪ್ರತಿಕೂಲ ಪರಿಸ್ಥಿತಿಗಳಲ್ಲು ಜೀವಿಗಳಿರುತ್ತವೆ. ಮೃತ ಸಮುದ್ರದಲ್ಲೂ ಬ್ಯಾಕ್ಟ್ರೀರಿಯಾಗಳು ಪತ್ತೆಯಾಗಿವೆ. ರೈಬೋ ಸೋಮುಗಳು ಪ್ರೊಟೀನು ತಯಾರಿಸುವ ಕಾರ್ಖಾನೆಗಳಂತೆ, ಅವುಗಳು ವಂಶವಾಹಿಗಳಾದ ಜೀನ್ ಗಳಲ್ಲಿಯ ಮಾಹಿತಿಯನ್ನು ಆಧರಿಸಿ ಸತತವಾಗಿ ಪ್ರೊಟಿನುಗಳನ್ನು ಉತ್ಪಾದಿಸುತ್ತವೆ. ಡಿ.ಎನ್.ಎ. ಎನ್ನುವುದು 4 ಅಕ್ಷರಗಳ ಮೂಲಕ ಮಾಹಿತಿಗಳನ್ನು ಒಳಗೊಂಡಿರುವ ಖಜಾನೆಯಾಗಿದೆ. ಇವುಗಳು ರಾಸಾಯನಿಕ ಅಕ್ಷರಗಳು. ಇವುಗಳಿಂದ ರೈಬೋಸೋಮುಗಳು ಪ್ರೋಟಿನ್ ತಯಾರಿಸದಿದ್ದರೆ ಕಣ್ಣಿನಲ್ಲಿ ಧೂಳು ಬಿದ್ದಾಗ ಕಣ್ಣೀರು ಸುರಿಯುವುದೂ ನಿಂತು ಹೋಗುತ್ತದೆ ಎಂದವರು ಹೇಳಿದರು.

ಸಂಶೋಧನೆಯಲ್ಲಿ ಕೈಮುರಿದುಕೊಂಡೆ:
ತಾವು ಸಂಶೋಧನೆಯತ್ತ ಆಕರ್ಷಿತರಾದ ದಿನಗಳನ್ನು ನೆನಪಿಸಿಕೊಂಡ ಡಾ. ಅಡಾ ಸಾಮಾನ್ಯ ಸಂಗತಿಗಳನ್ನು ಕುರಿತ ಅದಮ್ಯ ಕುತೂಹಲವೇ ತಮ್ಮನ್ನು ಸಂಶೋಧನಾ ಕ್ಷೇತ್ರಕ್ಕೆ ಕರೆತಂದಿತು, ನನ್ನ ಬಾಲ್ಯ ಬಡತನದಿಂದ ಕೂಡಿತ್ತು ಎಂದರು. ೫ ವರ್ಷದ ಬಾಲಕಿಯಾಗಿದ್ದಾಗ ಬಾಲ್ಕನಿಯಲ್ಲಿ ನೆಲದಿಂದ ಚಾವಣಿಯ ನಡುವಿನ ಅಂತರವನ್ನು ಅಳೆಯಲು ತಾವು ಮನೆಯಲ್ಲಿದ್ದ ಸ್ಟೂಲು, ಕುರ್ಚಿ ಸಹಿತ ಎಲ್ಲ ಪೀಠೋಪಕರಣಗಳನ್ನು ಒಂದರ ಮೇಲೊಂದು ಪೇರಿಸಿ ನಡೆಸಿದ ಪ್ರಯತ್ನ ಯಶಸ್ವಿಯಾಗಲಿಲ್ಲ. ಇದರಲ್ಲಿ ಬಿದ್ದು ಕೈ ಮೂಳೆ ಮುರಿಯಿತು ಎಂದ ಅವರು ಈ ಸಂಶೋಧನೆಯನ್ನು ತಮಗೆ ಪೂರ್ಣಗೊಳಿಸುವುದು ಸಾಧ್ಯವಾಗಿಲ್ಲ ಎಂದರು. ಮೇಡಂ ಕ್ಯೂರಿ ಅವರ ಸಾಧನೆ ತಮಗೆ ಸ್ಪೂರ್ತಿಯಾಯಿತು, ವಿಜ್ಞಾನ ಕ್ಷೇತ್ರ ಪುರುಷರ ಪಾರಮ್ಯದಲ್ಲಿದ್ದಾಗ ಮೇಡಂ ಕ್ಯೂರಿ ಈ ಕ್ಷೇತ್ರಕ್ಕೆ ಬಂದು ಸಾಧನೆ ಮಾಡಿ ನೊಬೆಲ್ ಪಡೆದರು. ನಾನೂ ಅದೇ ಹಾದಿಯಲ್ಲಿ ಸಾಗಿದೆ. ನಾನೇನು ಬುದ್ಧಿವಂತ ವಿದ್ಯಾರ್ಥಿಯಾಗಿರಲಿಲ, ಆದರೆ ಕುತೂಹಲ ಮತ್ತು ಹಟ ನನ್ನನ್ನು ಬೆಳೆಸಿತು ಎಂದವರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು. ನನಗೆ ಪ್ರೊಟೀನ್ ತಯಾರಿಕೆಗೆ ಸಂಬಂಧಿಸಿದ ಜೆನೆಟಿಕ್ ಸಂಕೇತಗಳು ಬಹಳ ಆಸಕ್ತಿ ಮೂಡಿಸಿದ್ದವು. ಇದಕ್ಕಾಗಿ ವಿವಿಧ ದೇಶಗಳ ವಿವಿಧ ವಿಶ್ವವಿದ್ಯಾಲಯಗಳಿಗೆ ತೆರಳಿ ಸಂಶೋಧನಾ ಅಧ್ಯಯನ ಕೈಗೊಂಡೆ ಎಂದವರು ನುಡಿದರು. 7ವರ್ಷದವಳಿದ್ದಾಗ ತಾನು ಭಾಷ್ಪೀಕರಣದ ವೇಗವನ್ನು ಮತ್ತು ದ್ರವಗಳ ಚಲನೆಯನ್ನು ತಿಳಿಯಲು ನೀರು ಮತ್ತು ಸೀಮೆ ಎಣ್ಣೆ ಬಳಸಿ ಪ್ರಯೋಗಗಳನ್ನು ನಡೆಸಿದ್ದೆ, ಆ ಸಂಶೋಧನೆ ತಾವು ಇನ್ನೂ ಪೂರ್ಣಗೊಳಿಸದ ಎರಡನೇ ಸಂಶೋಧನೆಯಾಗುಳಿದಿದೆ ಎಂದವರು ಹಾಸ್ಯ ಮಿಶ್ರಿತ ದ್ವನಿಯಲ್ಲಿ ಹೇಳಿದರು. ರೈಬೋ ಸೋಮುಗಳ ರಚನೆ ಮತ್ತು ಅವುಗಳ ಅಧ್ಯಯನ ತಮಗೆ ನೊಬೆಲ್ ತಂದುಕೊಟ್ಟಿತು. ಈ ಕ್ಷೇತ್ರದಲ್ಲಿ ಸಂಶೋಧನೆಗೆ ಇನ್ನೂ ಅಪರಿಮಿತ ಅವಕಾಶಗಳಿವೆ. ರೈಬೋಸೋಮುಗಳಿಗೆ ಘಾಸಿ ಮಾಡದೇ, ಡಿ.ಎನ್.ಎ. ಯ ಸೂಚನಾ ಭಾಷೆಯನ್ನು ಅನುಸರಿಸಿ ಪ್ರೊಟೀನುಗಳನ್ನು ತಯಾರಿಸುವ ಅದರ ಕಾರ್ಯಕ್ಕೆ ಯಾವುದೇ ಅಡ್ಡಿಯುಂಟುಮಾಡದೆ ಖಾಯಿಲೆಗಳಿಗೆ ಔಷಧಿ ತಯಾರಿಸುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯಬೇಕಿದೆ ಎಂದವರು ಅಭಿಪ್ರಾಯಪಟ್ಟರು. ತಮ್ಮ ಮೊಮ್ಮಗಳನ್ನು ಉಪನ್ಯಾಸದಲ್ಲಿ ಸ್ಮರಿಸಿಕೊಂಡ ಡಾ. ಅಡಾ ತಾನೀಗ ಅಜ್ಜಿಯಾಗಿ ಅವಳಲ್ಲಿ ಸಂಶೋಧನಾಸಕ್ತಿಯನ್ನು ಕಾಣುತ್ತಿದ್ದೇನೆ. ನನ್ನಂತೆ ಪ್ರಯೋಗಗಳನ್ನು ಮಾಡಲು ಹೊರಡುವ ಮೊಮ್ಮಗಳನ್ನು ಕಂಡರೆ ತಮಗೆ ತುಂಬಾ ಇಷ್ಟ ಎಂದರು.

ಉಪನ್ಯಾಸದ ಬಳಿಕ ಅವರು ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದರು. ಜೀನುಗಳನ್ನು ಆಯ್ಕೆ ಮಾಡಿಕೊಂಡು ಉತ್ತಮ ಗುಣನಡತೆಯ ಜೀವಿಗಳನ್ನು ಪಡೆಯಲು ಸಾಧ್ಯವೇ ಎಂಬ ಪ್ರಶ್ನೆಗೆ ಅವರು ನೇರ ಉತ್ತರ ಕೊಡಲಿಲ್ಲ. ಇದರಲ್ಲಿ ನೈತಿಕತೆಯ ಪ್ರಶ್ನೆಯೂ ಇದೆ ಎಂದರು.

ಅಪೂರ್ವ ಅವಕಾಶ: ಅಧ್ಯಕ್ಷ ಮಂಜುನಾಥ ಭಂಡಾರಿ
ಸಮಾವೇಶದ ಆಯೋಜಕ ಸಂಸ್ಥೆಗಳಲ್ಲಿ ಒಂದಾದ ಸಹ್ಯಾದ್ರಿ ವಿದ್ಯಾಸಂಸ್ಥೆಗಳು ಮತ್ತು ಸಹ್ಯಾದ್ರಿ ಪ್ರತಿಷ್ಟಾನದ ಅಧ್ಯಕ್ಷರಾದ ಮಂಜುನಾಥ ಭಂಡಾರಿ ಮಾತನಾಡಿ ನೊಬೆಲ್ ಪ್ರಶಸ್ತಿ ಪಡೆದವರನ್ನು ತಾವು ನೋಡುವಾಗ 45 ವರ್ಷಗಳು ಕಳೆದಿದ್ದವು. ಅವರ ಭಾಷಣಗಳು ವಿದ್ಯಾರ್ಥಿಗಳಿಗೆ ಪೂರ್ಣವಾಗಿ ಅರ್ಥವಾಗದಿದ್ದರೂ ಅವರ ಸಾಧನೆ ಪ್ರೇರಣೆಯಾಗಲಿ ಎಂದು ಕಿರಿಯ ವಯಸ್ಸಿನ ವಿದ್ಯಾರ್ಥಿಗಳಿಗೆ ಅವರನ್ನು ಭೇಟಿಯಾಗುವ, ಪ್ರಶ್ನೆ ಕೇಳುವ ಅವಕಾಶವನ್ನು ಇದರ ಮೂಲಕ ಒದಗಿಸಲಾಗಿದೆ ಎಂದರು.

ಸಮಯಪ್ರಜ್ಞೆ, ಬದ್ಧತೆ ಮತ್ತು ವಿಷಯದ ಬಗ್ಗೆ ಸ್ಪಷ್ಟತೆಯನ್ನು ನಾವು ನೊಬೆಲ್ ಪುರಸ್ಕೃತರಿಂದ ಕಲಿಯಬೇಕಾಗಿದೆ. ಎಲ್ಲದರಲ್ಲೂ ಪರಿಪೂರ್ಣತೆಯನ್ನು ಅಪೇಕ್ಷಿಸುವ ಸಂಶೋಧಕರು ಅವರು ಎಂದರು.

ಕೇಂದ್ರ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಿ.ಪಿ. ಅಗರ್ವಾಲ್ ತ್ಯಾಜ್ಯ ನಿರ್ವಹಣೆಯ ಬಗ್ಗೆ ಉಪನ್ಯಾಸ ನೀಡಿದರು. ತ್ಯಾಜ್ಯ ನಿರ್ವಹಣೆ ಇಂದು ದೊಡ್ಡ ಸಮಸ್ಯೆಯಾಗುತ್ತಿರುವ ಬಗ್ಗೆ ಗಮನ ಸೆಳೆದ ಅವರು ಕೈಗಾರಿಕಾ ತ್ಯಾಜ್ಯ ನಿರ್ವಹಣೆಯನ್ನು ಸುರಕ್ಷಿತವಾಗಿ ನಿರ್ವಹಿಸದಿದ್ದರೆ ಅಪಾಯವಿದೆ ಎಂದರು.

ಡಾ. ಶಂಕರ ಕೆ. ಪ್ರಸಾದ್ ಸಮನ್ವಯಕಾರರಾಗಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English