ಚನ್ನಪಟ್ಟಣ: ಯೋಗೇಶ್ವರ್ ವಿರುದ್ಧ ಅನಿತಾ ಕುಮಾರಸ್ವಾಮಿ ಸ್ಪರ್ಧೆ?

11:19 AM, Wednesday, January 10th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Yogishwarಬೆಂಗಳೂರು: ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಅವರ ಚುನಾವಣಾ ರಾಜಕೀಯಕ್ಕೆ ಅಂತ್ಯ ಹಾಡಲು ಜೆಡಿಎಸ್ ಹಾಗೂ ಕಾಂಗ್ರೆಸ್ ಪಣತೊಟ್ಟಂತೆ ಕಾಣುತ್ತಿದೆ. ಪ್ರಬಲ ಒಕ್ಕಲಿಗ ನಾಯಕ, ಹಾಲಿ ಶಾಸಕ ಯೋಗೇಶ್ವರ್ ಅವರನ್ನು ಮಣಿಸಲು ಜೆಡಿಎಸ್ ನಿಂದ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ.

ಚನ್ನಪಟ್ಟಣದಲ್ಲಿ ಜೆಡಿಎಸ್ ನಿಂದ ಯಾರು ಸ್ಪರ್ಧಿಸಲಿದ್ದಾರೆ ಎಂಬ ಪ್ರಶ್ನೆಗೆ ಶೀಘ್ರವೇ ಉತ್ತರ ಸಿಗಲಿದ್ದು, ಕಳೆದ ಎರಡು ದಿನಗಳಿಂದ ಕುಮಾರಸ್ವಾಮಿ ಅವರ ಮನೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ ಎಂದು ಜೆಡಿಎಸ್ ಮೂಲಗಳು ಹೇಳಿವೆ.
ಅನಿತಾ ಕುಮಾರಸ್ವಾಮಿ ಅವರ ಸ್ಪರ್ಧೆ ಖಚಿತವಾದರೆ, ಕಾಂಗ್ರೆಸ್ ನಿಂದ ಯಾರು ಸ್ಪರ್ಧೆಗಿಳಿಯಲಿದ್ದಾರೆ ಕಾದು ನೋಡಬೇಕಿದೆ. ಈ ಮುಂಚೆ ಡಿಕೆ ಸುರೇಶ್ ಅವರು ಸ್ಪರ್ಧಿಸುವ ಬಗ್ಗೆ ಸುದ್ದಿ ಹರಡಿತ್ತು.

ಈ ಹಿಂದೆ ಬಿಜೆಪಿ, ಕಾಂಗ್ರೆಸ್, ಸಮಾಜವಾದಿ ಪಕ್ಷಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ಯೋಗೇಶ್ವರ್ ಯಾವುದೇ ಒಂದು ಪಕ್ಷಕ್ಕೆ ಅಂಟಿಕೊಂಡು ಕುಳಿತುಕೊಂಡ ಉದಾಹರಣೆಗಳಿಲ್ಲ. ಪಕ್ಷದಲ್ಲಿ ತಮಗೆ ಅಸಮಾಧಾನವಾಯಿತು ಎಂದಾಕ್ಷಣ ಅದನ್ನು ಬಿಟ್ಟು ಮತ್ತೊಂದು ಪಕ್ಷದತ್ತ ಮುಖ ಮಾಡಿದ್ದಾರೆ. ಆದರೆ, ಯೋಗೇಶ್ವರ್ ಅವರನ್ನು ಮತದಾರರು ಕೈ ಬಿಟ್ಟಿಲ್ಲ.

2013ರ ಸೋಲಿನ ಸೇಡನ್ನು ಜೆಡಿಎಸ್ ತೀರಿಸಿಕೊಳ್ಳಲು ಮುಂದಾಗಿದ್ದು, ಇದಕ್ಕೆ ಸಂಪೂರ್ಣ ಸಹಕಾರ ನೀಡಲು ಇಂಧನ ಸಚಿವ ಡಿ.ಕೆ ಶಿವಕುಮಾರ್ ಸಜ್ಜಾಗಿದ್ದಾರೆ. ರಾಜಕೀಯವಾಗಿ ಎಚ್ಡಿಕೆ ಹಾಗೂ ಡಿಕೆಶಿ ಕುಟುಂಬಕ್ಕೆರಡಕ್ಕೂ ಯೋಗೇಶ್ವರ್ ಪ್ರಬಲ ಶತ್ರು. ಶತ್ರುವನ್ನು ಮಣಿಸಲು ಜೆಡಿಎಸ್ ಜತೆ ಒಳಒಪ್ಪಂದ ಮಾಡಿಕೊಂಡಿರುವ ಡಿಕೆಶಿ ಸೋದರರು, ಶತಾಯ-ಗತಾಯ ಯೋಗೇಶ್ವರ್ ಸೋಲು ಕಾಣಲು ಹವಣಿಸುತ್ತಿದ್ದಾರೆ.
ಯೋಗೇಶ್ವರ್ ಪ್ರತಿಸ್ಪರ್ಧಿ ಯಾರು?

ಸಿ.ಪಿ.ಯೋಗೇಶ್ವರ್ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಿದರೆ ಅಲ್ಲಿ ಅವರ ಮುಂದೆ ನಿಂತು ಗೆಲ್ಲುವ ಪ್ರಬಲ ಅಭ್ಯರ್ಥಿಗಳು ಜೆಡಿಎಸ್ ಹಾಗೂ ಕಾಂಗ್ರೆಸ್ ನಲ್ಲಿ ಇಲ್ಲ ಎಂದೇ ಹೇಳಬೇಕಾಗುತ್ತದೆ. ಹೀಗಾಗಿ ಅವರಿಗೆ ಪ್ರಬಲ ಪೈಪೋಟಿ ನೀಡಬೇಕಾದರೆ ಅದು ಡಿ.ಕೆ.ಶಿವಕುಮಾರ್ ಅವರ ಸಹೋದರ, ಸಂಸದ ಡಿ.ಕೆ.ಸುರೇಶ್ ಅವರಿಂದ ಮಾತ್ರ ಸಾಧ್ಯ.

ಹೀಗಾಗಿ ಮುಂದಿನ ವಿಧಾನಸಭಾ ಚುನಾವಣಾ ಕಣಕ್ಕೆ ಡಿ.ಕೆ.ಸುರೇಶ್ ಅವರೇ ಕಣಕ್ಕಿಳಿಯಲು ಹುಮ್ಮಸ್ಸು ತೋರಿದ್ದಾರೆ. ಆದರೆ ಇದಕ್ಕೆ ಹೈಕಮಾಂಡ್ ನಿಂದ ಅಷ್ಟಾಗಿ ಬೆಂಬಲ ಸಿಗದ ಕಾರಣ, ಅನಿವಾರ್ಯವಾಗಿ ಜೆಡಿಎಸ್ ಜತೆ ಕೈಜೋಡಿಸಬೇಕಾಯಿತು. ಅನಿತಾ ಕುಮಾರಸ್ವಾಮಿ ಅವರ ಅದೃಷ್ಟ ಪರೀಕ್ಷೆಗೆ ಮತ್ತೆ ವೇದಿಕೆ ಸಿದ್ಧವಾಗಿದೆ.

ಜೆಡಿಎಸ್ -ಕಾಂಗೆರ್ಸ್ ಒಳ ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಸಿ.ಪಿ.ಯೋಗೇಶ್ವರ್ ತಾಲೂಕಿನಲ್ಲಿ ಹಲವು ವರ್ಷಗಳಿಂದ ಹೊಂದಾಣಿಕೆ ರಾಜಕಾರಣ ನಡೆಯುತ್ತಲೇ ಬಂದಿದೆ. ತಾವು ಕಾಂಗ್ರೆಸ್ ಬಿಟ್ಟು ಪಕ್ಷೇತರ, ಬಿಜೆಪಿ, ಸಮಾಜವಾದಿ ಪಕ್ಷದಿಂದ ಎದುರಿಸಿದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳು ಇದಕ್ಕೆ ಉದಾಹರಣೆಯಾಗುತ್ತವೆ ಎಂದು ಹೇಳಿದರು.

ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರನ್ನು ಭೇಟಿ ಮಾಡಿರುವ ಶಾಸಕ ಸಿ.ಪಿ.ಯೋಗೇಶ್ವರ್, ನಾನು ಪುಟ್ಟಣ್ಣ ಬಾಲ್ಯ ಸ್ನೇಹಿತರು ಈಗಾಗಲೇ ಪುಟ್ಟಣ್ಣ ಭಾವನಾತ್ಮಕವಾಗಿ ಜೆಡಿಎಸ್ ನಿಂದ ಹೊರಬಂದಿದ್ದಾರೆ. ನಾವಿಬ್ಬರು ಇಂದು ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿ ನಾವು ಕೂಡ ತಂತ್ರಗಾರಿಕೆ ರೂಪಿಸಿದ್ದೇವೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಹೊಂದಾಣಿಕೆ ರಾಜಕೀಯಕ್ಕೆ ಪೆಟ್ಟು ನೀಡುತ್ತೇವೆ. ಪುಟ್ಟಣ್ಣ ನನ್ನೂಡನೆ ಸಂಪರ್ಕದಲ್ಲಿದ್ದಾರೆ ಸೂಕ್ತ ಸಮಯದಲ್ಲಿ ಬಿಜೆಪಿ ಸೇರುತ್ತಾರೆ ಎಂದರು.

2013ರಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದ ಸಿ.ಪಿ ಯೋಗೇಶ್ವರ ಅವರು 80,099 ಮತಗಳನ್ನು ಗಳಿಸಿದರೆ, ಜೆಡಿಎಸ್ ನ ಅನಿತಾ ಕುಮಾರಸ್ವಾಮಿ 73,635 ಮತಗಳಿಸಿದ್ದರು.

2011ರ ಉಪ ಚುನಾವಣೆ: ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿಪಿ ಯೋಗೇಶ್ವರ್, 75,275 ಮತಗಳು, ಜೆಡಿಎಸ್ ನ ನಾಗರಾಜು 57,472 ಮತಗಳನ್ನು ಗಳಿಸಿದ್ದರು.

ಇದಕ್ಕೂ ಮುನ್ನ 2008ರಲ್ಲಿ ಸಿಪಿವೈ ಗೆದ್ದರೆ, 2009ರ ಉಪ ಚುನಾವಣೆಯಲ್ಲಿ ಜೆಡಿಎಸ್ ನ ಅಶ್ವಥ್ ಎಂ.ಸಿ ಅವರು ಗೆಲುವು ಸಾಧಿಸಿದ್ದರು.

ಪ್ರತಿಯೊಂದು ಸೀಟ್‌ನ್ನು ಗೆಲ್ಲುವುದಕ್ಕಾಗಿ ಪಕ್ಷದಲ್ಲೇ ಲೆಕ್ಕಾಚಾರ ಹಾಕಿ ತೀರ್ಮಾನ ಮಾಡಲಾಗುವುದು ಚನ್ನಪಟ್ಟಣದಲ್ಲಿ ಕಣಕ್ಕಿಳಿಸಲು ಬೇರೆ ಯಾರನ್ನಾದರೂ ಗುರುತಿಸಿ ಎಂದು ಸ್ಥಳೀಯ ಮುಖಂಡರಿಗೆ ತಿಳಿಸಲಾಗಿದೆ,  ಎನ್ನುವ ಮೂಲಕ ಅನಿತಾ ಕುಮಾರಸ್ವಾಮಿಯವರನ್ನು ಚನ್ನಪಟ್ಟಣದಿಂದ ಕಣಕ್ಕಿಳಿಸುವುದಿಲ್ಲ ಎಂದು ದೇವೇಗೌಡರು ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಆದರೆ, ಕಾರ್ಯಕರ್ತರ ಒತ್ತಡಕ್ಕೆ ಮಣಿದು ಅನಿತಾ ಕುಮಾರಸ್ವಾಮಿ ಅವರಿಗೆ ಚನ್ನಪಟ್ಟಣದಿಂದ ಹಾಗೂ ಪ್ರಜ್ವಲ್ ರೇವಣ್ಣ ಅವರಿಗೆ ಬೇಲೂರಿನಿಂದ ಸ್ಪರ್ಧಿಸಲು ಟಿಕೆಟ್ ನೀಡುವ ಸಾಧ್ಯತೆ ನಿಚ್ಚಳವಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English