ಚಿತ್ರದುರ್ಗ: ಕೇಂದ್ರದ ಮೋದಿ ಸರ್ಕಾರ ನೀಡಿದ ಅನುದಾನವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ದುರುಪಯೋಗ ಮಾಡಿಕೊಂಡಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದರು.
ಕೋಟೆ ನಾಡು ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಆಯೋಜನೆಗೊಂಡಿರುವ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು ಕೇಂದ್ರದಿಂದ ಕರ್ನಾಟಕಕ್ಕೆ 2.19 ಲಕ್ಷ ಕೋಟಿ ರೂಪಾಯಿ ಅನುದಾನ ಬಂದಿದೆ ಆದರೆ ಸಿದ್ದರಾಮಯ್ಯ ಆ ಅನುದಾನವನ್ನು ದುರಪಯೋಗ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಅವರು ಕೇಂದ್ರದ ಲೆಕ್ಕ ಕೇಳುತ್ತಾರೆ, ನಾನಿಂದು ಬಂದಿರುವುದು ಅದೇ ಲೆಕ್ಕ ಹೇಳಲು ಎಂದ ಅಮಿತ್ ಶಾ ಅವರು, ಕೇಂದ್ರದಿಂದ ರಾಜ್ಯಕ್ಕೆ ನೀಡಲಾಗಿರುವ ಎಲ್ಲಾ ಅನುದಾನಗಳ ಲೆಕ್ಕ ಒಪ್ಪಿಸಿದರು ಹಾಗೂ ಸಿದ್ದರಾಮಯ್ಯ ಅವರು ಕೇಂದ್ರದಿಂದ ಬಂದ ಅನುದಾನವನ್ನು ತಮ್ಮದೇ ಅನುದಾನ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರದ ಆಡಳಿತಾವದಿಯಲ್ಲಿ ಕೇವಲ ಕಾಂಗ್ರೆಸ್ ಮುಖಂಡರ ಅಭಿವೃದ್ಧಿ ಅಷ್ಟೇ ಆಗುತ್ತಿದೆ. ಐದು ವರ್ಷದ ಹಿಂದೆ ಮಧ್ಯಮವರ್ಗದವರಾಗಿದ್ದ ಕಾಂಗ್ರೆಸ್ ಮುಖಂಡರು ಈಗ ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ಶ್ರೀಮಂತರಾಗಿಬಿಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರ ವಾಚ್ ಹಗರಣದ ನೆನಪು ಮಾಡಿದ ಅಮಿತ್ ಶಾ ಅವರು, ಸಿದ್ದರಾಮಯ್ಯ ಅವರಿಗೆ 70 ಲಕ್ಷ ರೂಪಾಯಿಯ ಗಡಿಯಾರ ಉಡುಗೊರೆಯಾಗಿ ಬರುತ್ತದೆ, ಉದ್ಯಮಿಗಳಿಗೆ ಅನುಕೂಲ ಮಾಡಿಕೊಟ್ಟಿರುವ ಕಾರಣದಿಂದಲೇ ಅವರಿಗೆ ಈ ರೀತಿಯ ಭಾರಿ ಬೆಲೆಯ ಉಡುಗೊರೆಗಳು ಸಿಗುತ್ತವೆ ಎಂದು ಲೇವಡಿ ಮಾಡಿದರು.
ರಾಜ್ಯದ ಪ್ರಮುಖ ಬಿಜೆಪಿ ಮುಖಂಡರು, ಸ್ಥಳೀಯ ಬಿಜೆಪಿ ಶಾಸಕರು, ಜಿಲ್ಲಾ ಮುಖಂಡರು ವೇದಿಕೆ ಮೇಲೆ ಈಗಾಗಲೇ ಉಪಸ್ಥಿತರಿದ್ದು, ಸಮಾವೇಶಕ್ಕೆ ಜನರು ಹರಿದುಬರುತ್ತಿದ್ದಾರೆ.
ಪರಿವರ್ತನಾ ಯಾತ್ರೆ ಉದ್ಘಾಟನೆ ದಿನ ನಡೆದ ಸಮಾವೇಶದಲ್ಲಿ ಜನರ ಕೊರತೆ ಕಂಡು ಬಂದು ಅಮಿತ್ ಷಾ ಅವರ ಕೈಲಿ ಬೈಸಿಕೊಂಡಿದ್ದ ಬಿಜೆಪಿ ರಾಜ್ಯ ಮುಖಂಡರು ಈ ಬಾರಿ ಉತ್ತಮವಾಗಿ ಕಾರ್ಯಕ್ರಮ ಸಂಘಟನೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕಾರ್ಯಕ್ರಮದಲ್ಲಿ 40 ಸಾವಿರ ಜನಕ್ಕೆ ಆಸನ ವ್ಯವಸ್ಥೆ ಮಾಡಲಾಗಿದ್ದು, ವೇದಿಕೆ ಕಾರ್ಯಕ್ರಮ ಎಲ್ಲರಿಗೂ ಕಾಣುವಂತೆ ಮಾಡಲು 10 ಬೃಹತ್ ಎಲ್‌ಸಿಡಿ ಟವಿಗಳನ್ನು ಬಳಸಲಾಗಿದೆ.
Click this button or press Ctrl+G to toggle between Kannada and English