ಮೂಲ್ಕಿ : ಜಿಲ್ಲೆ ಬದಲಾಯ್ತು, ತಾಲೂಕು ಬದಲಾಯ್ತು ಆದರೆ ಪಶುಸಂಗೋಪನಾ ಇಲಾಖೆಯ ಪಶು ವೈದ್ಯಾಲಯ ಮಾತ್ರ ಅದೇ ಇದೆ. ಹೌದು ಸುಮಾರು ಆರು ದಶಕಗಳ ಹಿಂದೆ ಅವಿಭಜಿತ ದ.ಕ. ಜಿಲ್ಲೆಯ ವ್ಯಾಪ್ತಿಗೆ ಸೇರಿದ್ದ ಮೂಲ್ಕಿ ಸಮೀಪದ ಕಾರ್ನಾಡಿನಲ್ಲಿದ್ದ ಪಶು ಸಂಗೋಪನಾ ಇಲಾಖೆಯ ಪಶು ವೈದ್ಯಾಲಯ ಮಂಗಳೂರು ತಾಲೂಕು ಹಾಗೂ ದ.ಕ. ಜಿಲ್ಲೆಯ ವ್ಯಾಪ್ತಿಯಲ್ಲಿದ್ದರೂ, ಉಡುಪಿ ಜಿಲ್ಲೆಯ ಜನರಿಗೆ ಸೇವೆಯನ್ನು ಒದಗಿಸುತ್ತಿದೆ.
ಉಡುಪಿ ಜಿಲ್ಲೆಯ ಪಡುಬಿದ್ರಿ, ಹೆಜಮಾಡಿ ಮತ್ತು ಪಲಿಮಾರು ಪ್ರದೇಶದ ಜನರು ತಮ್ಮ ಸಾಕು ಪ್ರಾಣಿ, ಜಾನುವಾರುಗಳಿಗೆ ಚಿಕಿತ್ಸೆ ಹಾಗೂ ಅಗತ್ಯ ಸೌಲಭ್ಯ ಪಡೆಯಲು ಬೇರೆ ದಾರಿಯಿಲ್ಲದೆ ಇದೇ ಆಸ್ಪತ್ರೆಯನ್ನು ಅವಲಂಬಿಸುವಂತಾಗಿದೆ. ಕಾರಣ ಪಶು ವೈದ್ಯಕೀಯ ಚಿಕಿತ್ಸೆಗೆ ಬೇಕಾದ ಕೇಂದ್ರಗಳನ್ನು ಈವರೆಗೂ ತೆರೆದಿಲ್ಲ.
ಹಿಂದೆ ಇಲ್ಲಿ ಸಾಕಷ್ಟು ವ್ಯವಸ್ಥೆ ಇತ್ತು. ಸಿಬಂದಿ, ಔಷಧವನ್ನೂ ಇಲಾಖೆ ಒದಗಿಸುತ್ತಿತ್ತು. ಆದರೆ ಈಗ ಈ ಆಸ್ಪತ್ರೆಯ ವ್ಯಾಪ್ತಿ ಕೇವಲ ಮೂಲ್ಕಿ ನ.ಪಂ., ಕಿಲ್ಪಾಡಿ ಮತ್ತು ಶಿಮಂತೂರು ಗ್ರಾಮಗಳು ಮಾತ್ರ. ಹೀಗಾಗಿ ಔಷಧ ಸೌಲಭ್ಯ, ಸಿಬಂದಿಯ ಕೊರತೆಯೂ ಕಾಡುತ್ತಿದೆ. ಆದರೆ ಹಿಂದಿನಿಂದಲೂ ಇಲ್ಲಿಗೆ ಬರುತ್ತಿದ್ದವರಿಗೆ ಬೇರೆ ವ್ಯವಸ್ಥೆಯಾಗದ ಕಾರಣ ಜನರು ಇಲ್ಲಿಗೆ ಬಂದು ಅಗತ್ಯ ಸೇವೆ ಪಡೆಯುತ್ತಿದ್ದಾರೆ.
ಹಿಂದೆ ಸುಮಾರು 10- 15 ಗ್ರಾಮಗಳು ಈ ಆಸ್ಪತ್ರೆಯ ವ್ಯಾಪ್ತಿಗೆ ಸೇರಿದ್ದು, ವೈದ್ಯರ ಸೇವೆ ನಿರಂತರವಾಗಿ ನಡೆಯುತ್ತಿತ್ತು. ಬೇಕಾದಷ್ಟು ಸಿಬಂದಿ, ವ್ಯವಸ್ಥೆಗಳೆಲ್ಲ ಇದ್ದವು. ಆದರೆ ಈಗ ಇಲ್ಲಿ ಒಬ್ಬರು ವೈದ್ಯರು ಮತ್ತು ತಾತ್ಕಾಲಿಕ ಹೊರ ಗುತ್ತಿಗೆಯ ಒಬ್ಬರು ಸಹಾಯಕ ಸಿಬಂದಿ ಮಾತ್ರ ಇದ್ದಾರೆ. ಜತೆಗೆ ನಿತ್ಯ ವರದಿಗಾಗಿ ಸರಕಾರ ಕಂಪ್ಯೂಟರ್ ಒದಗಿಸಿದ್ದು, ಇದಕ್ಕೂ ಸಿಬಂದಿ ನೇಮಕವಾಗಿಲ್ಲ.
ಸರಕಾರ ಜಿಲ್ಲೆಯನ್ನು ಮಾತ್ರವಲ್ಲ, ಈ ಆಸ್ಪತ್ರೆಯನ್ನೂ ವಿಂಗಡಣೆ ಮಾಡಿದೆ. ಎಲ್ಲವೂ ಕಡತದಲ್ಲಿ ದಾಖಲಾಗಿದೆ.ಆದರೆ ಪಡುಬಿದ್ರಿ, ಹೆಜಮಾಡಿ, ಪಲಿಮಾರು ಮಾತ್ರವಲ್ಲ ಹಳೆಯಂಗಡಿ, ಪಡುಪಣಂಬೂರು, ಸಸಿಹಿತ್ಲು ಭಾಗದ ಜನರು ತಮ್ಮ ಮನೆಯ ಪ್ರಾಣಿಗಳ ಚಿಕಿತ್ಸೆಗಾಗಿ ಇದೇ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ.
ಹೆಚ್ಚಾಗಿ ವೈದ್ಯರು ಚಿಕಿತ್ಸೆ ನೀಡಲು ಮನೆಮನೆಗೆ ತೆರಳುತ್ತಾರೆ. ಆದರೆ ಇಲ್ಲಿ ಮಾತ್ರ ಜನರು ಆಸ್ಪತ್ರೆಗೆ ಬಂದು ಗಂಟೆಗಟ್ಟಲೆ ಕಾಯುತ್ತಾರೆ. ಸಿಬಂದಿ ಕೊರತೆ ಇದ್ದರೂ, ಇಲ್ಲಿನ ವೈದ್ಯರು ಈ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮಿಂದ ಆಗುವಷ್ಟು ಸೇವೆಯನ್ನು ನೀಡುತ್ತಿದ್ದಾರೆ.
ಜಾನುವಾರುಗಳಿಗೆ ಬರುವ ಕಾಲುಬಾಯಿ ರೋಗ, ಪಳಕಳೆ ರೋಗದ ಲಸಿಕೆ ಮತ್ತು ಮದ್ದುಗಳ ಆವಶ್ಯಕತೆಯಿರುವಷ್ಟು ಒದಗಿಸಲಾಗುತ್ತಿದೆ. ಕೃತಕ ಗರ್ಭಧಾರಣೆ ವ್ಯವಸ್ಥೆಗೂ ಸಹಾಯಕರು ಇಲ್ಲದೆ ತೊಂದರೆಯಾಗುತ್ತಿದೆ. ಜಾನುವಾರು ಅಧಿಕಾರಿ ಎಂಬ ಹುದ್ದೆಗೆ ಸಿಬಂದಿ ಇಲ್ಲದೆ ವೈದ್ಯರೇ ಚಿಕಿತ್ಸೆಗಾಗಿ ಹೊರಹೋಗುವ ಸಂದರ್ಭದಲ್ಲಿ ಆಸ್ಪತ್ರೆಗೆ ಬೀಗ ಹಾಕಿ ತೆರಳಬೇಕಾಗುತ್ತದೆ. ಬಂದ ಜನರು ವೈದ್ಯರು ವಾಪಸ್ ಬರುವವರೆಗೆ ಕಾಯುವುದು ಅನಿವಾರ್ಯವಾಗಿದೆ.
ಸರಕಾರದ ವಿವಿಧ ಯೋಜನೆಯಡಿ ಪಶುಭಾಗ್ಯ ಕಾರ್ಯಕ್ರಮದಡಿ ಈ ವರ್ಷ 8 ದನ ಹಾಗೂ 3 ಆಡುಗಳು ಸರಕಾರದಿಂದ ಮಂಜೂರಾಗಿದ್ದು ಇದನ್ನು ನಿಯಮದಂತೆ ಆಸ್ಪತ್ರೆಯ ವ್ಯಾಪ್ತಿಯೊಳಗೆ ಆರ್ಹರಿಗೆ ವಿತರಿಸಲಾಗಿದೆ. ಈ ವ್ಯವಸ್ಥೆಯಲ್ಲಿ ಬ್ಯಾಂಕ್ ಹಾಗೂ ಸರಕಾರದ ನಿಯಮದಡಿ ಫಲಾನುಭವಿಗಳಿಗೆ ಯೋಜನೆಯ ಲಾಭ ಪಡೆಯಲು ಸಾಧ್ಯವಿದೆ.
ಸಾಲ ವ್ಯವಸ್ಥೆಯಲ್ಲಿ ಎಸ್.ಸಿ. ಮತ್ತು ಎಸ್.ಟಿ. ಯವರಿಗೆ ಜಾನುವಾರು ಖರೀದಿಗೆ ಶೇ. 50ರಷ್ಟು ಸಮಪಾಲು ಸರಕಾರ ಸಬ್ಸಿಡಿ ರೂಪದಲ್ಲಿ ಕೊಟ್ಟರೆ ಇತರರಿಗೆ ಶೇ. 25ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಸುಮಾರು 100 ಚೀಲ ಮೇವಿಗಾಗಿ ಜೋಳದ ಬೀಜಗಳನ್ನೂ ಹುಲ್ಲು ಬೆಳೆಸಲು ರೈತರಿಗೆ ಉಚಿತವಾಗಿ ವಿತರಿಸಲಾಗಿದೆ. ಈ ಯೋಜನೆಯು ಗ್ರಾಮ ಸಭೆಯಲ್ಲಿ ಹೆಚ್ಚು ಪ್ರಚಾರವಾಗಿದ್ದರಿಂದ ಹೆಚ್ಚಿನ ರೈತರು ನೇರವಾಗಿ ಆಸ್ಪತ್ರೆಗೆ ಬಂದು ಮಾಹಿತಿ ಪಡೆಯುತ್ತಿದ್ದಾರೆ.
ಇಲಾಖೆ ನಿರ್ದೇಶನದಂತೆ ಮೂಲ್ಕಿ ನ.ಪಂ. ವ್ಯಾಪ್ತಿಯ ಕಿಲ್ಪಾಡಿ, ಶಿಮಂತೂರು ಗ್ರಾಮಗಳು ಆಸ್ಪತ್ರೆಯ ವ್ಯಾಪ್ತಿಯಲ್ಲಿದ್ದರೂ ಪ್ರಸ್ತುತ ಸುಮಾರು 15ಕ್ಕೂ ಹೆಚ್ಚು ಗ್ರಾಮದ ಜನರು ಇದೇ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ.ಇಲಾಖೆಯಿಂದ ಹೈನುಗಾರಿಕೆಯ ಸವಲತ್ತುಗಳ ಬಗ್ಗೆ ಬಹಳಷ್ಟು ಪ್ರಚಾರ ಕಾರ್ಯ ನಡೆಯುತ್ತಿದೆ. ಆದರೆ,ಆಸ್ಪತ್ರೆ ವ್ಯಾಪ್ತಿಗೆ ಸಾಕಾಗುವಷ್ಟು ಮಾತ್ರ ಔಷಧಗಳು ಪೂರೈಕೆಯಾಗುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಔಷಧದ ಕೊರತೆಯೂ ಕಾಡುತ್ತಿದೆ. ಜತೆಗೆ ಸಿಬಂದಿಇಲ್ಲದೆಯೂ ಸಮಸ್ಯೆಯಾಗುತ್ತಿದೆ.
Click this button or press Ctrl+G to toggle between Kannada and English