ಮಂಗಳೂರು: ದೇರಳಕಟ್ಟೆಯ ಯೇನಪೊಯ ಮೆಡಿಕಲ್ ಕಾಲೇಜ್ ಆಸ್ಪತ್ರೆಯು ಲಿಂಫೊಸೈಟ್ ಕ್ರಾಸ್‌ಮ್ಯಾಚ್ ಮತ್ತು ಅತ್ಯಂತ ಕನಿಷ್ಠ ಶಸ್ತ್ರಕ್ರಿಯೆಯನ್ನು ಒಳಗೊಂಡ ರೊಬೊಟಿಕ್ ಕಸಿ ವಿಧಾನದ ಮೂಲಕ ಕಾಶ್ಮೀರದ ಬಡ ರೋಗಿಯೊಬ್ಬರಿಗೆ ಮೂತ್ರಪಿಂಡ ಕಸಿ ನಡೆಸಿ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇರಿಸಿದೆ.
ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯ ಅವಿಭಾಜ್ಯ ಭಾಗವಾದ ಲಿಂಫೋಸೈಟ್ ಕ್ರಾಸ್ ಮ್ಯಾಚ್ ಮಾಡುವ ಸೌಲಭ್ಯ ಮಂಗಳೂರಿನಲ್ಲಿ ಯೇನಪೊಯ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿದೆ. ಈಗ ಈ ವೈದ್ಯಕೀಯ ಕಾಲೇಜು ಆಸ್ಪತ್ರೆ ರಾಜ್ಯದ ಗಡಿಯನ್ನು ಮೀರಿ, ಜಮ್ಮು ಮತ್ತು ಕಾಶ್ಮೀರದ ಬಡ ರೋಗಿಗೆ ಮೂತ್ರಪಿಂಡದ ಕಸಿ ನಡೆಸಿ ಶ್ಲಾಘನೆ ಪಡೆದುಕೊಂಡಿದೆ.
ಜಮ್ಮು ಮತ್ತು ಕಾಶ್ಮೀರದ ಬಡ ರೋಗಿಯು ಕೊನೆಯ ಹಂತದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು. ಅವರ ಪತ್ನಿ ತನ್ನ ಮೂತ್ರಪಿಂಡವನ್ನು ಪತಿಗೆ ದಾನ ಮಾಡಲು ಸಿದ್ಧರಿದ್ದರೂ ಕಸಿ ಚಿಕಿತ್ಸೆಗೆ ಹಣದ ಮುಗ್ಗಟ್ಟು ಎದುರಾಯಿತು. ಅವರು ಯೇನಪೊಯದ ವೈದ್ಯರನ್ನು ಸಂಪರ್ಕಿಸಿದಾಗ ವೈದ್ಯರು ರೋಗಿಯ ಆರ್ಥಿಕ ಹಿನ್ನೆಲೆಯನ್ನು ಪರಿಗಣಿಸಿ ಸಹಾಯ ಮಾಡಲು ಒಪ್ಪಿಕೊಂಡರು.
ಆಸ್ಪತ್ರೆಯ ಆಡಳಿತ ಎಲ್ಲ ಚಿಕಿತ್ಸಾ ವೆಚ್ಚಗಳನ್ನು ಕಡಿಮೆ ಮಾಡಿತು ಮತ್ತು ವೈದ್ಯರ ಶುಲ್ಕದಲ್ಲಿಯೂ ವಿನಾಯಿತಿ ನೀಡಲಾಯಿತು. ರೋಗಿಗೆ ನಡೆಸಲಾದ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಹತ್ತು ದಿನಗಳಲ್ಲಿ ಆಸ್ಪತ್ರೆಯಿಂದ ನಿರ್ಗಮಿಸಿದ್ದಾರೆ.
ಮೂತ್ರಪಿಂಡ ಕಸಿ ಚಿಕಿತ್ಸೆಯ ಪ್ರಯೋಜನ ಪಡೆಯುವಲ್ಲಿ ಅದು ದುಬಾರಿಯಾಗಿರುವುದು ಪ್ರಮುಖ ಅಡಚಣೆ. ಆದರೆ ಯೇನಪೊಯದಲ್ಲಿ ವೆಚ್ಚ ಕಡಿಮೆ ಇರುವುದರಿಂದ ಇಲ್ಲಿ ಬಹಳಷ್ಟು ಮೂತ್ರಪಿಂಡದ ಕಸಿ ಚಿಕಿತ್ಸೆ ನಡೆಯುತ್ತಿವೆ. ವಿದೇಶೀಯರು ಕೂಡ ಯೇನಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸಾಧನೆಯನ್ನು ಗುರುತಿಸಿದ್ದಾರೆ.
ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯ ಯಶಸ್ಸು ವೈದ್ಯರ ತಂಡದ ಕೆಲಸ ಮತ್ತು ತಂಡವು ಹೊಂದಿರುವ ಜ್ಞಾನ, ಉತ್ಸಾಹವನ್ನು ಅವಲಂಬಿಸಿರುತ್ತದೆ. ಡಾ. ಮುಜೀಬ, ಡಾ. ಅಲ್ತಾಫ್ ಖಾನ್, ಡಾ. ನಿಶಿ¤àತ್ ಡಿ’ಸೋಜ, ಡಾ. ಸಂತೋಷ್ ಪೈ, ಡಾ. ಕಾರ್ತಿಕ್ ಮತ್ತು ಡಾ. ಗಣೇಶ್ ಕಾಮತ್ ಅವರನ್ನು ಒಳಗೊಂಡ ಮೂತ್ರಶಾಸ್ತ್ರದ ವೈದ್ಯರ ತಂಡ ಉತ್ತಮ ಕೆಲಸ ಮಾಡುತ್ತಿದೆ.
ಮೂತ್ರಪಿಂಡದ ಕಸಿ ಅಗತ್ಯ ರೋಗಿಗಳು ಟ್ರಾನ್ಸ್ ಪ್ಲಾಂಟ್ ಸಂಯೋಜಕ ನೆಲ್ವಿನ್ ನೆಲ್ಸನ್ ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Click this button or press Ctrl+G to toggle between Kannada and English