ಮಂಗಳೂರು: ಕಾಟಿಪಳ್ಳ ನಿವಾಸಿ ದೀಪಕ್ ರಾವ್ ಹತ್ಯೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳಾದ ನೌಷಾದ್ ಮತ್ತು ಮೊಹಮ್ಮದ್ ಇರ್ಷಾದ್ ಅವರನ್ನು ಇಂದು ಮತ್ತೆ ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
ಈಗಾಗಲೇ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ತನಿಖೆ ನಡೆಸಿರುವುದರಿಂದ ಮತ್ತೆ ಪೊಲೀಸ್ ಕಸ್ಟಡಿ ಕೇಳುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ. ಕಸ್ಟಡಿಯಲ್ಲಿ ತನಿಖೆಯ ವೇಳೆ ಕೆಲವೊಂದು ಮಹತ್ವದ ಸಂಗತಿಗಳನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂದು ಹೇಳಲಾಗಿದೆ. ಒಂದು ವಾರ ಕಾಲದ ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಆದರೆ ಇನ್ನೂ ಇಬ್ಬರು ಆರೋಪಿಗಳನ್ನು ತನಿಖೆ ನಡೆಸದೆ ಈ ಹತ್ಯೆ ಪ್ರಕರಣದಲ್ಲಿ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲವೆಂದು ಪೊಲೀಸ್ ಮೂಲಗಳು ತಿಳಿಸಿವೆ. ಇತ್ತ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುಂಡೇಟಿನಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಇದೇ ಪ್ರಕರಣದ ಪ್ರಮುಖ ಆರೋಪಿಗಳಾದ ಪಿಂಕಿ ನವಾಜ್ ಮತ್ತು ರಿಜ್ವಾನ್ ಇನ್ನೂ ಆಸ್ಪತ್ರೆಯಿಂದ ಹೊರಬಂದಿಲ್ಲ.
ಇನ್ನೂ ಎರಡು ಮೂರು ದಿನಗಳ ಚಿಕಿತ್ಸೆಯ ನಂತರ ಅವರನ್ನು ತನಿಖೆಗೆ ವಶಕ್ಕೆ ತೆಗೆದುಕೊಳ್ಳಲು ತನಿಖಾಧಿಕಾರಿಗಳು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Click this button or press Ctrl+G to toggle between Kannada and English