ಮಡಿಕೇರಿ : ಇಲ್ಲಿನ ದುಬಾರೆಯ ಸಾಕಾನೆ ಶಿಬಿರದಲ್ಲಿದ್ದ ನಾಲ್ಕು ಆನೆಗಳಾದ ವಿಕ್ರಮ್, ಹರ್ಷ ಗೋಪಿ, ಕಾವೇರಿ ಆನೆಗಳು ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು 2ನೇ ಹಂತದ ಪ್ರಯಾಣ ಬೆಳೆಸಿದೆ. ದುಬಾರೆಯ ಆನೆಕಾಡಿನ ಈ ಸಾಕಾನೆಗಳನ್ನು ಬುಧವಾರ ಬೆಳಗ್ಗೆ ಶಿಬಿರದಲ್ಲಿ ನಡೆದ ವಿಶೇಷ ಪೂಜೆಗೆ ತೊಳೆದು – ಸ್ನಾನ ಮಾಡಿಸಿ, ಹಣೆ ಹಾಗೂ ಕಾಲುಗಳಿಗೆ ಹರಳೆಣ್ಣೆ ಲೇಪನ ಮಾಡಿ ಆನೆಗಳ ಮುಖ ಹಾಗೂ ದೇಹಗಳ ಮೇಲೆ ಚಿತ್ತಾರದ ಚಿತ್ರಗಳನ್ನು ಬಿಡಿಸಿ ವಿಶೇಷವಾಗಿ ಅಲಂಕರಿಸಿ ಪೂಜಿಸಿ ಬೀಳ್ಕೊಡಲಾಯಿತು.
ವಿಕ್ರಮ್ ಆನೆಯ ಮಾವುತ, ಕೂರ, ಕಾವೇರಿ ಆನೆಯ ಮಾವುತ ದೋಬಿ, ಗೋಪಿ ಆನೆಯ ಮಾವುತ ಅಣ್ಣಯ್ಯ ,ಹರ್ಷ ಆನೆಯ ಮಾವುತ ಸಿಕ್ಕ ಕಾವಾಡಿಗಳಾದ ಚೆನ್ನಪ್ಪ, ಶರಿ, ಭಾಸ್ಕರ, ಲಿಂಗ ಆನೆಗಳ ಜೊತೆ ಮೈಸೂರಿನತ್ತ ಪ್ರಯಾಣ ಬೆಳೆಸಿದರು.
ನಾಲ್ಕು ಆನೆಗಳಲ್ಲಿ 40 ವರ್ಷದ ವಿಕ್ರಂ , 38 ವರ್ಷದ ಹರ್ಷ, ಉತ್ತಮ ದೇಹ ದಾರ್ಡ್ಯತೆ ಹೊಂದಿದೆ. ಅರಣ್ಯ ಇಲಾಖೆ ವತಿಯಿಂದ ಕಳೆದ ಮೂರು ವರ್ಷಗಳ ಹಿಂದೆ ಅರಣ್ಯದಲ್ಲಿ ನಡೆಸಿದ ಎಲಿಫೆಂಟ್ ಕಾರ್ಯಾಚರಣೆಯಲ್ಲಿ ಸೆರೆಸಿಕ್ಕ ‘ ಪುಂಡಾನೆ ‘ ಕಾವೇರಿ ಇದೇ ಮೊದಲ ಬಾರಿಗೆ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದೆ. ಸಾಕಾನೆ ಕಾವೇರಿಗೆ ದುಬಾರೆ ಶಿಬಿರದಲ್ಲಿ ಮಾವುತರು ಈಗಾಗಲೇ ಶಿಸ್ತು, ಸಂಯಮದ ತರಬೇತಿ ನೀಡಿದ್ದಾರೆ. ಹಾಗೆಯೇ 32 ವರ್ಷದ ಗೋಪಿಯು ಈ ತಂಡದಲ್ಲಿ ತೆರಳುತ್ತಿದ್ದು, ಮುಂದಿನ ವರ್ಷಗಳಲ್ಲಿ ಅಂಬಾರಿ ಹೊರಲು ಬಲರಾಮುನ ಉತ್ತರಾಧಿಕಾರಿಯಾಗಿ ರೂಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಾಕಾನೆಗಳನ್ನು ಬೀಳ್ಕೊಡುವ ಸಂದರ್ಭ ಡಾ| ಕೆ.ಎಸ್. ಉಮಾಶಂಕರ್, ಸೋಮವಾರಪೇಟೆ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಪ್ರಸನ್ನ ಕುಮಾರ್, ವಲಯ ಅರಣ್ಯಾಧಿಕಾರಿ ಅಚ್ಚಪ್ಪ , ವನಪಾಲಕ ಅಪ್ಪಾಸ್ವಾಮಿ, ಜಿ.ಪಂ. ಸದಸ್ಯರಾದ ಬಿ.ಬಿ. ಭಾರತೀಶ್, ಸುಲೋಚನಾ ಮೊದಲಾದವರಿದ್ದರು. ಆನೆಗಳೊಂದಿಗೆ ಆನೆಗಳ ಪಾಲನೆಯಲ್ಲಿ ತೊಡಗಿರುವ ಮಾವುತರು ಕಾವಾಡಿಗರ ಕುಟುಂಬದವರು ಅತ್ಯಂತ ಸಂತಸದಿಂದ ತೆರಳುತ್ತಿದ್ದುದು ಕಂಡು ಬಂತು. .
Click this button or press Ctrl+G to toggle between Kannada and English