ಆಮಂತ್ರಣ ಪತ್ರಿಕೆಯಲ್ಲಿ ಶ್ರೀಕೃಷ್ಣ ಮಠ ವೈಭವ ಅನಾವರಣ

5:13 PM, Thursday, January 11th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Paryayaಉಡುಪಿ: ನವಗ್ರಹ ಕಿಂಡಿಯಲ್ಲಿ ಶ್ರೀಕೃಷ್ಣನನ್ನು ನೋಡಬಹುದು, ಜಯ ವಿಜಯ ದೇವರ ಸುಂದರ ಮೂರ್ತಿ ಯನ್ನು ಕಣ್ತುಂಬಿಸಿ ಕೊಳ್ಳಬಹುದು, ಮೂರು ಕಲಶಗಳ ಸಹಿತ ಚಿನ್ನದ ಹೊದಿಕೆಯ ಗರ್ಭಗುಡಿಯ ಅಪೂರ್ವ ಬಿಂಬವನ್ನೇ ನೋಡಿ ಧನ್ಯರಾಗ ಬಹುದು. ಮಾತ್ರವಲ್ಲ ಗರ್ಭಗುಡಿಯ ಹಿಂಭಾಗದ ಸುಂದರ ಚಿತ್ರಣವನ್ನು ಕೂಡ ನೋಡಬಹುದು.

ಹೌದು. ಇದಕ್ಕೆ ಶ್ರೀಕೃಷ್ಣನ ಸನ್ನಿಧಾನಕ್ಕೆ ತೆರಳಬೇಕಾಗಿಲ್ಲ. ಈ ಬಾರಿಯ ಸರ್ವಜ್ಞ ಪೀಠವೇರಲಿರುವ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಪರ್ಯಾಯ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಕಂಡರೆ ಸಾಕು. ಹಲವು ವೈಶಿಷ್ಟ, ಆಕರ್ಷಣೆಗಳಿಂದ ಭಕ್ತ ಜನಸಮೂಹದಲ್ಲಿ ವಿಶೇಷವಾದ ಕುತೂಹಲಗಳನ್ನು ಮೂಡಿಸಿರುವ ಪಲಿಮಾರು ಶ್ರೀಗಳ ಪರ್ಯಾಯ ಮಹೋತ್ಸವದ ಆಮಂತ್ರಣ ಪತ್ರಿಕೆ ಕೂಡ ವಿಶಿಷ್ಟವೇ.

ಒಟ್ಟು 12 ಪುಟಗಳುಳ್ಳ ಮುಖ್ಯ ಆಮಂತ್ರಣ ಪತ್ರಿಕೆಯ ಮುಖಪುಟ ಗರ್ಭಗುಡಿಯ ಎದುರು ಭಾಗದ ಅತ್ಯಪೂರ್ವ ನೋಟವನ್ನು ನಮ್ಮ ಕಣ್ಣಿಗೆ ಕಟ್ಟಿಕೊಡುತ್ತದೆ. ನವಗ್ರಹಕಿಂಡಿಯ ದೃಶ್ಯ ಸಮೇತವಾಗಿ ನಮಗೆ ಶ್ರೀಕೃಷ್ಣನ ಸನ್ನಿಧಾನವನ್ನು ದರ್ಶಿಸಿದ ಅನುಭವ ನೀಡುತ್ತದೆ.

ಪುಟ ತಿರುವಿದಾಗ ಮಧ್ವಾ ಚಾರ್ಯರು ಮತ್ತು ವಾದಿರಾಜರ ಸುಂದರ ಮೂರ್ತಿಗಳು, ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಮತ್ತು ಗುರು ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರು, ಅನಂತರ ಪುಟದಲ್ಲಿ ವಜ್ರ ಕವಚಧಾರಿ ಶ್ರೀಕೃಷ್ಣನ ಅಪೂರ್ವ ಚಿತ್ರ, ಮುಂದಿನ ಪುಟಗಳಲ್ಲಿ ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ಪರ್ಯಾಯ ಕಾರ್ಯಕ್ರಮಗಳ ವಿವರಗಳು, ಪಲಿಮಾರು ಶ್ರೀಗಳ ಪಟ್ಟದ ದೇವರಾದ ರಾಮ, ಲಕ್ಷ್ಮಣ, ಸೀತೆಯರ ವಿಗ್ರಹಗಳ ಚಿತ್ರ, ಬಂಗಾರದ ತೊಟ್ಟಿಲಿನಲ್ಲಿರುವ ಉಡುಪಿ ಶ್ರೀಕೃಷ್ಣ, ಚಿನ್ನದ ರಥ, ಲಕ್ಷ ತುಳಸಿ ಅರ್ಚನೆಯ ಶ್ರೀಕೃಷ್ಣ, ಪಲಿಮಾರು ಶ್ರೀಗಳು ಶ್ರೀಕೃಷ್ಣನಿಗೆ ಅಭಿಷೇಕ ಮಾಡುವ ಧನ್ಯತೆಯ ಕ್ಷಣ… ಹೀಗೆ ಒಂದೊಂದು ಪುಟವೂ ಆಕರ್ಷಕ. ಕೊನೆಯ ಪುಟ ತಿರುವಿದಾಗ ಶ್ರೀಕೃಷ್ಣನ ದರ್ಶನ ಮಾಡಿ ಗರ್ಭಗುಡಿಯ ಹಿಂಭಾಗ ಬಂದು ಪಾವನ ಭಾವ ದೊಂದಿಗೆ ಗರ್ಭಗುಡಿಯ ಸನಿಹದಿಂದ ಹೊರಡಲು ಅನುವಾಗುವ ಅನುಭವ !

ಉಡುಪಿ ಕೃಷ್ಣಮಠಕ್ಕೆ ಆಗಮಿಸುವ ಭಕ್ತರಿಗೀಗ ಇನ್ನೊಂದು ಆಕರ್ಷಣೆ ತಾಣವೆಂದರೆ ಅದು ಪರ್ಯಾಯೋತ್ಸವ “ಉಗ್ರಾಣ’. ಪ್ರತಿನಿತ್ಯ ಹೊರೆಕಾಣಿಕೆಗಳು ಸಮರ್ಪಣೆಯಾಗುತ್ತಿದ್ದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಹೊರೆಕಾಣಿಕೆಯಲ್ಲಿ ಬಂದ ಸಾಮಾಗ್ರಿಗಳನ್ನು ಆಕರ್ಷಕವಾಗಿ ಜೋಡಿಸಿಡುತ್ತಿದ್ದಾರೆ.

ಹೊರೆಕಾಣಿಕೆ ಹೊತ್ತ ವಾಹನಗಳು ಉಗ್ರಾಣದತ್ತ ಆಗಮಿಸುತ್ತಿದ್ದಂತೆಯೇ ಮಹಿಳೆಯರೂ ಸೇರಿದಂತೆ ಯೋಜನೆಯ ಸದಸ್ಯರು ಅಕ್ಕಿ, ತರಕಾರಿ ಸೇರಿದಂತೆ ವಿವಿಧ ಪರಿಕರಗಳನ್ನು ನಿಗದಿತ ಸ್ಥಳದಲ್ಲಿ ಚೊಕ್ಕಟವಾಗಿ ಅತ್ಯಂತ ಉಮೇದಿನಿಂದ ಸಂಗ್ರಹಿಸಿಡುತ್ತಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English