ಜೈಲ್‌ ಭರೋ ಜಪ: ಇಂದು ರಾಜ್ಯಾದ್ಯಂತ ಪ್ರತಿಭಟನೆ

3:42 PM, Friday, January 12th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

shobha-karandlajeಬೆಂಗಳೂರು: ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸಂಘಟನೆಯನ್ನು ಉಗ್ರಗಾಮಿಗಳಿಗೆ ಹೋಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ವಿರುದ್ಧ ರಾಜ್ಯ ಬಿಜೆಪಿ ಶುಕ್ರವಾರ “ನಾವು ಬಿಜೆಪಿ, ನಾವು ಆರ್‌ಎಸ್‌ಎಸ್‌- ತಕ್ಷಣ ನಮ್ಮನ್ನು ಬಂಧಿಸಿ ಜೈಲಲ್ಲಿಡಿ’ ಎಂಬ ಘೋಷಣೆಯೊಂದಿಗೆ ಜೈಲ್‌ ಭರೋ ಹೋರಾಟಕ್ಕೆ ತೀರ್ಮಾನಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ದಿನೇಶ್‌ ಗುಂಡೂರಾವ್‌ ಬಹಿರಂಗ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ನಾವು ಬಿಜೆಪಿ, ನಾವು ಆರ್‌ಎಸ್‌ಎಸ್‌, ತಕ್ಷಣ ನನ್ನನ್ನು ಬಂಧಿಸಿ ಜೈಲಿನಲ್ಲಿಡಿ ಎಂಬ ಘೋಷಣೆಯೊಂದಿಗೆ ರಾಜ್ಯಾದ್ಯಂತ ಶುಕ್ರವಾರ ಹಾಗೂ ಬೆಂಗಳೂರಿನಲ್ಲಿ ಶನಿವಾರ ಪ್ರತಿಭಟನೆ ನಡೆಸುತ್ತೇವೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಾದ್ಯಂತ ನೆಲಕಚ್ಚುತ್ತಿರುವ ಕಾಂಗ್ರೆಸ್‌ ಕರ್ನಾಟಕದಲ್ಲಿರುವ ತನ್ನ ಸರ್ಕಾರ ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಮತ್ತೆ ರಾಜ್ಯದಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡುತ್ತಿದೆ. ಹಿಂದೂಗಳ ಹತ್ಯೆ ಮಾಡುತ್ತಿರುವ ಪಿಎಫ್ಐನ ರಾಜಕೀಯ ಸಂಘಟನೆ ಎಸ್‌ಡಿಪಿಐ ಜತೆ ರಾಜಕೀಯ ಹೊಂದಾಣಿಕೆ ಮಾಡಿಕೊಳ್ಳುವ ಉದ್ದೇಶದಿಂದ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸಂಘಟನೆಗಳನ್ನು ಗುರಿ ಮಾಡಿ ಉಗ್ರಗಾಮಿ ಸಂಘಟನೆಗಳು ಎಂದು ಹೇಳುತ್ತಿದೆ ಎಂದು ಆರೋಪಿಸಿದರು.

ಕಳೆದ 75-80 ವರ್ಷಗಳಿಂದ ಭಾರತದಲ್ಲಿ ದೇಶಭಕ್ತಿ ಮತ್ತು ರಾಷ್ಟ್ರಸೇವೆ ಮಾಡುತ್ತಿರುವ ಆರ್‌ಎಸ್‌ಎಸ್‌ ಸಂಘಟನೆ, ಅಟಲ್‌ಬಿಹಾರಿ ವಾಜಪೇಯಿಯಂಥವರು ಕಟ್ಟಿ ಬೆಳೆಸಿದ ಬಿಜೆಪಿಯನ್ನು ಉಗ್ರರು, ಜಿಹಾದಿಗಳು ಎನ್ನುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಬೇಜವಾಬ್ದಾರಿ ಪ್ರದರ್ಶನ ಮಾಡಿದ್ದಾರೆ. ಇವರಿಗೆ ಬೆಂಬಲವಾಗಿ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರೂ ವರ್ತಿಸುತ್ತಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಪಿಎಫ್ಐ ಮತ್ತು ಅದರ ರಾಜಕೀಯ ಸಂಘಟನೆ ಎಸ್‌ಡಿಪಿಐ ಕಾರ್ಯಕರ್ತರ ವಿರುದ್ಧ ದಾಖಲಿಸಿದ್ದ 175 ಪ್ರಕರಣಗಳನ್ನು ಹಿಂಪಡೆಯಲಾಯಿತು. ಇದಾದ ನಂತರ ಆ ಸಂಘಟನೆಗಳಿಂದ ಹಿಂದೂ ಕಾರ್ಯಕರ್ತರ ಹತ್ಯೆ ಮುಂದುವರಿಯಿತು.

ಬೆಂಗಳೂರಿನ ರುದ್ರೇಶ್‌ ಮತ್ತು ದಕ್ಷಿಣ ಕನ್ನಡದ ಶರತ್‌ ಮಡಿವಾಳ ಹತ್ಯೆಯಲ್ಲಿ ಈ ಸಂಘಟನೆಯವರು ಸಿಕ್ಕಿಬಿದ್ದು ಜೈಲು ಸೇರಿದರೂ ಆ ಸಂಘಟನೆಗಳಿಗೆ ಕುಮ್ಮಕ್ಕು, ರಕ್ಷಣೆ ಕೊಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಇವೆರಡೂ ಸಂಘಟನೆಗಳು ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ಗೆ ಬೆಂಬಲ ನೀಡಬೇಕು ಎಂದು ಮಾತುಕತೆ ನಡೆಸಲಾಗುತ್ತಿದೆ. ವೋಟ್‌ಬ್ಯಾಂಕ್‌ ಮತ್ತು ಅಧಿಕಾರದ ಕುರ್ಚಿಗಾಗಿ ಮುಖ್ಯಮಂತ್ರಿಗಳು ಈ ಸಂಘಟನೆಗೆ ಬೆಂಬಲಿಸುತ್ತಾ ದೇಶವನ್ನೇ ಬಲಿಕೊಡುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇನ್ನೊಂದೆಡೆ ಕೇರಳದಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದಾಗ ಅಸ್ತಿತ್ವ ಉಳಿಸಿಕೊಳ್ಳಲು ಪಿಎಫ್ಐನಂತಹ ಭಯೋತ್ಪಾದಕ ಸಂಘಟನೆಗೆ ಕುಮ್ಮಕ್ಕು ನೀಡಿದ್ದ ಅಲ್ಲಿನ ಸಚಿವರಾಗಿದ್ದ ವೇಣುಗೋಪಾಲ್‌ ಅವರು ಎಐಸಿಸಿ ಉಸ್ತುವಾರಿಯಾಗಿ ರಾಜ್ಯಕ್ಕೆ ಬಂದ ಮೇಲೆ ಕರ್ನಾಟಕದಲ್ಲೂ ಕೇರಳ ಮಾದರಿಯಲ್ಲಿ ಪಿಎಫ್ಐನಂತಹ ಭಯೋತ್ಪಾದನಾ ಸಂಘಟನೆಗಳ ಪರ ನಿಂತು ಅದನ್ನು ನಿಷೇಧಿಸಲು ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದಾರೆ. ಆದ್ದರಿಂದ ಎಐಸಿಸಿ ಆಧ್ಯಕ್ಷ ರಾಹುಲ್‌ ಗಾಂಧಿ ಅವರು ಕೂಡಲೇ ವೇಣುಗೋಪಾಲ್‌ ಅವರನ್ನು ರಾಜ್ಯ ಉಸ್ತುವಾರಿ ಜವಾಬ್ದಾರಿಯಿಂದ ವಾಪಸ್‌ ಕರೆಸಿಕೊಳ್ಳಬೇಕು ಹಾಗೂ ಜವಾಬ್ದಾರಿಯಿಂದ ಮಾತನಾಡುವಂತೆ ಮುಖ್ಯಮಂತ್ರಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಗೃಹ ಸಚಿವರಿಗೆ ಸೂಚಿಸಬೇಕು ಎಂದು ಆಗ್ರಹಿಸಿದರು.

ಕಳೆದುಕೊಂಡರೂ ಬುದ್ಧಿ ಬರಲಿಲ್ಲ ಉಗ್ರವಾದವನ್ನು ಬೆಂಬಲಿಸಿ ತಮ್ಮ ನಾಯಕರನ್ನು ಕಳೆದುಕೊಂಡರೂ ಕಾಂಗ್ರೆಸ್‌ಗೆ ಬುದ್ಧಿ ಬಂದಿಲ್ಲ. ಹೀಗಾಗಿ ಪಂಜಾಬ್‌ನಲ್ಲಿ ಖಾಲಿಸ್ತಾನ್‌ ಮೂವ್‌ಮೆಂಟ್‌, ಅಸ್ಸಾಂನಲ್ಲಿ ಉಲ್ಫಾ ಸಂಘಟನೆ, ತಮಿಳುನಾಡು – ಶ್ರೀಲಂಕಾದಲ್ಲಿ ಎಲ್‌ಟಿಟಿಇ ಸಂಘಟನೆ ಬೆಳೆಸಿದಂತೆ ಕರ್ನಾಟಕದಲ್ಲಿ ಪಿಎಫ್ಐ ಸಂಘಟನೆ ಬೆಳೆಸಲು ಬೆಂಬಲ ನೀಡುತ್ತಿದೆ ಎಂದು ಶೋಭಾ ಆರೋಪಿಸಿದ್ದಾರೆ. ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಉಗ್ರಗಾಮಿಗಳು, ಪ್ರತ್ಯೇಕತಾವಾದಿಗಳನ್ನು ಬೆಳೆಸಿಕೊಂಡು ಬರುತ್ತಿರುವ ಕಾಂಗ್ರೆಸ್‌ ಇದೀಗ ಕರ್ನಾಟಕದಲ್ಲಿ ಹಿಂದೂಗಳನ್ನು ಹತ್ಯೆ ಮಾಡುತ್ತಿರುವ ಪಿಎಫ್ಐ ಎಂಬ ಮೂಲಭೂತವಾದಿ ಸಂಘಟನೆಯನ್ನು ಬೆಂಬಲಿಸುತ್ತಾ ದೇಶದ್ರೋಹದ ಕೆಲಸಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು.

ಪಂಜಾಬ್‌ನಲ್ಲಿ ಸ್ವದೇಶಿಯರನ್ನೇ ದೇಶದ ವಿರುದ್ಧ ಎತ್ತಿಕಟ್ಟಿ ಖಾಲಿಸ್ತಾನ್‌ ಹೋರಾಟಕ್ಕೆ ಪ್ರೇರೇಪಿಸಿದರು. ಬ್ರಿಂದನ್‌ವಾಲೆಯನ್ನೂ ಬೆಂಬಲಿಸಿದರು. ಈ ಖಾಲಿಸ್ತಾನ್‌ ಹೋರಾಟದಿಂದ ಕಾಂಗ್ರೆಸ್‌ ತನ್ನ ನಾಯಕಿ ಹಾಗೂ ದೇಶದ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯನ್ನು ಕಳೆದುಕೊಳ್ಳಬೇಕಾಯಿತು. ಅದೇರೀತಿ ತಮಿಳುನಾಡು ಮತ್ತು ಶ್ರೀಲಂಕಾದಲ್ಲಿ ಎಲ್‌ಟಿಟಿಇಗೆ ಬೆಂಬಲ ನೀಡಿ ಅದನ್ನು ಪೋಷಿಸಿದ ಕಾಂಗ್ರೆಸ್‌ ಅದೇ ಸಂಘಟನೆಯಿಂದ ರಾಜೀವ್‌ ಗಾಂಧಿ ಅವರನ್ನು ಕಳೆದುಕೊಂಡಿತು. ಉಲ್ಫಾ ಸಂಘಟನೆಗೆ ಶಸ್ತ್ರಾಸ್ತ್ರ, ಹಣಕಾಸು ನೆರವು ನೀಡಿ ಅದು ಬೆಳೆಯುವಂತೆ ಮಾಡಿತು. ಇದೇ ರೀತಿ ಅನೇಕ ದೇಶವಿರೋಧಿ ಸಂಘಟನೆಗಳನ್ನು ಬೆಳೆಸಿದ ಕೀರ್ತಿ ಕಾಂಗ್ರೆಸ್‌ನದ್ದೇ ಹೊರತು ಬಿಜೆಪಿಯದ್ದಲ್ಲ ಎಂದರು.

ಹಿಂದೆ ಕಾಂಗ್ರೆಸ್‌ ಮುಖಂಡರು ಪಂಜಾಬ್‌, ಅಸ್ಸಾಂ, ತಮಿಳುನಾಡು, ಶ್ರೀಲಂಕಾದಲ್ಲಿ ಮಾಡಿದ ತಪ್ಪನ್ನು ಈಗ ಕರ್ನಾಟಕದಲ್ಲಿ ಮಾಡಲು ಹೊರಟಿದ್ದಾರೆ. ಯಾವ ಸಂಘಟನೆ 15ಕ್ಕಿಂತಲೂ ಹೆಚ್ಚು ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡಿದೆಯೋ ಆ ಸಂಘಟನೆಯನ್ನು ಪೋಷಿಸುತ್ತಿದೆ. ಈ ಹಿಂದೆ ಮಾಡಿದ ತಪ್ಪಿನಿಂದ ತಮ್ಮ ನಾಯಕರನ್ನು ಕಳೆದುಕೊಂಡರೂ ಅವರಿಗೆ ಬುದ್ಧಿ ಬಂದಿಲ್ಲ. ಅದರ ಬದಲು ದೇಶಪ್ರೇಮ ಮೆರೆಯುವ ಬಿಜೆಪಿ, ಆರ್‌ಎಸ್‌ಎಸ್‌ ಕುರಿತು ಉಗ್ರರು, ಜಿಹಾದಿಗಳು ಎಂದು ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷರು ಹೇಳುತ್ತಾರೆ ಎಂದು ಕಿಡಿ ಕಾರಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English