ಪುತ್ತೂರು: ಇಲ್ಲಿನ ಪಡೀಲಿನಲ್ಲಿ ಕಸದ ತೊಟ್ಟಿಯಲ್ಲಿ ರಾಷ್ಟ್ರಧ್ವಜ ಪತ್ತೆಯಾಗಿದ್ದು, ಜನರ ಮನಸ್ಥಿತಿ ಎಲ್ಲಿಗೆ ತಲುಪಿದೆ ಎನ್ನುವುದು ಬಹಿರಂಗವಾದಂತಾಗಿದೆ.
ಪುತ್ತೂರು- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ಸ್ವಚ್ಛ ಭಾರತ್ ತಂಡ ಶುಚಿಗೊಳಿಸುವ ವೇಳೆ ಕೃಷ್ಣಾ ಎಂಬವರಿಗೆ ರಾಷ್ಟ್ರಧ್ವಜ ಸಿಕ್ಕಿದೆ. ಇದನ್ನು ಜೋಪಾನವಾಗಿ ಮನೆಗೆ ತೆಗೆದುಕೊಂಡು ಹೋಗಿ, ತೆಗೆದಿರಿಸಿದ್ದಾರೆ. ರಾಮಕೃಷ್ಣ ಮಿಶನ್ ನೇತೃತ್ವದಲ್ಲಿ ನಡೆಯುತ್ತಿರುವ ಸ್ವಚ್ಛ ಭಾರತ್ ಕಾರ್ಯಕ್ರಮದಲ್ಲಿ ಪ್ರತಿದಿನ ಬೆಳಗ್ಗೆ ಸ್ವಚ್ಛತ ಕಾರ್ಯಕ್ರಮ ನಡೆಯುತ್ತಿದೆ. ಕೃಷ್ಣಾ ಅವರ ತಂಡ ತ್ಯಾಜ್ಯ ಹೆಕ್ಕುವುದು ಮಾತ್ರವಲ್ಲ, ಇದರ ಜತೆಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದೆ.
ರಸ್ತೆ ಬದಿಯಲ್ಲಿ ಕಸ ರಾಶಿ ಬಿದ್ದಿದರೆ, ಅದರ ಫೋಟೋ ತೆಗೆದು ಜಾಲತಾಣಗಳಲ್ಲಿ ಹರಿಯಬಿಡುತ್ತಾರೆ. ಜಾಗೃತಿ ಮೂಡಿಸುವ ಬರಹಗಳು ಇದರ ಜತೆಗಿರುತ್ತವೆ. ಶನಿವಾರ ಬೆಳಗ್ಗೆ ಇದೇ ರೀತಿ ಫೂಟೋ ತೆಗೆದು, ಮನೆಗೆ ಹೋಗಿ ಫೋಟೋ ವೀಕ್ಷಿಸಿದ್ದಾರೆ. ಆ ಸಂದರ್ಭ ಕಸದ ರಾಶಿಯಲ್ಲಿ ರಾಷ್ಟ್ರಧ್ವಜ ಇರುವುದು ಬೆಳಕಿಗೆ ಬಂದಿದೆ. ತತ್‌ಕ್ಷಣ ಪಡೀಲಿನಲ್ಲಿ ರಾಶಿ ಬಿದ್ದಿರುವ ಕಸದ ಹತ್ತಿರ ಬಂದು, ರಾಷ್ಟ್ರಧ್ವಜವನ್ನು ಕೈಗೆತ್ತಿಕೊಂಡಿದ್ದಾರೆ. ಶುಚಿಗೊಳಿಸಿ, ಮನೆಯಲ್ಲಿ ಜೋಪಾನವಾಗಿ ಇಟ್ಟುಕೊಂಡಿದ್ದಾರೆ.
ಭಾರತದ ಸಮಗ್ರತೆಯನ್ನು ಸಾರುವ ತಿರಂಗವನ್ನು ದೇಶದ ಪ್ರತಿಷ್ಠೆಯ ದ್ಯೋತಕ. ತಿರಂಗವನ್ನು ಹಿಡಿದುಕೊಳ್ಳುವ ರೀತಿ, ಧ್ವಜಾರೋಹಣ ಮಾಡುವ ಬಗ್ಗೆ ನಿಯಮವಿದೆ. ಇದನ್ನು ಉಲ್ಲಂಘಿಸುವುದು ಅಪರಾಧ ಎಂದು ಘೋಷಿಸಲಾಗಿದೆ. ಧ್ವಜವನ್ನು ನೆಲಕ್ಕೆ ಮುಖ ಮಾಡಿ ಹಿಡಿದುಕೊಳ್ಳುವುದು ಸರಿಯಲ್ಲ. ಹೀಗಿ ರುವಾಗ ಕಸದ ತೊಟ್ಟಿಯಲ್ಲಿ ಬಿದ್ದು ಸಿಕ್ಕಿರುವುದು ದುರಂತವೇ ಸರಿ.
ಅದ್ಯಾರು ರಾಷ್ಟ್ರಧ್ವಜವನ್ನು ತಂದು ಬಿಸಾಡಿದ್ದಾರೆ ಗೊತ್ತಿಲ್ಲ. ಆದರೆ ರಾಷ್ಟ್ರಧ್ವಜವನ್ನು ಕಸದ ತೊಟ್ಟಿಯಲ್ಲಿ ಬಿಸಾಡುವುದು ರಾಷ್ಟ್ರದ್ರೋಹದ ಕೆಲಸ. ಇದಕ್ಕೆ ಕಾನೂನು ಪ್ರಕಾರ ಕಠಿನ ಶಿಕ್ಷೆಯನ್ನುನೀಡಬಹುದು.
ತ್ಯಾಜ್ಯದಷ್ಟೇ ಮನಸ್ಸುಗಳು ಕೊಳಕಾಗಿವೆ ಎನ್ನುವುದಕ್ಕೆ ತೊಟ್ಟಿಯಲ್ಲಿ ರಾಷ್ಟ್ರಧ್ವಜ ಬಿಸಾಡಿರುವುದು ಸಾಕ್ಷಿ. ಪಡೀಲಿನ ಕಸದ ತೊಟ್ಟಿಯಲ್ಲಿ ರಾಷ್ಟ್ರಧ್ವಜ ಸಿಕ್ಕಿರುವುದು ವಿಪರ್ಯಾಸ. ಆದರೆ ಯಾರು ಬಿಸಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಈ ಪ್ರದೇಶದಲ್ಲಿ ಕಸ ಹಾಕಬಾರದು ಎಂದು ಬೋರ್ಡ್ ಹಾಕಲಾಗಿದೆ. ಆದರೂ ಕಸ ಹಾಕಿದ್ದಾರೆ. ಕಸದ ಜತೆಗೆ ರಾಷ್ಟ್ರಧ್ವಜವನ್ನು ಹಾಕಲಾಗಿದೆ.
Click this button or press Ctrl+G to toggle between Kannada and English