ಮಂಗಳೂರು: ಬಿಜೆಪಿ ಮತ್ತು ಆರ್.ಎಸ್.ಎಸ್ ನವರು ಉಗ್ರರು ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ತೀವ್ರ ಖಂಡನೆ ವ್ಯಕ್ತಪಡಿಸಿವೆ. ಈ ಕುರಿತು ಶುಕ್ರವಾರ ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿ.ಎಚ್.ಪಿ ಪ್ರಾಂತ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್, “ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಈ ರೀತಿಯ ಹೇಳಿಕೆ ನೀಡುವುದು ಖಂಡನೀಯ,” ಎಂದು ಹೇಳಿದರು. “ಈ ಕೂಡಲೇ ಮುಖ್ಯಮಂತ್ರಿ ಅವರು ಬಹಿರಂಗ ಕ್ಷಮೆ ಕೇಳಿ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು,” ಎಂದು ಅವರು ಆಗ್ರಹಿಸಿದರು.
‘ಬಿಜೆಪಿ, ಆರ್ ಎಸ್ ಎಸ್, ಬಜರಂಗದಳದವರೇ ಉಗ್ರಗಾಮಿಗಳು’ “ರಾಜ್ಯ ಸರಕಾರ ಸಾಧನಾ ಸಮಾವೇಶ ಕಾರ್ಯಕ್ರಮ ಮಾಡುತ್ತಿದೆ. ಆದರೆ, ಸಮಾವೇಶದಲ್ಲಿ ತಮ್ಮ ಅಭಿವೃದ್ಧಿ ಕಾರ್ಯಗಳನ್ನು ಹೇಳುವ ಬದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂ ಸಂಘಟನೆಗಳನ್ನು ವಿರೋಧಿಸುತ್ತಿದ್ದಾರೆ,” ಎಂದು ಅವರು ದೂರಿದರು. “ಸಿಎಂ ಮತಿ ಭ್ರಮಣೆಯಾದಂತೆ ವರ್ತಿಸುತ್ತಿದ್ದಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದ ಪುರಾಣಿಕ್, “ತನ್ನ ಸ್ಥಾನದ ಯೋಗ್ಯತೆ ಮರೆತು ಸಂಘಟನೆಗಳ ಬಗ್ಗೆ ಕೀಳಾಗಿ ಮಾತನಾಡುವುದು ಖಂಡನೀಯ,” ಎಂದು ಹೇಳಿದರು.
“ಅಹಿಂದವನ್ನು ಪ್ರತಿಪಾದಿಸುತ್ತಿದ್ದ ಸಿಎಂ ಇಂದು ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ತಾನೊಬ್ಬ ಹಿಂದೂ ಎನ್ನುತ್ತಿದ್ದಾರೆ. ಅವರು ಹಿಂದೂ ಎಂದಾದರೆ ಉಡುಪಿ ಭೇಟಿ ಸಂದರ್ಭದಲ್ಲಿ ಕೃಷ್ಣಮಠಕ್ಕೆ ಯಾಕೆ ಬೇಡಿ ನೀಡಿಲ್ಲ?” ಎಂದು ಅವರು ಪ್ರಶ್ನಿಸಿದರು. “ಅವರು (ಸಿದ್ದರಾಮಯ್ಯ) ಹಿಂದೂ ಎಂದು ಹೇಳುವುದಾದರೆ ಗೋಹತ್ಯೆಯನ್ನು ಯಾಕೆ ನಿಷೇಧಿಸಿಲ್ಲ,” ಎಂದು ಪುರಾಣಿಕ್ ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ದೇಶಪ್ರೇಮಿಗಳ ಸಂಘಟನೆಯಾಗಿದೆ. ಗೋಹತ್ಯೆ ಹಾಗೂ ಹೆಣ್ಣು ಮಕ್ಕಳ ಮತಾಂತರ ವಿಷಯ ಬಂದಾಗ ಧ್ವನಿ ಎತ್ತುತ್ತೇವೆ. ವಿಹಿಂಪಾ, ಬಜರಂಗದಳವನ್ನು ದೇಶದ್ರೋಹಿ ಸಂಘಟನೆಗಳೊಂದಿಗೆ ಹೋಲಿಸಬಾರದು ಏಂದು ಅವರು ಎಚ್ಚರಿಕೆ ನೀಡಿದರು.
Click this button or press Ctrl+G to toggle between Kannada and English