ಬರೋಬ್ಬರಿ 176 ಸಲ ಶಬರಿಮಲೆ ಯಾತ್ರೆ ಕೈಗೊಂಡ ಸುಳ್ಯದ ಶಿವಪ್ರಕಾಶ್‌‌!

10:35 AM, Tuesday, January 16th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

shabarimaleಮಂಗಳೂರು: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವರ ದರ್ಶನಕ್ಕೆ ಏನೇನೋ ಹರಕೆ ಹೊತ್ತವರು, ಇನ್ನು ಕೆಲವರು ವರ್ಷಕ್ಕೊಮ್ಮೆ ವ್ರತದಂತೆ ಹೋಗುವವರೂ ಇದ್ದಾರೆ. 18 ವರ್ಷ ಇರುಮುಡಿ ಹೊತ್ತು ‘ಪದಿನೆಟ್ಟಾಂಪಡಿ’ ಏರಿ ಸ್ವಾಮಿ ದರ್ಶನ ಮಾಡಿ ಗುರುಸ್ವಾಮಿ ಎನಿಸಿಕೊಳ್ಳುತ್ತಾರೆ. ಆದರೆ, ಇಲ್ಲೊಬ್ಬರು ಬರೋಬ್ಬರಿ 176 ಬಾರಿ ಶಬರಿಮಲೆ ಯಾತ್ರೆ ಕೈಗೊಂಡು ದಾಖಲೆ ಮಾಡಿದ್ದಾರೆ.

ಧನುರ್ಮಾಸದಲ್ಲಿ ಕಪ್ಪು ಶಾಲು ಧರಿಸಿ, ಹಣೆಯಲ್ಲಿ ವಿಭೂತಿ ಹಚ್ಚಿ, ಕೊರಳಲ್ಲಿ ರುದ್ರಾಕ್ಷಿ ಧರಿಸಿಕೊಂಡ ಅಯ್ಯಪ್ಪ ಭಕ್ತಾದಿಗಳನ್ನು ಅಲ್ಲಲ್ಲಿ ಕಾಣುತ್ತೇವೆ. ಅದರೆ, ಪುತ್ತೂರು ತಾಲೂಕು ಪಂಚಾಯತ್ ಕಚೇರಿಯಲ್ಲಿ ಪ್ರಭಾರ ವ್ಯವಸ್ಥಾಪಕರಾಗಿರುವ ಶಿವಪ್ರಕಾಶ್ ವರ್ಷಪೂರ್ತಿ ಅಯ್ಯಪ್ಪ ವ್ರತಧಾರಿಗಳಾಗಿರುತ್ತಾರೆ. ಅಯ್ಯಪ್ಪನ ಪರಮಭಕ್ತರಾಗಿರುವ ಇವರು ಕಳೆದ 34 ವರ್ಷಗಳಲ್ಲಿ 176 ಬಾರಿ ಶಬರಿಮಲೆ ಯಾತ್ರೆ ಮಾಡಿದ್ದಾರೆ.

ಶಿವಪ್ರಕಾಶ್ ಅವರು ಅದೊಂದು ದಿನ 48 ತಿಂಗಳು ನಿರಂತರ ಮಾಲೆ ಹಾಕಿ ಬರುತ್ತೇನೆ ಎಂದು ಅಯ್ಯಪ್ಪಸ್ವಾಮಿ ಎದುರು ಸಂಕಲ್ಪ ಮಾಡಿಕೊಂಡರಂತೆ. ಅಂದಿನಿಂದ 48 ತಿಂಗಳು ಕಳೆದರೂ ಶಿವಪ್ರಕಾಶ್ ಶಬರಿಮಲೆಗೆ ಹೋಗೋದು ನಿಲ್ಲಿಸಿಲ್ಲ. 1983ರಿಂದ 1991ರ ಅವಧಿಯಲ್ಲಿ ಕೆಲವು ಬಾರಿ ಶಬರಿಮಲೆಗೆ ಹೋಗಿ ಬಂದ ಶಿವಪ್ರಕಾಶ್, 1991ರಿಂದ ಪ್ರಮಾಣ ಹೆಚ್ಚಿಸಿದರು. 2004ರಲ್ಲಿ ಹೊಸ ತಿರುವು ಸಿಕ್ಕಿತು. 4 ವರ್ಷ ತಿಂಗಳಿಗೆ ಒಂದರಂತೆ 48 ತಿಂಗಳು ನಿರಂತರ ಮಾಲೆ ಹಾಕಿ ಹೋಗುವೆ ಎಂದು ಸಂಕಲ್ಪ ಕೈಗೊಂಡರಂತೆ.

2008ರಲ್ಲಿ ಈ ಅಭಿಯಾನ ಮುಗಿಯಬೇಕಿತ್ತು. ಯಾಕೋ ನಿಲ್ಲಿಸಲು ಮನಸಾಗಲಿಲ್ಲ. ಪರಿಣಾಮ 2018ರ ಜನವರಿಗೆ ಭರ್ತಿ 13 ವರ್ಷ ತುಂಬುತ್ತಿದೆ. ಈ ಅವಧಿಯ 156 ತಿಂಗಳಲ್ಲಿ 156 ಬಾರಿ ಅಯ್ಯಪ್ಪ ದರ್ಶನ ಮಾಡಿ ಬಂದಿದ್ದೇನೆ. ಹಿಂದಿನ ಯಾತ್ರೆಯನ್ನೂ ಸೇರಿಸಿದರೆ ಅದು 176ಕ್ಕೇರಿದೆ. ಜನವರಿ ಇಂದು 177ನೇ ಯಾತ್ರೆ ನಡೆಯಲಿದೆ ಎನ್ನುತ್ತಾರೆ ಶಿವಪ್ರಕಾಶ್.

ವಿಶೇಷವೆಂದರೆ ಪ್ರತೀ ಬಾರಿ ಮಾಲೆ ಧರಿಸಿ, ವ್ರತಾಚರಣೆ ಕೈಗೊಂಡು ಇರುಮುಡಿ ಹೊತ್ತುಕೊಂಡೇ ಹೋಗಿ ಬಂದಿದ್ದಾರೆ. ಇನ್ನೂ ವಿಶೇಷವೆಂದರೆ ಒಂದೇ ಒಂದು ಬಾರಿಯೂ ಒಬ್ಬರೇ ಹೋಗಿಲ್ಲ. ಪ್ರತೀ ಬಾರಿ ಶಿಷ್ಯ ವೃಂದಕ್ಕೆ ಮಾಲೆ ಹಾಕಿ ಕರೆದುಕೊಂಡೇ ಹೋಗುತ್ತಾರೆ. ಸರಾಸರಿ ಪ್ರತೀ ತಿಂಗಳು 30 ಸ್ವಾಮಿಗಳು ಇವರ ಜೊತೆಯಿರುತ್ತಾರೆ.

ಸುಳ್ಯ ತಾಲೂಕಿನ ಅಡ್ಪಂಗಾಯದ ನಿವಾಸಿಯಾಗಿರುವ ಶಿವಪ್ರಕಾಶ್, ಪಿಯುಸಿ ಕಲಿಯುತ್ತಿರುವಾಗ ಮಾಧವ ನಾಯರ್ ಗುರುಸ್ವಾಮಿ ಜತೆಗೆ ಶಬರಿಮಲೆ ಯಾತ್ರೆ ಕೈಗೊಂಡರಂತೆ. ಸನ್ನಿಧಾನಕ್ಕೆ ಹೋಗಿ ಬಂದ ಕೂಡಲೇ ಇನ್ನೊಮ್ಮೆ ಹೋಗೋಣ ಅನಿಸುತ್ತದೆ. ಹಾಗೆ ಆರಂಭಗೊಂಡಿದ್ದು ಈಗ ತಿಂಗಳಿಗೊಂದರಂತೆ ಸಾಗುತ್ತಿದೆ. ನನ್ನ ಜತೆ ಬಂದವರು ಹಲವರಿಗೆ ವಿಷಯ ತಿಳಿಸಿದ ಕಾರಣ ಪ್ರತೀ ತಿಂಗಳ ಯಾತ್ರೆಗೆ ಮೊದಲೇ ಭಕ್ತರು ಬುಕ್ ಮಾಡುತ್ತಾರೆ. 30ಕ್ಕೆ ಸೀಮಿತ ಮಾಡಿಕೊಂಡು ಕರೆದೊಯ್ಯುತ್ತೇನೆ. ಉಳಿದವರಿಗೆ ಮುಂದಿನ ತಿಂಗಳು ಅವಕಾಶ ನೀಡುತ್ತೇನೆ. ಈ ಸರಣಿ ಮುಂದುವರಿದುಕೊಂಡೇ ಬಂದಿದೆ ಎನ್ನುತ್ತಾರೆ ಅವರು.

ಒಂದು ಸಾರಿ ಯಾತ್ರೆ ಆರಂಭದ ಮುನ್ನಾ ದಿನ ಹೊಟ್ಟೆನೋವು ತೀವ್ರಗೊಂಡಿತು. ಮುಂಜಾನೆಯವರೆಗೆ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಮತ್ತೆ ಡಿಸ್ಚಾರ್ಜ್‌ ಮಾಡಿಸಿಕೊಂಡು ಹೋದರಂತೆ. ಶಬರಿಮಲೆಯಲ್ಲಿ ಮತ್ತೆ ನೋವು ಉಲ್ಬಣಗೊಂಡಾಗ ಅಲ್ಲೇ ಚೆಕಪ್ ಮಾಡಿಸಿ ಔಷಧ ಸ್ವೀಕರಿಸಿದರಂತೆ. ‘ಈ ಅವಧಿಯಲ್ಲಿ ಅಯ್ಯಪ್ಪ ಪ್ರಸಾದವನ್ನೇ ನೀರಲ್ಲಿ ಬೆರೆಸಿ ಕುಡಿಯುತ್ತಿದ್ದೆ. ಅಂದು ಗುಣವಾದ ವ್ಯಾಧಿ ಮತ್ತೆಂದೂ ಬಾಧಿಸಿಲ್ಲ’ ಎನ್ನುತ್ತಾರೆ ಶಿವಪ್ರಕಾಶ್.

12 ಮತ್ತು 48ನೇ ತಿಂಗಳಲ್ಲಿ ಸುಳ್ಯದಿಂದ ಪಾದಯಾತ್ರೆ ಮೂಲಕ ಶಬರಿಮಲೆ ಹೋಗಿ ಬಂದೆ. ತಿಂಗಳ ಯಾತ್ರೆ ರೈಲಿನಲ್ಲಾದರೆ ಜನವರಿಯ ಯಾತ್ರೆ ಮಾತ್ರ ಬಸ್‌‌‌ನಲ್ಲಿ ಹೋಗುತ್ತೇವೆ. ಪ್ರತಿ ತಿಂಗಳು ಇರುಮುಡಿ ಕಟ್ಟುವ ವೇಳೆ ಪೂಜೆ, ಅನ್ನದಾನ ಮಾಡುತ್ತೇವೆ. ಈ ಸರಣಿ ಯಾತ್ರೆ ಆರಂಭಗೊಂಡ ಮೇಲೆ ಒಮ್ಮೆಯೂ ವಿಘ್ನ ಬಂದಿಲ್ಲ. ಯಾವುದೇ ದಾಖಲೆಗಾಗಿ ಯಾತ್ರೆ ಮಾಡುತ್ತಿಲ್ಲ. ಅಯ್ಯಪ್ಪನ ಮೇಲಿನ ಭಕ್ತಿಯಿಂದ ಹೋಗುತ್ತಿದ್ದೇನೆ. ನಾನಾಗಿ ನಿಲ್ಲಿಸಲಾರೆ. ಅಯ್ಯಪ್ಪ ಎಲ್ಲಿಯವರೆಗೆ ಆರೋಗ್ಯ, ಶಕ್ತಿ ನೀಡುತ್ತಾನೋ ಅಲ್ಲಿಯತನಕ ಪ್ರತೀ ತಿಂಗಳು ಹೋಗಿ ಬರುವೆ ಎನ್ನುವುದು ಶಿವಪ್ರಕಾಶ್ ಮಾತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English