ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರಾವಳಿ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಲ್ಲಿನ ಹಾಲಿ ಶಾಸಕರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಥಾನ ಖಾತ್ರಿ ಬಗ್ಗೆ ನೀಡುತ್ತಿರುವ ಅಭಯ ಕಾಂಗ್ರೆಸ್ ಶಾಸಕರಲ್ಲಿ ನಿರಾಳ ಭಾವ ಮೂಡಿಸಿದೆ. ಇನ್ನೊಂದೆಡೆ ಟಿಕೇಟು ಆಕಾಂಕ್ಷಿಗಳಲ್ಲಿ ತಳಮಳ ಸೃಷ್ಟಿಸಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಶಾಸಕರು ಪ್ರತಿನಿಧಿಸುತ್ತಿರುವ 10 ವಿಧಾನ ಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಜ. 7 ಹಾಗೂ 8ರಂದು ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಸಿಎಂ ಸಿದ್ದರಾಮಯ್ಯ, ಅಲ್ಲಿನ ಹಾಲಿ ಶಾಸಕರ ಬಗ್ಗೆ ಮೆಚ್ಚುಗೆಯ ನುಡಿಗಳನ್ನು ಆಡುತ್ತಾ ಮುಂದಿನ ಚುನಾವಣೆಯಲ್ಲಿ ಅವರೇ ಸ್ಪರ್ಧಿಸುವಂತೆ ಸೂಚಿಸಿದ್ದಾರೆ, ಅವರನ್ನು ಗೆಲ್ಲಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.
ಈ ಮೂಲಕ ಪಕ್ಷದ ಹಾಲಿ ಶಾಸಕರಲ್ಲಿ ಟಿಕೇಟು ಖಾತ್ರಿಯ ಭರವಸೆ ತುಂಬಿದ್ದಾರೆ. ಸ್ವಲ್ಪ ಸಮಯದ ಹಿಂದೆ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಅಲ್ಲಿನ ಹಾಲಿ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರೇ ಮುಂದಿನ ಬಾರಿಯೂ ಅಭ್ಯರ್ಥಿ ಎಂದು ಸಿಎಂ ಘೋಷಣೆ ಮಾಡಿದ್ದರು.
ದ.ಕ. ಜಿಲ್ಲೆಯ ಬೆಳ್ತಂಗಡಿ, ಪುತ್ತೂರು ಹಾಗೂ ಮೂಡಬಿದಿರೆ ಹಾಗೂ ಉಡುಪಿ ಜಿಲ್ಲೆಯ ಕಾಪು, ಬೈಂದೂರು ವಿಧಾನಸಭಾ ಕ್ಷೇತ್ರಗಳ ಕಾರ್ಯಕ್ರಮಗಳ ವೇಳೆ ಅಲ್ಲಿನ ಹಾಲಿ ಶಾಸಕರೇ ಮುಂದಿನ ಅಭ್ಯರ್ಥಿಗಳು ಎಂಬ ಖಚಿತ ರೀತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಕರಾವಳಿಯ ಕಾಂಗ್ರೆಸ್‌ನಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ.
ಹಾಲಿ ಶಾಸಕರು, ಅವರ ಬೆಂಬಲಿಗರಿಗೆ ಟಿಕೇಟು ಖಾತ್ರಿಯ ಖುಷಿ ತಂದಿದೆ. ಇನ್ನೊಂದೆಡೆ ಈ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವ ಟಿಕೇಟು ಆಕಾಂಕ್ಷಿಗಳಲ್ಲಿ ತಳಮಳ ಸೃಷ್ಟಿಸಿದ್ದು, ಅವರು ಅಸಮಾಧಾನವನ್ನು ಪಕ್ಷದ ನಾಯಕರ ಮುಂದೆ ವ್ಯಕ್ತಪಡಿಸಲು ಆರಂಭಿಸಿದ್ದಾರೆ ಎನ್ನಲಾಗಿದೆ.
ಮೂಡಬಿದಿರೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅಭಯಚಂದ್ರ ಜೈನ್ ಈ ಬಾರಿ ಸ್ಥಾನವನ್ನು ಬೇರೆ ಅಭ್ಯರ್ಥಿಗೆ ಬಿಟ್ಟುಕೊಡುವ ಬಯಕೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಅಲ್ಲಿಂದ ಟಿಕೇಟಿಗಾಗಿ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ನಡುವೆ ಪೈಪೋಟಿ ನಡೆಯುತ್ತಿದೆ. ಈ ವಿದ್ಯಮಾನದ ನಡುವೆ ಮುಖ್ಯಮಂತ್ರಿ ಮೂಡಬಿದಿರೆಯ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ ಅಭಯಚಂದ್ರ ಜೈನ್ ಅವರೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸೂಚಿಸಿದ್ದಾರೆ. ಇದು ಆಕಾಂಕ್ಷಿಗಳ ಪಾಲಿಗೆ ಒಂದಿಷ್ಟು ಹಿನ್ನಡೆ ಉಂಟು ಮಾಡಿದೆ.
ಪುತ್ತೂರಿನಲ್ಲಿ ಪ್ರಸ್ತುತ ಶಾಸಕಿ ಶಕುಂತಳಾ ಶೆಟ್ಟಿಯವರ ಬಗ್ಗೆ ಪಕ್ಷದ ಒಂದು ಬಣ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಬೇರೆಯವರನ್ನು ಕಣಕ್ಕಿಳಿಸಲಾಗುತ್ತದೆ ಎಂಬುದಾಗಿ ಊಹಾಪೋಹ ಕೇಳಿ ಬರುತ್ತಿತ್ತು. ಈಗ ಮುಖ್ಯಮಂತ್ರಿಗಳು ಶಕುಂತಳಾ ಶೆಟ್ಟಿ ಅವರೇ ಮುಂದಿನ ಬಾರಿ ಇಲ್ಲಿಂದ ಸ್ಪರ್ಧಿಸುತ್ತಾರೆ ಎಂದು ಹೇಳುವ ಮೂಲಕ ಸದ್ಯ ಊಹೆಗಳಿಗೆ ತೆರೆ ಎಳೆದಿದ್ದಾರೆ.
ಬೆಳ್ತಂಗಡಿ ಕ್ಷೇತ್ರದಲ್ಲಿ ಹಾಲಿ ಶಾಸಕ ವಸಂತ ಬಂಗೇರ ಅವರೇ ಮುಂದಿನ ಬಾರಿ ಸ್ಪರ್ಧಿಸುವ ಬಗ್ಗೆ ಪಕ್ಷದಲ್ಲಿ ಪ್ರತಿರೋಧವಿಲ್ಲ. ಮಂಗಳೂರು ದಕ್ಷಿಣ, ಮಂಗಳೂರು ಉತ್ತರ ಹಾಗೂ ಮಂಗಳೂರು, ಕಾಪು, ಬೈಂದೂರು ವಿಧಾನಸಭಾ ಕ್ಷೇತ್ರಗಳಲ್ಲಿ ಟಿಕೇಟಿಗಾಗಿ ಕಾಂಗ್ರೆಸ್‌ನಲ್ಲಿ ಒಂದಷ್ಟು ಆಕಾಂಕ್ಷಿಗಳಿದ್ದಾರೆ. ಇದೀಗ ಮುಖ್ಯಮಂತ್ರಿಗಳು ಹಾಲಿ ಶಾಸಕರಿಗೆ ನೀಡಿರುವ ಅಭಯ ಆಕಾಂಕ್ಷಿಗಳಲ್ಲಿ ನಿರಾಸೆ ಮೂಡಿಸಿದೆ.
Click this button or press Ctrl+G to toggle between Kannada and English