ಮಂಗಳೂರು: ಪಕ್ಷದ ಪ್ರಚಾರ ಸಭೆಯ ಬ್ಯಾನರ್‌ಗಳಲ್ಲಿ ದೇವರ ಭಾವಚಿತ್ರ ಹಾಕಿ ಬಿಲ್ಲವ ಸಮುದಾಯಕ್ಕೆ ಅವಮಾನ ಮಾಡುವ ಬದಲು ಬಿಜೆಪಿಗೆ ತಾಕತ್ತಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಲ್ಲವರಿಗೆ ಟಿಕೆಟ್ ನೀಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸವಾಲು ಹಾಕಿದ್ದಾರೆ.
ಭಾರತೀಯ ಜನತಾ ಪಕ್ಷದ ಪ್ರಚಾರ ಸಭೆ ಬ್ಯಾನರ್‌ಗಳಲ್ಲಿ ದೈವ-ದೇವರ ಭಾವಚಿತ್ರ ಹಾಕಿಕೊಂಡು ಅವಮಾನ ಮಾಡಲಾಗಿದೆ ಎಂದು ಆಕ್ಷೇಪಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಸಮುದಾಯವೊಂದರ ಮತ ಗಳಿಸಲು ಅಧಿಕೃತ ರಾಜಕೀಯ ವೇದಿಕೆಯಲ್ಲಿ ಕೋಟಿ ಚೆನ್ನಯ್ಯರ ಭಾವಚಿತ್ರ ಬಳಸಿರುವುದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಇದು ಸಮುದಾಯಕ್ಕೆ ಮಾಡಿರುವ ಅವಮಾನ. ಪಡುಮಲೆಯಲ್ಲಿ ದೇವಿ ವನ, ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆಯ ಮೂಲಕ ಕಾಂಗ್ರೆಸ್ ಪಕ್ಷ ಸಮುದಾಯಕ್ಕೆ ಗೌರವ ನೀಡಿದೆ. ಆದರೆ ಬಿಜೆಪಿ ಅವಮಾನ ಮಾಡುತ್ತಿದೆ ಎಂದು ದೂರಿದರು.
ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಶ್ರೀರಾಮನ ಹೆಸರಿನಲ್ಲಿ ಮತಯಾಚಿಸಿ ಮಂದಿರ ಕಟ್ಟಿಸುವುದಕ್ಕಾಗಿ ಜನರಿಂದ ಹಣ ಸಂಗ್ರಹಿಸಿ ಅದನ್ನು ಪಕ್ಷದ ಪ್ರಚಾರಕ್ಕಾಗಿ ಬಳಸಿಕೊಂಡಿದ್ದ ಬಿಜೆಪಿಗೆ ಈ ಬಾರಿ ಕೋಟಿ ಚೆನ್ನಯ್ಯರ ಮೇಲೆ ಭಕ್ತಿ ಮೂಡಿದೆ. ಬಿಜೆಪಿ ಕೇವಲ ಕೋಮು ಭಾವನೆಯನ್ನು ಕೆರಳಿಸಿ ಯುವಕರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ಕೋಟಿ ಚೆನ್ನಯ್ಯರ ಭಾವಚಿತ್ರವನ್ನು ಪಕ್ಷದ ಬ್ಯಾನರ್‌ಗಳಲ್ಲಿ ಹಾಕುವ ಮೂಲಕ ಸಮುದಾಯಕ್ಕೆ ಅವಮಾನ ಮಾಡಿದೆ. ಚುನಾವಣಾ ಆಯೋಗ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
Click this button or press Ctrl+G to toggle between Kannada and English