ಮಂಗಳೂರು: ಇತ್ತೀಚೆಗೆ ಕರಾವಳಿಯ ಗಂಡುಕಲೆ ಹಾಗೂ ಸಾಂಪ್ರದಾಯಿಕ ಕಲೆ ಯಕ್ಷಗಾನದಲ್ಲೂ ಕೂಡಾ ವಿಭಿನ್ನ ಪ್ರಯೋಗಗಳು ಕಂಡುಬರುತ್ತಿದ್ದು, ಕೆಲವು ಸನ್ನಿವೇಶಗಳು ವಿವಾದವನ್ನೇ ಸೃಷ್ಟಿಸಿವೆ. ಇದೀಗ ಮತ್ತೊಂದು ಪ್ರಸಂಗದ ದೃಶ್ಯಾವಳಿಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬಡಗುತಿಟ್ಟಿನ ಡೇರೆ ಮೇಳವೊಂದು ಪ್ರದರ್ಶಿಸಿರುವ ‘ಪುಷ್ಪ ಚಂದನ’ದ ದೃಶ್ಯ ಇದು ಎನ್ನಲಾಗಿದ್ದು ಪಾತ್ರಧಾರಿಯೊಬ್ಬ ಡಬ್ಲ್ಯೂಡಬ್ಲ್ಯೂಇ ಮಾದರಿಯಲ್ಲಿ ಯುದ್ಧ ಮಾಡುವ ದೃಶ್ಯ ಚರ್ಚೆಗೆ ಗ್ರಾಸವಾಗಿದೆ.
ಪ್ರಬುದ್ಧ ಕಲೆಗಳಲ್ಲೊಂದಾದ ಯಕ್ಷಗಾನ ಹಲವು ವೈಶಿಷ್ಟ್ಯಗಳಿಗೆ ಹೆಸರಾಗಿದೆ. ಇಲ್ಲಿನ ನೃತ್ಯ, ಹಾಡು, ಮಾತುಗಾರಿಕೆ, ವೇಷಭೂಷಣಕ್ಕೆ ಅದರದ್ದೇ ಪರಂಪರೆಯಿದೆ. ಇಲ್ಲಿ ಶೃಂಗಾರವೂ ಸಾಂಕೇತಿಕ. ಎಲ್ಲಿಯೂ ಎಲ್ಲೆ ಮೀರುವ ಹಾಗಿಲ್ಲ. ಇನ್ನು ಯಕ್ಷಗಾನದಲ್ಲಿ ಬರುವ ಸಮರಕಲೆ ಅತ್ಯಂತ ಕಲಾತ್ಮಕ. ಜಟ್ಟಿಕಾಳಗ, ಮಲ್ಲಯುದ್ಧದ ಪಟ್ಟುಗಳಾದ ಮುಷ್ಠಿ ಯುದ್ಧ, ದೃಷ್ಟಿ ಯುದ್ಧ, ಭುಜಕ್ಕೆ ಭುಜ, ಕೈ ಕೈ ಮಿಲಾಯಿಸುವ ಸನ್ನಿವೇಶಗಳೇ ಇಲ್ಲಿರುತ್ತವೆ. ಇದೇ ಕಲೆಗಳು ಭರತನಾಟ್ಯ, ಕಥಕ್ಕಳಿಯಲ್ಲೂ ಕಾಣುತ್ತೇವೆ. ಆದರೆ, ಇದೆಲ್ಲವನ್ನೂ ಬಿಟ್ಟು ಯಕ್ಷಗಾನವು ಕುಸ್ತಿಯಂತಹ ಹೊಸ ಕಲೆಗೆ ಆಕರ್ಷಿತಗೊಂಡಿರುವುದು ಹಿರಿಯ ಕಲಾವಿದರಲ್ಲಿ ಅಸಮಾಧಾನ ಮೂಡಿಸಿದೆ.
`ಪುಷ್ಪ ಚಂದನ’ ಪ್ರಸಂಗದಲ್ಲಿ ಹಾಸ್ಯ ಕಲಾವಿದ ಸಹ ಪಾತ್ರಧಾರಿ ಜೊತೆ ಯುದ್ಧ ಮಾಡುವ ಸಂದರ್ಭದಲ್ಲಿ ಹೊಟ್ಟೆಗೆ ಶಿರದಿಂದ ಗುದ್ದುವ ಸನ್ನಿವೇಶ, ಹೆಗಲ ಮೇಲೆ ಹೊತ್ತು ಮೂರು ಸುತ್ತು ತಿರುಗಿಸಿ ಬಿಸಾಕುವುದು, ಬಿದ್ದ ಸಹಕಲಾವಿದನ ಮೇಲೆ ಅಂಗಾತ ಬೀಳುವುದು, ಕಾಲನ್ನು ಎತ್ತಿ ನೆಲಕ್ಕೆ ಹೊಡೆಯುವುದು, ಪೀಠವನ್ನೇರಿ ಹಾಸ್ಯ ಕಲಾವಿದ ಸಹಪಾತ್ರಧಾರಿಗೆ ಹೊಡೆಯುವುದು, ಕುರ್ಚಿಯನ್ನು ಆತನ ಮೇಲೆ ಎಸೆಯುವುದು ಸೇರಿದಂತೆ ಅನೇಕ ರಸ್ಲಿಂಗ್ ಪಟ್ಟುಗಳು ಪ್ರದರ್ಶನಗೊಳ್ಳುತ್ತದೆ. ನೆರೆದಿದ್ದ ಪ್ರೇಕ್ಷಕರೂ ಇದನ್ನು ಕಂಡು ಚಪ್ಪಾಳೆ ತಟ್ಟಿದ್ದಾರೆ.
ಆದರೆ, ಯಕ್ಷಗಾನದಲ್ಲೂ ಇದೆಲ್ಲಾ ಬೇಕೆ ಎಂಬಂತೆ ಈ ವಿಡಿಯೋ ತುಣುಕುಗಳು ಯಕ್ಷಪ್ರಿಯರನ್ನು ಚರ್ಚೆಗೆ ಎಳೆಯುತ್ತಿವೆ. ಇತ್ತೀಚೆಗೆ ಯಕ್ಷಗಾನದಲ್ಲೂ ಚಲನಚಿತ್ರದ ಹಾಗೆ ವಿಡಂಬನೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ದೊರಕುತ್ತಿವೆ. ಯಕ್ಷಗಾನದ ಚೌಕಟ್ಟಿನೊಳಗೆ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಬದಲಾವಣೆ ಮಾಡಿದರೆ ಕಲಾವಿದರೂ ಯಕ್ಷಗಾನವನ್ನು ಪರಿಪೂರ್ಣವಾಗಿ ಆಸ್ವಾದಿಸಬಹುದು ಎಂಬುದು ಕಲಾವಿದರ ಅಭಿಪ್ರಾಯ.
ಯಕ್ಷಗಾನದಲ್ಲಿ ಹಾಸ್ಯ ಕಲಾವಿದರು ಉಳಿದ ಪಾತ್ರಧಾರಿಗಳಂತಲ್ಲ. ಹಾಸ್ಯ ಕಲಾವಿದರಿಗೆ ಪ್ರಸ್ತುತ ವಿಷಯವನ್ನು ವಿಡಂಬನೆ ಮಾಡುವ ಸ್ವಾತಂತ್ರ್ಯವಿದೆ. ಇದಕ್ಕೆ ಯಕ್ಷಗಾನದ ಅನೇಕ ಪ್ರಸಂಗಗಳು ಸಾಕ್ಷಿಯಾಗಿವೆ. ಇದನ್ನು ಹಾಸ್ಯದ ತುಣುಕು ಎಂದಷ್ಟೇ ಪರಿಗಣಿಸಬೇಕು ವಿನಾ ಇಡೀ ಯಕ್ಷಗಾನಕ್ಕೆ ಅನ್ವಯಿಸುವುದು ತಪ್ಪು ಎನ್ನುತ್ತಾರೆ ಯಕ್ಷಗಾನ ಕಲಾವಿದ, ಕಲಾ ವಿಮರ್ಶಕ ಕದ್ರಿ ನವನೀತ್ ಶೆಟ್ಟಿ.
Click this button or press Ctrl+G to toggle between Kannada and English