ಲಾಟರಿ ಮೂಲಕ ಫಲಾನುಭವಿಗಳಿಗೆ ಫ್ಲ್ಯಾಟ್ ಹಂಚಿಕೆ ಪ್ರಕ್ರಿಯೆ

10:17 AM, Wednesday, January 17th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

ivan-desouzaಮಂಗಳೂರು: ವಸತಿ ರಹಿತ ಬಡವರಿಗೆ ಇದೇ ಮೊದಲ ಬಾರಿಗೆ ಫ್ಲ್ಯಾಟ್, ಅಪಾರ್ಟ್‌ಮೆಂಟ್‌ಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಫಲಾನುಭವಿಗಳ ಮೊತ್ತದಿಂದ ನಿರ್ಮಿಸಿಕೊಡಲು ನಿರ್ಧರಿಸಲಾಗಿದ್ದು, ಮಂಗಳವಾರ ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಲಾಟರಿ ಮೂಲಕ ಫ್ಲ್ಯಾಟ್‌ಗಳನ್ನು ಹಂಚಿಕೆ ಮಾಡುವ ಪ್ರಕ್ರಿಯೆ ನಡೆಯಿತು.

ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಮಾತನಾಡಿ, ನಗರದಲ್ಲಿ ಸೂಕ್ತ ಸ್ಥಳದ ಕೊರತೆಯಿಂದಾಗಿ ವಸತಿ ರಹಿತರಿಗೆ ಮನೆ ಒದಗಿಸಲು ಅಸಾಧ್ಯವಾಗಿತ್ತು. ಅಪಾರ್ಟ್‌ಮೆಂಟ್ ಮಾದರಿಯ ಮನೆ ನಿರ್ಮಾಣದ ಮೂಲಕ ವಸತಿ ರಹಿತರಿಗೆ ಇದೀಗ ಮನೆಯನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದರು.

ಶಕ್ತಿನಗರದ ಪದವು ಗ್ರಾಮದ 10 ಎಕರೆ ಪ್ರದೇಶದಲ್ಲಿ ಅಪಾರ್ಟ್‌ಮೆಂಟ್ ನಿರ್ಮಾಣವಾಗಲಿದೆ. ಒಟ್ಟು 4 ಮಹಡಿಗಳ 48 ಬ್ಲಾಕ್‌ಗಳಲ್ಲಿ 930 ಮನೆ ನಿರ್ಮಾಣವಾಗಲಿದೆ. ಫೆಬ್ರವರಿ ಅಂತ್ಯದಲ್ಲಿ ಮುಖ್ಯಮಂತ್ರಿಗಳು ಶಿಲಾನ್ಯಾಸ ನೆರವೇರಿಸಲಿದ್ದು 16 ತಿಂಗಳೊಳಗೆ ಪೂರ್ಣಗೊಳಿಸುವ ಯೋಚನೆಯಿದೆ. ಮುಂದೆ ಒಂದೂವರೆ ವರ್ಷದೊಳಗೆ 1500 ಮನೆಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. 5 ಲಕ್ಷ ರೂ. ಮನೆ ನಿರ್ಮಾಣಕ್ಕೆ ವೆಚ್ಚವಾದರೆ, ಉಳಿದ ಎಲ್ಲಾ ಸೌಕರ್ಯಗಳು ಸೇರಿದಂತೆ ಒಟ್ಟು 10ರಿಂದ 15 ಲಕ್ಷ ರೂ.ಗಳ ಆಸ್ತಿಯು ಸರ್ಕಾರವು ಫಲಾನುಭವಿಗಳಿಗೆ ನೀಡಿದಂತಾಗುತ್ತದೆ ಎಂದರು.

ಶಕ್ತಿನಗರದಲ್ಲಿ ಸುಮಾರು 930 ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಯಾರಿಗೆ ಯಾವ ಫ್ಲ್ಯಾಟ್‌, ಯಾವ ಬ್ಲಾಕ್‌ನಲ್ಲಿ ಮನೆ ಎಂಬುದನ್ನು ಲಾಟರಿ ಎತ್ತುವ ಮೂಲಕ ಹಂಚಿಕೆ ಮಾಡಲಾಯಿತು. ಜಿ+3 ಯೋಜನೆಯಡಿ ಆಯ್ಕೆಯಾಗಿರುವ ಫಲಾನುಭವಿಗಳಲ್ಲಿ 28 ಅಂಗವಿಕಲ ಫಲಾನುಭವಿಗಳಿಗೆ ಈಗಾಗಲೇ ನೆಲಹಂತದ ಮನೆಗಳನ್ನು ಮೀಸಲಿರಿಸಲಾಗಿದೆ.

ಉಳಿದ ಮನೆಗಳನ್ನು ಆಯ್ಕೆಗೊಂಡ ಫಲಾನುಭವಿಗಳಿಗೆ ವಿತರಿಸಲಾಯಿತು. ಈಗಾಗಲೇ ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಮೋದನೆ ನೀಡಿದೆ. ಪ್ರತಿಯೊಂದು ಫ್ಲಾಟ್‌ನ ನಿರ್ಮಾಣ ವೆಚ್ಚ 5 ಲಕ್ಷ ರೂ.ಗಳಾಗಿದ್ದು, ಈ ಯೋಜನೆಗೆ ಅವಶ್ಯವಿರುವ ಅನುದಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ, ಮಹಾನಗರ ಪಾಲಿಕೆ ನಿಧಿ, ಫಲಾನುಭವಿಗಳ ವಂತಿಗೆ ಹಾಗೂ ಫಲಾನುಭವಿಗಳ ಬ್ಯಾಂಕ್ ಸಾಲದಿಂದ ಹೊಂದಿಸಲಾಗುತ್ತದೆ.

ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಮೇಯರ್ ಕವಿತಾ ಸನಿಲ್, ಪಾಲಿಕೆ ಮುಖ್ಯಸಚೇತಕ ಎಂ.ಶಶಿಧರ ಹೆಗ್ಡೆ, ಪ್ರತಿಪಕ್ಷ ನಾಯಕ ಗಣೇಶ್ ಹೊಸಬೆಟ್ಟು, ಮಾಜಿ ಮೇಯರ್ ಹರಿನಾಥ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಬಿತಾ ಮಿಸ್ಕಿತ್, ಅಬ್ದುಲ್ ರವೂಫ್, ನಾಗವೇಣಿ, ಪ್ರಮುಖರಾದ ಪ್ರವೀಣ್, ಉಮೇಶ್ ದಂಡಕೇರಿ, ಮಹಮ್ಮದ್ ನವಾಝ್, ಲಕ್ಷ್ಮೀ, ಬ್ಯಾಪ್ಟಿಸ್ಟ್, ಮನಪಾ ಆಯುಕ್ತ ಮೊಹಮ್ಮದ್ ನಝೀರ್ ಸೇರಿದಂತೆ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English