ಪುತ್ತೂರು: ರಜತ ಸಂಭ್ರಮದಲ್ಲಿರುವ ಹೊನಲು ಬೆಳಕಿನ ಪುತ್ತೂರು ಕೋಟಿ- ಚೆನ್ನಯ ಜೋಡುಕರೆ ಕಂಬಳ ಜ. 20ರಂದು ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 25ನೇ ವರ್ಷದ ಹಿನ್ನೆಲೆಯಲ್ಲಿ ಕಂಬಳದ ಕೋಣಗಳು ಕರೆಗೆ ಇಳಿಯುವಾಗಲೇ ವಿಶೇಷತೆ ಇದೆ. ಭಾಗವಹಿಸುವ ಎಲ್ಲ 150ಕ್ಕೂ ಅಧಿಕ ಜೋಡಿ ಕೋಣಗಳಿಗೆ 1 ಮುಡಿ ಅಕ್ಕಿ, ರಜತ ಫಲಕ ನೀಡಲಾಗುವುದು.
ಈ ಬಾರಿ ಕಂಬಳ ಸ್ಪರ್ಧಾ ವಿಭಾಗದ ಕನೆಹಲಗೆ, ಅಡ್ಡಹಲಗೆ, ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ. ಬೆಳ್ಳಿಹಬ್ಬ ಪ್ರಯುಕ್ತ ಬೊಳ್ಳಿಕರೆ ಸ್ಮರಣ ಸಂಚಿಕೆ ಬಿಡುಗಡೆಯಾಗಲಿದೆ ಎಂದರು.
ಜ.20ರಂದು ಬೆಳಗ್ಗೆ 10.32ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ ಉದ್ಘಾಟಿಸುವರು. ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಸೀತಾರಾಮ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 6 ಗಂಟೆಗೆ ಸಾರಿಗೆ ಸಚಿವ ಎಚ್. ಎಂ. ರೇವಣ್ಣ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಜಯಕರ್ನಾಟಕ ಸಂಸ್ಥಾಪಕ ಎನ್. ಮುತ್ತಪ್ಪ ರೈ, ಅನುರಾಧಾ ಮುತ್ತಪ್ಪ ರೈ ಗೌರವ ಉಪಸ್ಥಿತರಿರುವರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್, ಶಾಸಕರಾದ ವಸಂತ ಬಂಗೇರ, ಪ್ರತಾಪಚಂದ್ರ ಶೆಟ್ಟಿ, ಎಂಎಲ್‌ಸಿ ಐವನ್ ಡಿ’ಸೋಜಾ, ಬೆಂಗಳೂರು ಎಂಆರ್‌ಜಿ ಬಂಜಾರ ಗ್ರೂಪ್ಸ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಭಾಗವಹಿಸುವರು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಸಹಿತ ಹಲವರಿಗೆ ಸಮ್ಮಾನ ಮಾಡಲಾಗುವುದು ಎಂದರು.
ಜ. 21ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ಬಹುಮಾನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕಿ ಶಕುಂತಳಾ ಟಿ. ಶೆಟ್ಟಿ ವಹಿಸಲಿದ್ದಾರೆ. ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು, ಎಪಿಎಂಸಿ ಅಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರು, ಬಲ್ನಾಡು ಶ್ರೀ ಉಳ್ಳಾಲ್ತಿ ದಂಡನಾಯಕ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಚನಿಲ ತಿಮ್ಮಪ್ಪ ಶೆಟ್ಟಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಜಯಕರ್ನಾಟಕ ಸಂಸ್ಥೆ ತಾಲೂಕು ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಮುಖ್ಯ ಅತಿಥಿಗಳಾಗಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಂಬಳ ಸಮಿತಿ ಸಂಚಾಲಕ ಎನ್. ಸುಧಾಕರ ಶೆಟ್ಟಿ, ಕೋಶಾಧಿಕಾರಿ ಪ್ರಸನ್ನ ಕುಮಾರ್ ಶೆಟ್ಟಿ ಪಿ.ಎನ್., ಪ್ರ. ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ., ಉಪಾಧ್ಯಕ್ಷ ನಿರಂಜನ ರೈ ಮಠಂತಬೆಟ್ಟು, ಸುಧೀರ್ ಶೆಟ್ಟಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English