ಉಡುಪಿ: ಶ್ರೀ ಕೃಷ್ಣನ ನಾಡು ಉಡುಪಿಯಲ್ಲಿ ರಾಜಕೀಯ ಲೆಕ್ಕಾಚಾರ ಬಿರುಸುಗೊಂಡಿದೆ. ಉಡುಪಿಯಲ್ಲಿ ಪರ್ಯಾಯ ಮಹೋತ್ಸವದ ಸಂಭ್ರಮ ಒಂದೆಡೆಯಾದರೆ ಇನ್ನೊಂದೆಡೆ ರಾಜಕೀಯ ಪಕ್ಷಗಳು ಚುನಾವಣಾ ಅಖಾಡಕ್ಕಿಳಿಯಲು ಸಜ್ಜಾಗುತ್ತಿವೆ.
ಚುನಾವಣೆ ಹತ್ತಿರವಾಗುತ್ತಿದ್ದಂತೆ ಜಿಲ್ಲೆಯ 5 ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಕಣಕ್ಕಿಳಿಯಲಿರುವ ಅಭ್ಯರ್ಥಿಗಳು ಯಾರು ಎಂಬ ಲೆಕ್ಕಾಚಾರ ಬಿರುಸಿನಿಂದ ಸಾಗಿದೆ.
ಉಡುಪಿ ರಾಜಕೀಯಕ್ಕೆ ತನ್ನದೇ ಆದ ಇತಿಹಾಸವಿದೆ. ವಿ.ಎಸ್. ಆಚಾರ್ಯ, ಯು.ಆರ್. ಸಭಾಪತಿ , ಮನೋರಮಾ ಮಧ್ವರಾಜ್ ಯಂತಹ ಘಟಾನುಘಟಿ ರಾಜಕಾರಣಿಗಳು ಈ ಜಿಲ್ಲೆಯಿಂದ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಇಂಥಹ ಇತಿಹಾಸ ಹೊಂದಿರುವ ಉಡುಪಿ ಜಿಲ್ಲೆಯ 5 ವಿಧಾನ ಸಭಾ ಕ್ಷೇತ್ರಗಳಲ್ಲಿ ಈ ಬಾರಿ ಯಾರು ಗೆಲ್ಲಲಿದ್ದಾರೆ ಎಂಬುದು ಭಾರೀ ಕುತೂಹಲ ಮೂಡಿಸಿವೆ.
ಕಳೆದ ಚುನಾವಣೆಯಲ್ಲಿ ಜಿಲ್ಲೆಯ 5 ವಿಧಾನ ಸಭಾ ಕ್ಷೇತ್ರಗಳ ಪೈಕಿ 3 ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ ಮೇಲುಗೈ ಪಡೆದಿತ್ತು. 1 ರಲ್ಲಿ ಬಿಜೆಪಿ ಹಾಗೂ ಕುಂದಾಪುರ ಕ್ಷೇತ್ರ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರ ಪಾಲಾಗಿತ್ತು.
ಆದರೆ ಈ ಬಾರಿ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಕಳೆದ ಬಾರಿಯ ಕ್ಷೇತ್ರಗಳನ್ನು ಉಳಿಸಿಕೊಳ್ಳುತ್ತಾ ಅಥವಾ ಬಿಜೆಪಿ ರಣತಂತ್ರ ರೂಪಿಸಿ ಮತ್ತಷ್ಟು ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳುತ್ತಾ ನೋಡಬೇಕು. ಜಿಲ್ಲೆಯ ಮಟ್ಟಿಗೆ ಜೆಡಿಎಸ್ ನದು ಆಟಕ್ಕುಂಟು ಲೆಕ್ಕಕ್ಕಿಲ್ಲದ ಪರಿಸ್ಥಿತಿ.
ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಅತ್ಯಂತ ಹೆಚ್ಚು ಕುತೂಹಲ ಕೆರಳಿಸಿರುವ ಕ್ಷೇತ್ರ ಉಡುಪಿ ವಿಧಾನಸಭಾ ಕ್ಷೇತ್ರ. ಕಳೆದ ಬಾರಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಪ್ರಮೋದ್ ಮಧ್ವರಾಜ್ ಬಿಜೆಪಿಯ ಸುಧಾಕರ್ ಶೆಟ್ಟಿಯವರನ್ನು ಸೋಲಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಮುಂದೆ ಪ್ರಮೋದ್ ಮಧ್ವರಾಜ್ ಸಚಿವರೂ ಆದರು.
ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮೀನುಗಾರಿಕಾ ಸಚಿವರಾದ ಪ್ರಮೋದ್ ಮಧ್ವರಾಜ್ ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸನ್ನು ಹೊಂದಿದ್ದಾರೆ. ಈ ಹಿಂದೆ ಸಚಿವರಾಗಿದ್ದ ಬಿಜೆಪಿಯ ರಘುಪತಿ ಭಟ್ ಕಳೆದ ಬಾರಿಯ ಚುನಾವಣೆ ಸಂದರ್ಭದಲ್ಲಿ ರಾಸಲೀಲೆ ಪ್ರಕರಣ, ಪತ್ನಿಯ ಆತ್ಮಹತ್ಯೆ ಪ್ರಕರಣಗಳಿಂದ ಬೇಸತ್ತು ಕೊನೆ ಕ್ಷಣದಲ್ಲಿ ಕಣದಿಂದ ಹಿಂದೆ ಸರಿದರು. ಈ ಕಾರಣದಿಂದ ಸುಧಾಕರ್ ಶೆಟ್ಟಿ ಕಣಕ್ಕಿಳಿಯಬೇಕಾಯಿತು. ಇದು ಕಾಂಗ್ರೆಸ್ ಗೆ ವರದಾನವಾಗಿತ್ತು.
ಇಲ್ಲಿ ಈ ಬಾರಿಯೂ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ನಿಂದ ಟಿಕೆಟ್ ಪಡಿಯುವುದು ಪಕ್ಕಾ ಆಗಿದೆ. ಬಿಜೆಪಿಯಲ್ಲಿ ಇನ್ನೂ ಅಭ್ಯರ್ಥಿಗಳ ಬಗ್ಗೆ ಗೊಂದಲವಿದೆ . ಬಿಜೆಪಿ ಯಿಂದ ಮಾಜಿ ಸಚಿವ ರಘುಪತಿ ಭಟ್, ತಿಂಗಳೆ ವಿಕ್ರಮಾರ್ಜುನ ಹೆಗಡೆ, ಯಶ್ ಪಾಲ್ ಸುವರ್ಣ, ಉದಯ ಕುಮಾರ್ ಶಟ್ಟಿ ಅವರ ಹೆಸರು ಮುಂಚೂಣಿಯಲ್ಲಿದೆ. ಈ ನಡುವೆ ಕಾರ್ಕಳದ ಶಾಸಕ ಸುನೀಲ್ ಕುಮಾರ್ ಅವರನ್ನು ಉಡುಪಿಯಿಂದ ಕಣಕ್ಕಿಳಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ .
ಬಿಜೆಪಿಯಲ್ಲಿ ಸೃಷ್ಟಿಯಾಗಿರುವ ಗೊಂದಲದ ವಾತಾವರಣದ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಗೆಲುವಿನ ಲೆಕ್ಕಾಚಾರದಲ್ಲಿದೆ. ಸದ್ಯ ದೇಶದಲ್ಲಿ ಮೋದಿ ಅಲೆ ಇರುವುದರಿಂದ ಅಭ್ಯರ್ಥಿ ಯಾರೇ ಆದರೂ ಪರವಾಗಿಲ್ಲ ಬಿಜೆಪಿ ಗೆಲುವು ಸಾಧಿಸುತ್ತೆ ಅಂತ ಕಾರ್ಯಕರ್ತರು ಅಂದಾಜು ಹಾಕಿಕೊಂಡಿದ್ದಾರೆ. ಕೊನೆಗೆ ಯಾರ ಗಣಿತ ಸರಿಯಾಗುತ್ತದೆ ಎಂದು ನೋಡಲು ಚುನಾವಣೆವರೆಗೆ ಕಾದು ನೋಡಬೇಕಿದೆ.
Click this button or press Ctrl+G to toggle between Kannada and English