ಸಾಧನೆ ಜನರಿಗೆ ತಿಳಿಸಿ ಕಾಂಗ್ರೆಸ್‌ ಗೆಲ್ಲಿಸಿ: ಶಾಸಕಿ ಶಕುಂತಳಾ ಶೆಟ್ಟಿ

5:36 PM, Friday, January 19th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

shankuntala-shettyಪುತ್ತೂರು: ವಿಧಾನಸಭಾ ಕ್ಷೇತ್ರವೊಂದರ ಅಭಿವೃದ್ಧಿಗೆ 800 ಕೋಟಿ ರೂ. ಅನುದಾನ ತರಿಸುವ ಸಾಧನೆ ಮಾಡಿದ್ದು, ಪಕ್ಷದ ನರ-ನಾಡಿಗಳನ್ನು ಅರಿತಿರುವ ಕಾರ್ಯಕರ್ತರು ಮುಂದಿನ ಬಾರಿಯೂ ಕಾಂಗ್ರೆಸ್‌ ಗೆಲುವಿಗೆ ತಮ್ಮ ಶ್ರಮವನ್ನು ತೋರ್ಪಡಿಸಬೇಕು ಎಂದು ಸಂಸದೀಯ ಕಾರ್ಯದರ್ಶಿ ಹಾಗೂ ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ವಿನಂತಿಸಿದರು.

ಸುಭದ್ರಾ ಸಭಾಂಗಣದಲ್ಲಿ ಗುರುವಾರ ನಡೆದ ಪುತ್ತೂರು ವಿಧಾನಸಭಾ ಕ್ಷೇತ್ರದ ಪುತ್ತೂರು ಬ್ಲಾಕ್‌ ವ್ಯಾಪ್ತಿಯ ಬೂತ್‌ ಪ್ರತಿನಿಧಿಗಳ ತರಬೇತಿ ಕಾರ್ಯಾಗಾರವನ್ನು ಅವರು ಉದ್ಘಾಟಿಸಿದರು. ರಾಜ್ಯ ಸರಕಾರದ ಸಾಧನಾ ಸಮಾವೇಶಕ್ಕೆ ಪುತ್ತೂರಿನಲ್ಲಿ ದಾಖಲೆಯ ಜನಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿ ಯಶಸ್ವಿಗೊಳಿಸಿದ್ದಾರೆ. ಇದಕ್ಕೆಲ್ಲ ಕಾರ್ಯಕರ್ತರು ಪಕ್ಷದ ಮೇಲಿಟ್ಟಿರುವ ಪ್ರೀತಿಯೇ ಕಾರಣ. ನಮ್ಮಲ್ಲೇ ಚಿಂತನೆ ನಡೆಸಿ ಸೂಕ್ತ ಅಭ್ಯರ್ಥಿಯನ್ನು ಚುನಾಯಿಸಬೇಕು ಎಂದು ಕಾರ್ಯಕರ್ತರಿಗೆ ಹೇಳಿದರು.

ತರಬೇತಿ ಕಾರ್ಯಾಗಾರವನ್ನು ಮೊದಲೇ ಆಯೋಜಿಸಿದ್ದರೆ ಹೆಚ್ಚು ಪ್ರಯೋಜನವಾಗುತ್ತಿತ್ತು ಎಂದು ಅಭಿಪ್ರಾಯಸಿದ ಶಾಸಕರು, ಶೇ. 20 ಮಂದಿ ಮಾತ್ರ ಅಭಿವೃದ್ಧಿಯನ್ನು ನೋಡಿ ಮತ ಹಾಕುತ್ತಾರೆ. ಶೇ. 80ರಷ್ಟು ಮಂದಿ ಪಕ್ಷ, ವ್ಯಕ್ತಿಯನ್ನು ಗಮನಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕಾರ್ಯತಂತ್ರಗಳನ್ನು ರೂಪಿಸಬೇಕು. ಮನೆ ಮನೆಗಳಲ್ಲಿ ಸಮೀಕ್ಷೆ ನಡೆಸಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಕೆಪಿಸಿಸಿ ಕಾರ್ಯ ದರ್ಶಿ ಹಾಗೂ ಪುತ್ತೂರು ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ಸವಿತಾ ರಮೇಶ್‌ ಮಾತನಾಡಿ, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ಹಂತದ ಮನೆ ಮನೆ ಭೇಟಿಯನ್ನು ನಡೆಸಲಾಗಿದೆ. ಬೂತ್‌ ಪ್ರತಿನಿಧಿಗಳಿಗೆ ತರಬೇತಿಯ ಮೂಲಕ ಕಾರ್ಯಕರ್ತರನ್ನು ತಲುಪುವ ನಿಟ್ಟಿನಲ್ಲಿ ತಿಳಿಸಿಕೊಡಲಾಗು ತ್ತಿದೆ. ಮತದಾರರ ಪಟ್ಟಿಗೆ ಸೇರ್ಪಡೆ, ಮಾರ್ಪಾಡು ಕೆಲಸವೂ ಪ್ರಗತಿಯಲ್ಲಿದ್ದು, ಬೂತ್‌ನಲ್ಲಿ ಕನಿಷ್ಠ 50 ಮತದಾರರನ್ನು ಸೇರ್ಪಡೆ ಮಾಡಬೇಕೆಂದರು.

ದ.ಕ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಕಾರ್ಯದರ್ಶಿ ಭರತ್‌ ಮುಂಡೋಡಿ, ವೆಂಕಪ್ಪ ಗೌಡ, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷೆ ಲೋಕೇಶ್ವರಿ ವಿನಯಚಂದ್ರ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಜಿಲ್ಲಾ ಕಾಂಗ್ರೆಸ್‌ ಕಿಸಾನ್‌ ಘಟಕದ ಅಧ್ಯಕ್ಷ ಉಮಾನಾಥ್‌, ವಿಟ್ಲ -ಉಪ್ಪಿನಂಗಡಿ ಬ್ಲಾಕ್‌ನ ಮುರಳೀಧರ ರೈ ಮಠಂತಬೆಟ್ಟು, ತರಬೇತಿಯ ಸಂಪನ್ಮೂಲ ವ್ಯಕ್ತಿ ಮಹಮ್ಮದ್‌ ನವಾಝ್ ವೇದಿಕೆಯಲ್ಲಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದ ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಬಡಗನ್ನೂರು, ಎಐಸಿಸಿ ನಿರ್ದೇಶನದಂತೆ ಬೂತ್‌ ಮಟ್ಟದ ಪ್ರತಿನಿಧಿಗಳ ತರಬೇತಿಯನ್ನು ಆಯೋಜಿಸಲಾಗಿದೆ. ಬೂತ್‌ ಬಲವರ್ಧನೆ, ರಾಜ್ಯ ಸರಕಾರದ ಸಾಧನೆ, ಪ್ರಣಾಳಿಕೆಗಳನ್ನು ಹಾಗೂ ಕೇಂದ್ರ ಸರಕಾರ ವೈಫಲ್ಯಗಳನ್ನು ತಿಳಿಸುವ ನಿಟ್ಟಿನಲ್ಲಿ ತರಬೇತಿ ನಡೆಯಲಿದೆ ಎಂದು ಹೇಳಿದರು.ಕೃಷ್ಣಪ್ರಸಾದ್‌ ಆಳ್ವ ವಂದಿಸಿದರು. ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಅಮಲ ರಾಮಚಂದ್ರ ಕಾರ್ಯಕ್ರಮ ನಿರ್ವಹಿಸಿದರು. ಅನಂತರ ಸಂಪನ್ಮೂಲ ವ್ಯಕ್ತಿಗಳಿಮದ ತರಬೇತಿ ನಡೆಯಿತು.

ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಭಾಗವಹಿಸುವ ನಿರೀಕ್ಷೆ ಇದ್ದರೂ ಅವರು ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ.ತರಬೇತಿ ಉದ್ಘಾಟನೆಯ ವೇಳೆ ತಾ.ಪಂ. ಮಾಜಿ ಸದಸ್ಯ ಬೂಡಿಯಾರು ಪುರುಷೋತ್ತಮ ರೈ ಅವರು ವೇದಿಕೆ ಮುಂಭಾಗಕ್ಕೆ ಬಂದು, ತಮ್ಮ ಬೂತ್‌ ವ್ಯಾಪ್ತಿಯ ಲೋಪಗಳನ್ನು ಸರಿಪಡಿಸುವಂತೆ ಕೇಳಿಕೊಂಡರು. ಅವರನ್ನು ಸಮಾಧಾನಿಸಿದರೂ ಸ್ವಲ್ಪ ಹೊತ್ತಿನ ಬಳಿಕ ಮತ್ತೆ ವೇದಿಕೆ ಬಳಿ ಬಂದು ವಿಷಯ ಪ್ರಸ್ತಾಪಿಸಿದಾಗ ಸಭಾಂಗಣದಲ್ಲಿ ಗೊಂದಲ, ಮಾತಿನ ಚಕಮುಕಿ ನಡೆಯಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English