ಮಂಗಳೂರು: ಟಾರ್ಗೆಟ್ ಗ್ರೂಪ್‌ನ ಇಲ್ಯಾಸ್ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಇಲ್ಯಾಸ್ ಪತ್ನಿ ಪರ್ಜಾನಾ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜ. 13ರಂದು ತಾನಿದ್ದ ಪ್ಲಾಟ್‌ನಲ್ಲಿ ಪುಟ್ಟ ಮಗುವಿನ ಎದುರೇ ಟಾರ್ಗೆಟ್ ಗ್ರೂಪ್‌ನ ಇಲ್ಯಾಸ್ ಬರ್ಬರವಾಗಿ ಕೊಲೆಗೀಡಾಗಿದ್ದ. ಕೊಲೆ ನಡೆದು ವಾರ ಕಳೆಯುತ್ತಿದೆ. ಈಗ ಇಲ್ಯಾಸ್ ಪತ್ನಿ ಉಳ್ಳಾಲದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಸಚಿವ ಖಾದರ್‌ರತ್ತ ಬೆರಳು ತೋರಿಸಿದ್ದಾರೆ.
ಚುನಾವಣೆ ಬಂದಾಗ ನನ್ನ ಗಂಡ ಬೇಕಿತ್ತು, ಗಂಡ ಇರುವಾಗ ಮನೆ ಬಾಗಿಲಿಗೆ ಬಂದು ಕಾಯುತ್ತಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಈಗ ಎಲ್ಲಿದ್ದಾರೆ. ನನ್ನ ಗಂಡನನ್ನು ರೌಡಿ ಅಂದಿರಲ್ಲವೇ, ಈಗ ಸಮಾಧಾನವಾಯಿತೇ..? ಸಚಿವರು ಈಗ ನನ್ನ ಗಂಡನ ಬಗ್ಗೆ ಮಾತನಾಡುತ್ತಾರೆ. ಸುಮ್ಮನೆ ನನ್ನ ಗಂಡನನ್ನು ದೂರುವುದು ಯಾಕೆ, ಅವರು ಬಳಸಿ ಎಸೆಯುವ ಗ್ಲಾಸ್, ಅವರು ಇದ್ದಾಗ ಏನೂ ಸಹಾಯ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವ ಖಾದರ್‌ಗೆ ಬಿಜೆಪಿಯ ರಹೀಮ್ ಉಚ್ಚಿಲ, ಉಸ್ಮಾನ್ ಕಲ್ಲಾಪು ಬೆಂಬಲ ನೀಡುತ್ತಿದ್ದಾರೆ, ಇವರೆಲ್ಲರೂ ಗೆಳೆಯರು ಒಟ್ಟಿಗಿರುತ್ತಾರೆ. ನನ್ನ ಗಂಡನ ಕೊಲೆ ಹಿಂದೆ ಪೊಲೀಸರ, ಅಧಿಕಾರಿಗಳ ಕೈವಾಡ ಇದೆ ಎಂದು ಆರೋಪಿಸಿರುವ ಅವರು, ನನ್ನ ಗಂಡನನ್ನು ಅವರ ಗೆಳೆಯನಾಗಿದ್ದ ದಾವೂದ್ ಹಿಂದಿನಿಂದ ಬಂದು ಮಚ್ಚಿನಿಂದ ಹೊಡೆದು ಸಾಯಿಸಿದ್ದಾನೆ. ಆರೋಪಿಗಳ ವಿರುದ್ಧ ಇನ್ನೂ ಕ್ರಮ ತೆಗೆದುಕೊಂಡಿಲ್ಲ, ನ್ಯಾಯ ಸಿಗುವ ತನಕ ಹೋರಾಡುತ್ತೇನೆ ಎಂದಿದ್ದಾರೆ.
ಇಲ್ಯಾಸ್ ಮನೆಯವರ ದುಃಖದಲ್ಲಿ ನಾವಿದ್ದೇವೆ. ಇಲ್ಯಾಸ್ ಪತ್ನಿ ನನ್ನ ಸಹೋದರಿ ಸ್ಥಾನದಲ್ಲಿದ್ದು, ಅವರ ದುಃಖ ಅರ್ಥವಾಗುತ್ತದೆ. ನೈಜ ಆರೋಪಿಗಳ ಬಂಧನವಾದಾಗ ಅವರಿಗೂ ಸಮಾಧಾನವಾಗಲಿದೆ. ನಾನು ಯಾರ ಬಳಿ ಹೋಗಬೇಕು, ಯಾರ ಸಹಕಾರ ಪಡೆಯುತ್ತೇನೆ, ಪಡೆದಿದ್ದೇನೆ ಎನ್ನುವುದು ನನ್ನ ಕ್ಷೇತ್ರದ ಸರ್ವರಿಗೂ ತಿಳಿದಿದೆ. ಇಲ್ಯಾಸ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನೈಜ ಆರೋಪಿಗಳನ್ನು ಬಂಧಿಸುವಂತೆ ಪೊಲೀಸ್ ಇಲಾಖೆ ಜತೆಗೂ ಚರ್ಚೆ ನಡೆಸಲಾಗಿದೆ ಎಂದು ಖಾದರ್ ಪ್ರತಿಕ್ರಿಯಿಸಿದ್ದಾರೆ.
ಇಲ್ಯಾಸ್ ಪತ್ನಿಯ ಬಗ್ಗೆ ನನಗೆ ಅನುಕಂಪ ಇದೆ. ಆದರೆ, ಈ ಪ್ರಕರಣದಲ್ಲಿ ರಾಜಕೀಯ ತರುವುದು ಬೇಡ. ದೀಪಕ್ ರಾವ್ ಹತ್ಯೆಯ ಸಂದರ್ಭ ಜೈಲಿನಲ್ಲಿದ್ದ ಇಲ್ಯಾಸ್‌ನನ್ನು ಮಾಧ್ಯಮಗಳಲ್ಲಿ ಬಿಂಬಿಸಲಾಯಿತು. ಅದಾಗಲೇ ಪೊಲೀಸರು ಬಂಧಿಸಿದ್ದ ನೈಜ ಆರೋಪಿಗಳನ್ನು ಮರೆಮಾಚಲಾಯಿತು ಎಂದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Click this button or press Ctrl+G to toggle between Kannada and English