ಮಂಗಳೂರು: ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಅದ್ಭುತವಾದ ಕಲಾಪ್ರಕಾರಗಳು, ಹತ್ತಾರು ಕಲಾ ಸಂಸ್ಕೃತಿ ಒಕ್ಕೂಟಗಳಿರುವ ದೇಶ ಭಾರತ. ಕಲೆಯಲ್ಲಿ ದೇವರನ್ನು ಕಂಡ ಏಕೈಕ ದೇಶ ಭಾರತ. ಕಲಾವಿದರನ್ನು ಸಂತರೆಂದು ಪೂಜಿಸುತ್ತೇವೆ. ಜಾತಿ, ಮತ, ಪಂಥ ಎಲ್ಲವನ್ನು ಒಗ್ಗೂಡಿಸಲು ಕಲೆಯಿಂದ ಮಾತ್ರ ಸಾಧ್ಯ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಭಾರತ ಸರಕಾರದ ಸಂಸ್ಕೃತಿ ಸಚಿವಾಲಯದ ಆಶ್ರಯದಲ್ಲಿ ನಗರದ ನೆಹರೂ ಮೈದಾನದಲ್ಲಿ ಶುಕ್ರವಾರ ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬೇರೆ ಬೇರೆ ರಾಜ್ಯಗಳಿಗೆ, ಧರ್ಮಗಳಿಗೆ, ಮತಗಳಿಗೆ ವಿಭಿನ್ನವಾದ ಪ್ರಕಾರಗಳ ಸಾಂಸ್ಕೃತಿಕ ರಂಗಗಳಿವೆ. ಆರಾಧನೆಯ ಜೊತೆ ಕಲೆಯನ್ನು ಜೋಡಿಸಿಕೊಂಡ ಸಂಸ್ಕೃತಿ ಭಾರತದ ಸಂಸ್ಕೃತಿ. ಬೇರೆ ಬೇರೆ ರಾಜ್ಯಗಳ ಸಾಂಸ್ಕೃತಿಕ ಪ್ರಕಾರಗಳು, ಸಂಸ್ಕೃತಿ ಹಿಂದಿರುವ ಬದುಕು, ಸದಾಭಿರುಚಿ ಪ್ರತಿಯೊಂದು ರಾಜ್ಯಕ್ಕೂ ಸಿಗಬೇಕು ಎನ್ನುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ `ಏಕ್ ಭಾರತ್ ಶ್ರೇಷ್ಠ ಭಾರತ್’ ಪರಿಕಲ್ಪನೆ ಕಂಡು ಸಾಂಸ್ಕೃತಿಕ ಪರಂಪರೆ ಉಳಿಸಿ ಬೆಳೆಸುವ, ಕಲಾವಿದರಿಗೆ ಗೌರವ ನೀಡುವ, ಪ್ರತಿಯೊಂದು ರಾಜ್ಯದ ಕಲೆಯನ್ನು ಗುರುತಿಸುವ, ಒಂದಾಗಿಸುವ ನಿಟ್ಟಿನಲ್ಲಿ ಹಾಗೂ ಭಾರತ ಸಾಂಸ್ಕೃತಿಕ ಪರಂಪರೆಯಲ್ಲಿ ಜಗತ್ತಿನ ಮುಂದೆ ಬರಬೇಕು ಎನ್ನುವ ನಿಟ್ಟಿನಲ್ಲಿ ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವ ನಡೆಸುತ್ತಿದೆ ಎಂದರು.
ಕರ್ನಾಟಕ ರಾಜ್ಯದ ಬೆಂಗಳೂರು, ಹುಬ್ಬಳ್ಳಿ-ಧಾರವಾಡ ಹಾಗೂ ಪ್ರಸ್ತುತ ಮಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ 26 ರಾಜ್ಯಗಳ 400ಕ್ಕೂ ಅಧಿಕ ಕಲಾವಿದರು ತಮ್ಮ ರಾಜ್ಯಗಳ ಸಾಂಸ್ಕೃತಿಕ ಕಲಾ ವೈಭವವನ್ನು ಪ್ರದರ್ಶಿಸಲಿದ್ದಾರೆ. ಶಾಸ್ತ್ರೀಯ ಮತ್ತು ಜನಪದ, ಸಂಗೀತ ಮತ್ತು ನೃತ್ಯ, ನಾಟಕ ಮತ್ತು ಸಾಹಿತ್ಯ ಹಾಗೂ ದೃಶ್ಯ ಕಲೆಗಳನ್ನು ಮಹೋತ್ಸವದಲ್ಲಿ ಸಾದರಪಡಿಸಲಾಗುತ್ತಿದ್ದು, ಇದರ ಜತೆಗೆ ವಿವಿಧ ರಾಜ್ಯಗಳ ಕರಕುಶಲ ವಸ್ತುಗಳ ಪ್ರದರ್ಶನವನ್ನೂ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳ ಕಲಾ ಪ್ರದರ್ಶನಗಳು ಜನಮನ ಸೂರೆಗೊಂಡಿತು. ಸಂಸ್ಕೃತಿ ಇಲಾಖೆಯ ಡಾ.ಸಚಿನ್.ಎ.ಎನ್. ಜೋಸೆಫ್ ಬೈರರಾಜ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English