ಮಂಗಳೂರು: ಬಿಲ್ಲವ ಸಮುದಾಯದ ಬಗ್ಗೆ ಮಾತನಾಡಲು ಬಿಲ್ಲವ ಸಂಘ ಇದೆ. ಹಾಗಿರುವಾಗ ಬಿಲ್ಲವರ ಬಗ್ಗೆ ಮಾತನಾಡಲು ನೀವು ಯಾರು, ನಿಮಗೆ ಯಾವ ನೈತಿಕತೆ ಇದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಸಿ. ವಿನಯರಾಜ್ ಅವರಿಗೆ ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ್ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಎಷ್ಟು ಮಂದಿ ಬಿಲ್ಲವರಿಗೆ ಪದಾಧಿಕಾರಿಯಾಗಲು ಅವಕಾಶ ನೀಡಿದೆ ಎಂಬ ಬಗ್ಗೆ ದಾಖಲೆ ಬಿಡುಗಡೆ ಮಾಡಲಿ. ರಾಜ್ಯ ಬಿಜೆಪಿಯಲ್ಲಿ 12 ಮಂದಿ ಬಿಲ್ಲವ ಪದಾಧಿಕಾರಿಗಳಿದ್ದರೆ, ಕಾಂಗ್ರೆಸ್ ಕೇವಲ ಒಬ್ಬರಿಗೆ ಮಾತ್ರ ಅವಕಾಶ ನೀಡಿದೆ. ಈಗ ಸಚಿವ ರಮಾನಾಥ ರೈ ಅವರನ್ನು ಮೆಚ್ಚಿಸಲು ವಿನಯರಾಜ್ ಬಿಲ್ಲವರ ಬಗ್ಗೆ ಮಾತನಾಡಲು ಹೊರಟಿದ್ದಾರೆ ಎಂದರು.
ಕಳೆದ ವರ್ಷ ಬಂಟ್ವಾಳದ ಸಜಿಪಮೂಡದಲ್ಲಿ ನಾರಾಯಣ ಗುರುಮಂದಿರ ಉದ್ಘಾಟನೆ ವೇಳೆ ಬ್ಯಾನರ್‌ವೊಂದರಲ್ಲಿ ನಾರಾಯಣ ಗುರುಗಳ ಭಾವಚಿತ್ರ ಬಳಕೆ ಮಾಡಲಾಗಿತ್ತು. ಆದರೆ ಹರಿಕೃಷ್ಣ ಬಂಟ್ವಾಳ್ ಈ ಕುರಿತು ಸುಳ್ಳು ಹೇಳಿ ಕೀಳು ರಾಜಕೀಯ ಮಾಡುತ್ತಿದ್ದಾರೆ ಎಂದು ವಿನಯರಾಜ್ ಆರೋಪಿಸಿದ್ದಾರೆ. ಆದರೆ ಗುರುಮಂದಿರ ಉದ್ಘಾಟನೆ ವೇಳೆ ಈ ಭಾವಚಿತ್ರ ಬಳಕೆ ಮಾಡಿಲ್ಲ. ಬದಲಾಗಿ ಕಳೆದ ವರ್ಷ ಬಂಟ್ವಾಳದಲ್ಲಿ 52 ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಆಗಮಿಸಿದಾಗ ಹಾಕಲಾಗಿದ್ದ ಬ್ಯಾನರ್ ಅದಾಗಿತ್ತು ಎಂದು ಹರಿಕೃಷ್ಣ ಬಂಟ್ವಾಳ್ ಆ ಚಿತ್ರದ ದಾಖಲೆ ತೋರಿಸಿ ಸ್ಪಷ್ಟಪಡಿಸಿದರು.
ಇತ್ತೀಚೆಗೆ ಸಚಿವ ಡಿ.ಕೆ. ಶಿವಕುಮಾರ್ ನಿವಾಸಗಳ ಮೇಲೆ ಐಟಿ ದಾಳಿಯಾದಾಗ ಮಂಗಳೂರಿನ ಐಟಿ ಕಚೇರಿ ಮೇಲೆ ಕಲ್ಲುತೂರಾಟ ನಡೆಸಿದ್ದು ಇದೇ ವಿನಯರಾಜ್. ಅವರ ವಿರುದ್ಧ ಕ್ರಿಮಿನಲ್ ಕೇಸ್ ಕೂಡ ದಾಖಲಾಗಿದೆ. ಮಾತ್ರವಲ್ಲದೆ, ನಕಲಿ ದಾಖಲೆ ಸೃಷ್ಟಿ ಮಾಡುವ ಅಭ್ಯಾಸ ಇರುವ ಇವರಿಂದ ನಾವು ಪಾಠ ಕಲಿಯಬೇಕಾಗಿಲ್ಲ. ಕೀಳು ರಾಜಕೀಯ ಮಾಡುವ ಅಗತ್ಯ ನಮಗಿಲ್ಲ ಎಂದರು.
Click this button or press Ctrl+G to toggle between Kannada and English