ಸಂವಿಧಾನ ತಿದ್ದುಪಡಿ ಹೇಳಿಕೆ… ಕೇಂದ್ರ ಸಚಿವ ಅತವಾಳೆ ಹೇಳಿದ್ದೇನು?

12:38 PM, Monday, January 22nd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

ramadasಮಂಗಳೂರು: ಸಂವಿಧಾನವೇ ಈ ದೇಶದ ಧರ್ಮಗ್ರಂಥ ಎಂದು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಸಂವಿಧಾನ ತಿದ್ದುಪಡಿಯಂತಹ ವಿಚಾರಕ್ಕೆ ಕೇಂದ್ರ ಮುಂದಾಗದು ಎಂದು ಕೇಂದ್ರದ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ರಾಮದಾಸ್‌ ಅತವಾಳೆ ಹೇಳಿದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳ ಭೇಟಿ ನಿಮಿತ್ತ ಮಂಗಳೂರಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಯಾರೂ ಕೂಡ ಸಂವಿಧಾನದ ಪೀಠಿಕೆಯನ್ನು(ಪ್ರಿಯಾಂಬಲ್) ಬದಲಿಸಲು ಸಾಧ್ಯವಿಲ್ಲ. ಆಯಾ ಕಾಲಘಟ್ಟಕ್ಕೆ ಸಂಬಂಧಿಸಿ ಸುಧಾರಣೆಯ ನೆಲೆಯಲ್ಲಿ ಸಂವಿಧಾನದಲ್ಲಿ ಕೆಲವೊಂದು ತಿದ್ದುಪಡಿಗಳಾಗಿವೆ. ಆದರೆ ಅದು ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತಂದಿಲ್ಲ. ಈಗಿನ ಕೇಂದ್ರ ಸರ್ಕಾರ ತಿದ್ದುಪಡಿಯಂತಹ ವಿಚಾರಕ್ಕೆ ಮುಂದಾಗುವುದಿಲ್ಲ ಎಂದರು.

ಭ್ರಷ್ಟಾಚಾರ ತಡೆಗಟ್ಟುವ ನೆಲೆಯಲ್ಲಿ 10 ವರ್ಷಗಳಿಗೊಮ್ಮೆ ನೋಟು ಬದಲಾವಣೆಯಾಗಬೇಕು ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಬರಹವೊಂದರಲ್ಲಿ ಉಲ್ಲೇಖಿಸಿದ್ದರು. ಇದನ್ನೇ ಮೋದಿ ಸರ್ಕಾರ ಮಾಡಿದೆ. ನೋಟು ಬದಲಾವಣೆ, ಜಿಎಸ್‌ಟಿ ಅನುಷ್ಠಾನದಂತಹ ಮಹತ್ತರ ಕಾರ್ಯಕ್ಕೆ ಇಳಿಯಿತು ಎಂದರು.

ದೇಶದಲ್ಲಿ ಅಂತರ್ಜಾತಿಯ ವಿವಾಹಗಳು ಹೆಚ್ಚಾಗುತ್ತಿದ್ದರೂ ದಲಿತ ಸಮುದಾಯದ ಮೇಲೆ ಆಗುತ್ತಿರುವ ದೌರ್ಜನ್ಯಗಳಿಗೆ ಸಂಪೂರ್ಣವಾಗಿ ಕಡಿವಾಣ ಬಿದ್ದಿಲ್ಲ. ಯಾವುದೇ ಸರ್ಕಾರವಿದ್ದರೂ ದೌರ್ಜನ್ಯಗಳು ನಿಂತಿಲ್ಲ. ದೌರ್ಜನ್ಯ ನಡೆದ ಮಾತ್ರಕ್ಕೆ ಅದನ್ನು ರಾಜಕೀಯವಾಗಿ ಪರಿಗಣಿಸುವುದು ಕೂಡ ಸರಿಯಲ್ಲ. ಅದೊಂದು ಸಾಮಾಜಿಕ ಸಮಸ್ಯೆಯಾಗಿ ಕಾಡುತ್ತಿದೆ. ಗೊರೆಗಾಂವ್, ಗುಜರಾತ್ ಮುಂತಾದೆಡೆ ನಡೆದ ಪ್ರಕರಣಗಳು ಗಂಭೀರವಾದವುಗಳು. ದೌರ್ಜನ್ಯಗಳಿಗೆ ಕಡಿವಾಣ ಬೀಳಬೇಕಾದ್ದು ಅವಶ್ಯ ಎಂದು ಸಚಿವ ಅತವಾಳೆ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಜೊತೆ ರಿಪಬ್ಲಿಕ್ ಪಕ್ಷ ಸದಾ ಇರಲಿದೆ. ಕರ್ನಾಟಕದಲ್ಲಿನ ಮುಂದಿನ ಚುನಾವಣೆಯ ಸಂದರ್ಭದಲ್ಲೂ ಬಿಜೆಪಿಗೆ ಸಾಥ್ ನೀಡಲಿದೆ. ಯಡಿಯೂರಪ್ಪ, ಅನಂತ ಕುಮಾರ್‌ ನಾಯಕತ್ವದಲ್ಲಿ ಬಿಜೆಪಿಗೆ ರಾಜ್ಯದಲ್ಲಿ ಜನಬೆಂಬಲ ದೊರೆಯಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English