ಮಂಗಳೂರು: ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗುವ ಸಾಧ್ಯತೆಯುಳ್ಳ, ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಆತ್ಮಕಥೆ “ಸಾಲ ಮೇಳದ ಸಂಗ್ರಾಮ’ ಜ. 26ರಂದು ಸಂಜೆ 5.30ಕ್ಕೆ ಕುದ್ರೋಳಿ ಕ್ಷೇತ್ರದ ಸಂತೋಷಿ ಕಲಾಮಂಟಪದಲ್ಲಿ ಬಿಡುಗಡೆಗೊಳ್ಳಲಿದೆ.
ಸೋಮವಾರ ಕುದ್ರೋಳಿ ಕ್ಷೇತ್ರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಬಿ. ಜನಾರ್ದನ ಪೂಜಾರಿ ಅವರು, ಪುಸ್ತಕ ಬಿಡುಗಡೆ ಮಾಡು ವಂತೆ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಕೋರಿ ಕೊಂಡಿದ್ದೆವು. ಆದರೆ ಅದೇ ದಿನ ಅವರಿಗೆ ಪೂರ್ವ ನಿಗದಿತ ಅನ್ಯಕಾರ್ಯಕ್ರಮ ಇರುವುದಾಗಿ ತಿಳಿಸಿದ್ದಾರೆ. ಇದು ನನ್ನ ಆತ್ಮಕಥೆ ಆಗಿರುವುದರಿಂದ ನಾನೇ ಬಿಡುಗಡೆ ಮಾಡಲು ತೀರ್ಮಾನಿಸಿದ್ದೇನೆ ಎಂದರು.
ಬಾಲ್ಯದ ಕಷ್ಟದ ಬದುಕು, ವಿದ್ಯಾಭ್ಯಾಸಕ್ಕಾಗಿ ಎದುರಿಸಿದ ಸವಾಲುಗಳು, ವಕೀಲಿ ವೃತ್ತಿಗೆ ಬಂದ ಅನುಭವ, ವೃತ್ತಿ ಜೀವನ ಕಲಿಸಿದ ಪಾಠಗಳು, ಅನುಭವಗಳು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಯವರಿಂದ ಬಂದ ಕರೆ, ಅವರ ಮಾತನ್ನು ತಿರಸ್ಕರಿಸ ಲಾಗದೆ ಆಕಸ್ಮಿಕವಾಗಿ ರಾಜಕೀಯ ರಂಗ ಪ್ರವೇಶಿಸಿದ ದಿನಗಳು ಹಾಗೂ ಅನಂತರ ರಾಜಕೀಯ ರಂಗದ ಚದುರಂಗದಾಟದಲ್ಲಿ ಬೆಳೆದು ನಿಂತ ಪರಿ ಇವೆಲ್ಲವನ್ನೂ ಯಥಾವತ್ ಬರೆದಿದ್ದೇನೆ ಎಂದು ಜನಾರ್ದನ ಪೂಜಾರಿ ಹೇಳಿದರು.
ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ನರಸಿಂಹ ರಾವ್ ಅವರ ಜತೆಗೆ ಕೆಲಸ ಮಾಡಿದ ದಿನ ಗಳ ನನ್ನ ರಾಜಕೀಯ ಬದುಕಿನ ಏರುಪೇರಿನ ಎಲ್ಲ ಅನುಭವಗಳನ್ನು ಯಥಾವತ್ತಾಗಿ ಬರಹ ರೂಪಕ್ಕೆ ಇಳಿಸಿದ್ದೇನೆ. ಭಾರತ ಸರಕಾರದ ಸಹಾಯಕ ವಿತ್ತ ಸಚಿವ ನಾಗಿದ್ದ ಕಾಲದಲ್ಲಿ ಕೈಗೊಂಡ “ಸಾಲ ಮೇಳ’ ಎಂಬ ಕ್ರಾಂತಿಕಾರಿ ಆರ್ಥಿಕ ಹೆಜ್ಜೆಯ ಕಾಲಘಟ್ಟ ದಲ್ಲಿ ಆದ ಅನುಭವ, ದೇಶಾದ್ಯಂತ ಈ ಸಾಲ ಮೇಳ ವನ್ನು ಬಡವರ ಪರವಾಗಿ ಕೈಗೊಳ್ಳುವ ಹೋರಾಟದ ಸಂದರ್ಭ ದಲ್ಲಿ ಎದು ರಿಸ ಬೇಕಾಗಿ ಬಂದ ಸವಾಲುಗಳು, ಪ್ರಾಣಾ ಪಾಯದ ಸಂದರ್ಭಗಳನ್ನು ಆತ್ಮಕಥೆಯಲ್ಲಿ ನಿರೂಪಿಸಲಾಗಿದೆ ಎಂದರು.
ಈ ದೇಶಕ್ಕೆ, ರಾಜ್ಯಕ್ಕೆ, ನನ್ನನ್ನು ರಾಜಕೀಯವಾಗಿ ಬೆಳೆಸಿದ ನನ್ನ ಜಿಲ್ಲೆಗೆ ಒಬ್ಬ ರಾಜಕಾರಣಿಯಾಗಿ, ಮಾದರಿಯ ಜೀವನದಿಂದ ಹೇಗೆ ಕೆಲಸ ಮಾಡ ಬಹುದು. ಸತ್ಯ- ನಿಷ್ಠೆ- ಪ್ರಾಮಾಣಿಕತೆಯ ರಾಜ ಕಾರಣ ಎಷ್ಟು ಕಠಿನ ಹಾಗೂ ಅದರಲ್ಲಿ ನೋವು ಗಳನ್ನು ನುಂಗಿ ಹೇಗೆ ಕೆಲಸ ಮಾಡಬೇಕಾಗುತ್ತದೆ ಎಂಬು ದನ್ನು ಕೂಡ ಉಲ್ಲೇಖೀಸಿದ್ದೇನೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಕೈಗೊಂಡ ಸಾಮಾಜಿಕ ಪರಿವರ್ತನೆಗಳು, ವಿಧವೆ ಮಹಿಳೆಯರಿಂದ ನಡೆಸಿದ ಕ್ರಾಂತಿಕಾರಿ ಹೆಜ್ಜೆಗಳ ಎಡರು- ತೊಡರುಗಳ ಅನುಭವವನ್ನು ಪುಸ್ತಕದಲ್ಲಿ ಉಲ್ಲೇಖೀಸಿದ್ದೇನೆ. ದಲಿತ ಮಹಿಳೆಯ ಪಾದ ಪೂಜೆಯ ಮೂಲಕ ಮಹಿಳೆಯರಿಗೆ ಹೇಗೆ ಗೌರವ ನೀಡಿ ಸಮಾಜಕ್ಕೆ ಮಾದರಿಯಾಗಬೇಕು ಎಂಬು ದನ್ನು ಕೂಡ ತೋರಿಸಿದ್ದೇನೆ. ಇದನ್ನೂ ಪುಸ್ತಕದಲ್ಲಿ ಬರೆಯಲಾಗಿದೆ ಎಂದರು.
“ಸಾಲ ಮೇಳದ ಸಂಗ್ರಾಮ’ ಆತ್ಮಕಥೆಯಲ್ಲಿ ಬಣ್ಣದ ಮಾತುಗಳಿಲ್ಲ. ಯಾರಿಗೂ ನೋವು ಮಾಡುವ ಉದ್ದೇಶದ ಬರಹಗಳೂ ಇದರಲ್ಲಿಲ್ಲ. ಆದರೆ ಸತ್ಯದ ಜತೆಗೆ ರಾಜಿ ಮಾಡಿಕೊಳ್ಳದೆ ನೇರ ವಾಗಿಯೇ ನನ್ನ ಜೀವನ ಅನುಭವಗಳನ್ನು ತೆರೆದಿಟ್ಟಿದ್ದೇನೆ ಎಂದು ಪೂಜಾರಿ ಹೇಳಿದರು.
ರಮಾನಾಥ ರೈ ಅವರ ಕುರಿತ ವಿಚಾರ ಪುಸ್ತಕದಲ್ಲಿ ಇದೆಯೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಮಾನಾಥ ರೈ ಅವರ ಫೋಟೋ ಇದೆ, ವಿವಾದಾತ್ಮಕ ವಿಚಾರಗಳಿಲ್ಲ. ಆದರೆ ಎಲ್ಲ ವಾಸ್ತವ ವಿಷಯಗಳನ್ನೂ ನಿರೂಪಿಸಿದ್ದೇನೆ. ಹೀಗಾಗಿ ಕೆಲವರಿಗೆ ನೋವಾಗಲೂಬಹುದು. ವೀರಪ್ಪ ಮೊಲಿ, ಅವರ ಪತ್ನಿಯ ವಿಚಾರ, ಪುತ್ರ ಹರ್ಷ ಮೊಲಿ ವಿಚಾರಗಳನ್ನೂ ಪುಸ್ತಕದಲ್ಲಿ ಬರೆದಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೆ ಮಾತುಕತೆ ಹಾಗೂ ನೀಡಿದ ಸಲಹೆ ಸಹಿತ ಎಲ್ಲ ವಿಚಾರಗಳು ಆತ್ಮಕಥೆಯಲ್ಲಿವೆ. ನನ್ನ ಸಲಹೆಯನ್ನು ಅವರು ಸ್ವೀಕಾರ ಮಾಡಿಲ್ಲವಾದರೂ ಅವರ ಮೇಲೆ ನನಗೆ ಯಾವ ದ್ವೇಷವೂ ಇಲ್ಲ. ಮುಂದಿನ 10-15 ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಬೇಕು ಎಂದು ನಾನೇ ಹೇಳಿದ್ದೆ. ಈ ಎಲ್ಲ ವಿಚಾರಗಳು ಪುಸ್ತಕದಲ್ಲಿದೆ ಎಂದು ಪೂಜಾರಿ ಹೇಳಿದರು.
“ಸಾಲ ಮೇಳದ ಸಂಗ್ರಾಮ’ ಆತ್ಮಕಥೆಯು 210 ಪುಟಗಳನ್ನು ಹೊಂದಿದ್ದು, ಒಟ್ಟು 9 ಅಧ್ಯಾಯಗಳಿವೆ. ಸಂತೋಷ್ ಪೂಜಾರಿ ಹಾಗೂ ದೀಪಕ್ ಪೂಜಾರಿ ಅವರು ಇದರ ಪ್ರಕಾಶನದ ಜವಾಬ್ದಾರಿ ವಹಿಸಿದ್ದಾರೆ. ಕಡಿಮೆ ಬೆಲೆಗೆ ಪುಸ್ತಕ ನೀಡಲು ಯೋಚಿಸಲಾಗಿದೆ. ಪುಸ್ತಕ ಮಾರಾಟದಿಂದ ಬರುವ ಲಾಭಾಂಶವನ್ನು ಎಲ್ಲಿಗೆ ನೀಡಬೇಕು ಎಂಬುದನ್ನು ಪುಸ್ತಕದ ಮುನ್ನುಡಿಯಲ್ಲಿಯೇ ಬರೆಯಲಾಗಿದೆ. ನೆನಪಿಗೆ ಬಾರದೆ ಬಾಕಿಯಾದ ಕೆಲವು ವಿಚಾರಗಳನ್ನು ಶೀಘ್ರದಲ್ಲಿ ಎರಡನೇ ಆವೃತ್ತಿಯಲ್ಲಿ ಸೇರಿಸಿ ಪ್ರಕಟಿಸಲಾಗುವುದು. ಪ್ರಸ್ತುತ ಕನ್ನಡದಲ್ಲಿ ಪುಸ್ತಕ ಸಿದ್ಧವಾಗಿದ್ದು, ಇಂಗ್ಲಿಷ್ ಹಾಗೂ ಹಿಂದಿಯಲ್ಲೂ ಹೊರತರುವ ಬಗ್ಗೆ ಈಗಾಗಲೇ ನಿರ್ಧರಿಸಲಾಗಿದೆ. ಜ. 26ರಂದು ಈ ಎಲ್ಲ ಪುಸ್ತಕಗಳನ್ನು ಜತೆಯಾಗಿ ಬಿಡುಗಡೆ ಮಾಡುವ ಬಗ್ಗೆ ಪ್ರಯತ್ನಿಸಲಾಗುವುದು. ಪುಸ್ತಕ ಬಿಡುಗಡೆಯ ಬಳಿಕ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಖುದ್ದು ನಾನೇ ಪುಸ್ತಕ ನೀಡಲಿದ್ದೇನೆ ಎಂದು ಜನಾರ್ದನ ಪೂಜಾರಿ ಅವರು ಹೇಳಿದರು.
Click this button or press Ctrl+G to toggle between Kannada and English