ಮಂಗಳೂರು: ಕರಾವಳಿಗರ ಜೀವನದಿ ನೇತ್ರಾವತಿಯನ್ನು ಬರಿದುಗೊಳಿಸುವ ಎತ್ತಿನಹೊಳೆಯಂತಹ ಮಾರಕ ಯೋಜನೆಗಳನ್ನು ಭವಿಷ್ಯದಲ್ಲಿ ಜಾರಿಗೊಳಿಸುವ ಜನಪ್ರತಿನಿಧಿಗಳಿಗೆ ಪಾಠ ಕಲಿಸಬೇಕು. ಅದಕ್ಕಾಗಿ ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸಲು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಹ್ಯಾದ್ರಿ ಸಂಚಯ ಮುಂದಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಂಚಯದ ಸಂಚಾಲಕ ದಿನೇಶ್ ಹೊಳ್ಳ, ಸೂಕ್ತ ಅಭ್ಯರ್ಥಿ ದೊರೆಯದಿದ್ದಲ್ಲಿ ನೋಟಾ ಅಭಿಯಾನದ ಮೂಲಕ ಪ್ರತಿರೋಧ ಒಡ್ಡಲಾಗುವುದು. ನಮ್ಮ ಅಭಿಯಾನದ ಫಲವಾಗಿ ಕಳೆದ ಸಂಸತ್ ಚುನಾವಣೆಯಲ್ಲಿ 7800 ನೋಟಾ ಮತಗಳು ಚಲಾವಣೆಯಾಗಿದ್ದವು. ಕಳೆದ ಪಂಚಾಯತ್ ಚುನಾವಣೆಯಲ್ಲಿ 28 ಸಾವಿರ ಮತಗಳು ಬಿದ್ದಿದ್ದವು. ಈ ಬಾರಿ ಇನ್ನೂ ಅಧಿಕ ಮತಗಳು ದೊರೆಯುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ಸೂಕ್ತ ಅಭ್ಯರ್ಥಿ ದೊರೆತರೆ ಜಿಲ್ಲೆಯ 2-3 ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಇದು ಕೂಡ ಎತ್ತಿನಹೊಳೆ ವಿರೋಧಿ ಹೋರಾಟದ ಭಾಗವೇ ಆಗಿದೆ ಎಂದರು.
ಎತ್ತಿನಹೊಳೆ ಯೋಜನೆ ಜಾರಿ ವಿರುದ್ಧ ಚುನಾವಣೆಯಲ್ಲಿ ನೋಟಾ ಮತ ಚಲಾವಣೆ ಅಭಿಯಾನದ ಭಾಗವಾಗಿ ವಿನೂತನ ಕಾರ್ಯತಂತ್ರಕ್ಕೆ ಸಹ್ಯಾದ್ರಿ ಸಂಚಯ ಮುಂದಾಗಿದೆ. ಜಿಲ್ಲೆಯ ಮನೆಗಳ ಗೇಟ್‌ಗಳಿಗೆ `ನೇತ್ರಾವತಿಯನ್ನು ರಕ್ಷಿಸಲಾಗದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ಯಾವುದೇ ರಾಜಕಾರಣಿಗಳು ಮತ ಕೇಳಲು ಬರಬೇಡಿ, ನಿಮಗೆ ನಮ್ಮ ಮತ ಬಹಿಷ್ಕಾರ ಮತ್ತು ಧಿಕ್ಕಾರ’ ಎಂಬ ಒಕ್ಕಣೆಯುಳ್ಳ ಬೋರ್ಡ್ ಅಳವಡಿಸಲಾಗುವುದು. ಸಾರ್ವಜನಿಕರಿಗೆ ಇದನ್ನು ಉಚಿತವಾಗಿ ನೀಡಲಾಗುವುದು ಎಂದು ಹೇಳಿದರು.
ಪಶ್ಚಿಮ ಘಟ್ಟದಲ್ಲಿ ಮಾರ್ಚ್ ನಂತರ ಬೀಳುತ್ತಿದ್ದ ಬೆಂಕಿ ಈ ಬಾರಿ ಡಿಸೆಂಬರ್‌ನಲ್ಲಿಯೇ ಬಿದ್ದಿದೆ. ಇಂತಹ ಕೃತ್ಯಗಳ ಹಿಂದೆ ಗಾಂಜಾ, ಎಸ್ಟೇಟ್ ಮಾಫಿಯಾಗಳ ಕೈವಾಡವಿದೆ. ಘಟ್ಟದುದ್ದಕ್ಕೂ ಇರುವ ದೊಡ್ಡೇರಿಬೆಟ್ಟ, ರಾಮನ ಬೆಟ್ಟ, ಸೊಪ್ಪಿನಬೆಟ್ಟ, ಬಾರಿಮಲೆ, ಬಂಜಾರಮಲೆ, ಸೋಮನಕಾಡು, ಅಳಿಯೂರು, ವೆಂಕಟಗಿರಿ, ಅರಮನೆಗುಡ್ಡ ಪ್ರದೇಶಗಳಲ್ಲಿ ಸಹಸ್ರಾರು ಎಕರೆ ಜಾಗ ಈ ಮಾಫಿಯಾಗಳ ಕೈಯಲ್ಲಿದೆ. ಅರಣ್ಯ ಇಲಾಖೆಗೆ ನಿಯಂತ್ರಿಸಲು ಸಾಧ್ಯವಾಗದಷ್ಟು ದೊಡ್ಡ ಮಾಫಿಯಾ ಅಲ್ಲಿ ಕಾರ್ಯಾಚರಿಸುತ್ತಿವೆ. ನಿತ್ಯ ಅರಣ್ಯ ಬೇಟೆ ನಡೆಯುತ್ತಿದೆ. ಸಂರಕ್ಷಿತ ಅರಣ್ಯಗಳಲ್ಲಿ ರಸ್ತೆ ನಿರ್ಮಾಣ ಮಾಡಿದ್ದಾರೆ. ಇವುಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರಿಗಳನ್ನು ಸಚಿವರು ವರ್ಗಾವಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪಶ್ಚಿಮ ಘಟ್ಟದಲ್ಲಿ ರೆಸಾರ್ಟ್ ಮಾಫಿಯಾದಂತೆಯೇ ಗಾಂಜಾ ಮಾಫಿಯಾ ಕೂಡ ಬೇರೂರಿದೆ. ನೂರಾರು ಎಕರೆ ಪ್ರದೇಶಗಳಲ್ಲಿ ಅಕ್ರಮವಾಗಿ ಗಾಂಜಾ ಬೆಳೆಸಲಾಗುತ್ತಿದೆ. ಅಲ್ಲದೆ ಕಾಡುಕೋಣ ಬೇಟೆ ಅವ್ಯಾಹತವಾಗಿದೆ. ಅಲ್ಲಿಗೆ ಜನರು, ಹೊರಗಿನ ಚಾರಣಿಗರು ಹೋಗದಂತೆ ಭಯ ಹುಟ್ಟಿಸುವ ಕೆಲಸವನ್ನು ಮಾಫಿಯಾಗಳು ನಡೆಸುತ್ತಿವೆ. ಇತ್ತೀಚೆಗೆ ಅಡ್ಡಹೊಳೆಗೆ ನಕ್ಸಲೀಯರು ಬಂದಿದ್ದರು ಎನ್ನುವ ಸುದ್ದಿಯಾಗಿತ್ತು. ಆದರೆ ವಾಸ್ತವದಲ್ಲಿ ಯಾವ ನಕ್ಸಲರೂ ಅಲ್ಲಿಗೆ ಬರಲಿಲ್ಲ. ಇದೆಲ್ಲ ಗಾಂಜಾ ಮಾಫಿಯಾಗಳು ಜನರಲ್ಲಿ ಭಯ ಹುಟ್ಟಿಸಲು ಎಸಗಿದ ಕೃತ್ಯ ಎಂದು ಆರೋಪಿಸಿದರು.
ಪಶ್ಚಿಮ ಘಟ್ಟ ಹೊತ್ತಿ ಉರಿಯುತ್ತಿದ್ದು, ನದಿ ಮೂಲಗಳು ಬರಡಾಗುತ್ತಿವೆ. ನೇತ್ರಾವತಿ ಬರಿದಾಗುತ್ತಿದೆ. ಆದರೆ ಸರಕಾರ ಕಾಡನ್ನು ರಕ್ಷಿಸುವುದನ್ನು ಬಿಟ್ಟು ಇರುವ ಕಾಡನ್ನೂ ಅಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜನರ ಮೂಲಕ ಸರಕಾರದ ಗಮನ ಸೆಳೆಯಲು ಜ. 26ರಂದು ಸಹ್ಯಾದ್ರಿ ಸಂಚಯವು ಕಾನನ ರೋದನ ಎಂಬ ವಿಭಿನ್ನ ಪ್ರತಿಭಟನೆಯನ್ನು ಆಯೋಜಿಸಿದ್ದು, ಅಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಎದುರು ಈ ಪ್ರತಿಭಟನೆ ನಡೆಯಲಿದೆ. ಹಸಿರು ಮತ್ತು ಕಪ್ಪು ಬಣ್ಣದ ಮುಖವಾಡ ಧರಿಸಿ ಪ್ರತಿಭಟನೆ ನಡೆಸಲಾಗುವುದು. ಜಾತಿ, ಮತ ಭೇದವಿಲ್ಲದೆ ಸಾರ್ವಜನಿಕರು ಇದರಲ್ಲಿ ಮುಕ್ತವಾಗಿ ಭಾಗವಹಿಸಬಹುದು ಎಂದು ತಿಳಿಸಿದರು.
Click this button or press Ctrl+G to toggle between Kannada and English