ಮಂಗಳೂರು: ಹೆರಿಗೆಗೆಂದು ನಗರ ಬೆಂದೂರ್ವೆಲ್‌ನಲ್ಲಿರುವ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಗರ್ಭಿಣಿಗೆ ಆಸ್ಪತ್ರೆ ಸಿಬ್ಬಂದಿ ಇಂಜೆಕ್ಷನ್ ಚುಚ್ಚಲು ಯತ್ನಿಸಿರುವ ಘಟನೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಪುತ್ತೂರು ಬಪ್ಪಳಿಗೆ ನಿವಾಸಿ ಹಂಝ ಎಂಬವರ ಪತ್ನಿ ಆಯಿಶತ್ ಆರಿಫಾ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜ. 17ರಂದು ಬೆಳಿಗ್ಗೆ 5.30ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಆಕೆಯ ತಪಾಸಣೆ ನಡೆಸಿ, ಗ್ಲೂಕೋಸ್ ಹಾಕಿದ ಬಳಿಕ ಹೆರಿಗೆಗೆ ಸಮಯ ಕೊಟ್ಟು ತೆರಳಿದ್ದರು.
ಈ ವೇಳೆ ಡ್ರಿಪ್ ಹಾಕಿಸಿಕೊಂಡು ಮಲಗಿದ್ದ ಆರಿಫಾ ಅವರ ಬಳಿಗೆ ಬಂದ ಸಂದೇಶ ಎಂಬ ಆಸ್ಪತ್ರೆಯ ತಾಂತ್ರಿಕ ವಿಭಾಗದ ಸಿಬಂದಿ, ‘ಇದು ನಿಮಗೆ ಮೊದಲನೆಯ ಹೆರಿಗೆಯೇ?’ ಎಂದು ಅಸಂಬದ್ಧ ಪ್ರಶ್ನೆ ಕೇಳಿದ್ದಾನಂತೆ. ಈ ಮೂಲಕ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡು ಡ್ರಿಪ್ ನಳಿಕೆಗೆ ಇಂಜೆಕ್ಷನ್ ಚುಚ್ಚಲು ಯತ್ನಿಸಿದ್ದಾನೆ.
ಆದರೆ, ಇವನ ವರ್ತನೆ ಕಂಡ ಆರಿಫಾ ಅದೇಕೆ ಎಂದು ಗಾಬರಿಯಿಂದ ನರ್ಸ್‌ಅನ್ನು ಕೂಗಿದ್ದಾಳೆ. ಇದರಿಂದ ಹೆದರಿದ ಸಂದೇಶ್ ಯಾರಿಗೂ ಹೇಳಬೇಡಿ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ತಕ್ಷಣ ಆರಿಫಾ ತನ್ನ ಗಂಡನಿಗೆ ಈ ವಿಷಯವನ್ನು ತಿಳಿಸಿದ್ದಾಳೆ.
ಪರಾರಿಯಾಗಿದ್ದ ಸಂದೇಶನನ್ನು ಹುಡುಕಿ ಪ್ರಕರಣದ ಬಗ್ಗೆ ವಿಚಾರಿಸುತ್ತಿದ್ದಾಗ ತಕ್ಷಣ ಹಂಝ ಅವರ ಕಾಲು ಹಿಡಿದು ‘ನನ್ನದು ತಪ್ಪಾಯಿತು. ಈ ವಿಚಾರವನ್ನು ಇಲ್ಲಿಗೆ ಬಿಡಿ’ ಎಂದು ಬೇಡಿಕೊಂಡಿದ್ದಾನೆ. ಆದರೆ, ಇಷ್ಟಕ್ಕೆ ಸುಮ್ಮನಾಗದ ಹಂಝ ಆಸ್ಪತ್ರೆಯ ಮ್ಯಾನೇಜರ್‌ಗೆ ವಿಷಯ ತಿಳಿಸುವ ಮೂಲಕ ಆತನ ಅಮಾನತಿಗೂ ಒತ್ತಾಯಿಸಿದ್ದಾರೆ.
ಆಸ್ಪತ್ರೆಯ ಮ್ಯಾನೇಜರ್ ಸಂದೇಶನನ್ನು ಕೆಲಸದಿಂದ ಕಿತ್ತುಹಾಕುವ ಭರವಸೆಯನ್ನೂ ನೀಡಿದ್ದಾರೆ. ಆದರೆ, ಸಂದೇಶ ಈ ಕೃತ್ಯ ಮಾಡಿದ್ದಾದರೂ ಯಾಕೆ ಎಂಬ ಪ್ರಶ್ನೆ ಮಾತ್ರ ಹಾಗೆಯೇ ಉಳಿದದ್ದರಿಂದ ಆರಿಫಾ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಆಯುಕ್ತರು, ಈ ಬಗ್ಗೆ ವಿಚಾರಣೆ ಮಾಡುವಂತೆ ಕದ್ರಿ ಠಾಣೆಯ ಪೊಲೀಸರಿಗೆ ಸೂಚಿಸಿದ್ದಾರೆ.
Click this button or press Ctrl+G to toggle between Kannada and English