ಮಂಗಳೂರು: ಪಣಂಬೂರು ಸಮೀಪ ಸಂಭವಿಸಿದ ದೋಣಿ ದುರಂತದಲ್ಲಿ ನಾಪತ್ತೆಯಾದ ಮೀನುಗಾರರ ಕುಟುಂಬಗಳಿಗೆ ಸರಕಾರದ ವತಿಯಿಂದ ಪರಿಹಾರ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್ ತಿಳಿಸಿದ್ದಾರೆ.
ಶನಿವಾರ ಹಳೆ ಬಂದರು ವಿನುಗಾರಿಕಾ ದಕ್ಕೆಯಲ್ಲಿ ಆಯೋಜಿಸಿದ ಸಭೆಯಲ್ಲಿ ಮಾತನಾಡಿದ ಅವರು, ಸರಕಾರ ನಾಪತ್ತೆಯಾದ ಮೀನುಗಾರರ ಕುಟುಂಬಗಳಿಗೆ ತಲಾ 1 ಲ.ರೂ. ಹಾಗೂ ಗಾಯಾಳುಗಳಿಗೆ ತಲಾ 25,000 ರೂ. ಪರಿಹಾರ ನೀಡಲಿದೆ. ಈಗಾಗಲೇ ದೋಣಿ ದುರಂತದ ವಿವರವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿದೆ. ಪರಿಹಾರ ನೀಡಲು ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದರು.
ಸರಕಾರದ ಸೌಲಭ್ಯಗಳು ಮೀನುಗಾರರಿಗೆ ಸಿಗುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ, ಅಳಿವೆಬಾಗಿಲಿನಲ್ಲಿ 4.60 ಕೋ. ರೂ. ವೆಚ್ಚದಲ್ಲಿ ಡ್ರೆಜ್ಜಿಂಗ್ ಕಾಮಗಾರಿ ಹಾಗೂ ಸಿಗ್ನಲ್ ಅಳವಡಿಸುವ ಪ್ರಕ್ರಿಯೆಗೂ ಟೆಂಡರ್ ನೀಡಲಾಗಿದೆ. ಪ್ರಸ್ತುತ ಮೀನುಗಾರರಿಗೆ 1 ಲಕ್ಷ ಲೀಟರ್ ಡೀಸೆಲ್ ಸಬ್ಸಿಡಿಯಲ್ಲಿ ನೀಡಲಾಗುತ್ತಿದೆ ಎಂದರು.
ಮೀನುಗಾರರ ದೋಣಿಯನ್ನು ಎನ್‌ಎಂಪಿಟಿಯೊಳಗೆ ಪ್ರವೇಶಿಸಲು ಬಿಡುತ್ತಿದ್ದರೆ ಇಂತಹ ದುರಂತ ಸಂಭವಿಸುತ್ತಿರಲಿಲ್ಲ. ಮೀನುಗಾರರ ಕಣ್ಮರೆಗೆ ಎನ್‌ಎಂಪಿಟಿ ಅಧಿಕಾರಿಗಳೇ ನೇರ ಹೊಣೆ. ಅಧಿಕಾರಿಗಳ ಇಂತಹ ವರ್ತನೆಯನ್ನು ಖಂಡಿಸುತ್ತೇನೆ ಎಂದು ಪಾಲೆಮಾರ್ ಹೇಳಿದರು.
ವಿಧಾನಸಭಾ ಉಪಸಭಾಧ್ಯಕ್ಷ ಎನ್. ಯೋಗೀಶ್ ಭಟ್ , ಮೀನುಗಾರಿಕಾ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಸುರೇಶ್ ಕುಮಾರ್, ಪರ್ಸಿನ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ನವೀನ್ ಕರ್ಕೇರ, ಗೌರವಾಧ್ಯಕ್ಷ ಉಮೇಶ್ ಕರ್ಕೇರ, ಕ್ಯಾ| ಮೋಹನ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English