ಮಂಗಳೂರು: ರಾಜಕೀಯ, ಸಾಮಾಜಿಕ ಮುಖಂಡ ಹಮೀದ್ ಕಂದಕ್ (68) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಹೋಟೆಲ್ ವುಡ್‌ಲ್ಯಾಂಡ್‌ನಲ್ಲಿ ನಡೆದ ಅಹಿಂದ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದಾಗಲೇ ಕುಸಿದು ಬಿದ್ದ ಅವರನ್ನು ತಕ್ಷಣ ಯುನಿಟಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಹಲವಾರು ವರ್ಷಗಳಿಂದ ಜೆಡಿಎಸ್‌ನಲ್ಲಿದ್ದ ಅವರು, ಮುಸ್ಲಿಂ ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳಲ್ಲೂ ಪ್ರಮುಖ ಜವಾಬ್ದಾರಿಗಳನ್ನು ಹೊಂದಿದ್ದರು. ಹಲವು ವರ್ಷಗಳ ಕಾಲ ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಟ್ರಾವೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಹಾಜಿ ಹಮೀದ್ ಕಂದಕ್ ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದರು. ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳು ಹಾಗೂ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಸ್ಥಾಪನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.
ಮೃತದೇಹದ ಅಂತಿಮ ದರ್ಶನಕ್ಕಾಗಿ ವೆಲೆನ್ಸಿಯಾದ ಅವರ ನಿವಾಸದಲ್ಲಿ ಇರಿಸಲಾಗಿದೆ. ನಾಳೆ ಬೆಳಗ್ಗೆ 10 ಗಂಟೆಗೆ ಮಂಗಳೂರಿನ ಕೇಂದ್ರ ಜುಮಾ ಮಸೀದಿಯ ವಠಾರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರು ಪತ್ನಿ, ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Click this button or press Ctrl+G to toggle between Kannada and English