ಬೆಂಗಳೂರು: ತುಮಕೂರಿನ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಅವರನ್ನು ಮಠಕ್ಕೆ ಕಳುಹಿಸಿಕೊಡಲು ನಿರ್ಧರಿಸಲಾಗಿದೆ. ಮಠದಲ್ಲೇ ಶ್ರೀಗಳಿಗೆ ಚಿಕಿತ್ಸೆ ಮುಂದುವರೆಸಲಿದ್ದು, ಈಗಾಗಲೇ ಮಠದಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಬಿಜಿಎಸ್ ಆಸ್ಪತ್ರೆ ವೈದ್ಯ ಡಾ. ರವೀಂದ್ರ ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಶ್ರೀಗಳ ಆರೋಗ್ಯದಲ್ಲಿ ಬಹಳ ಚೇತರಿಕೆ ಕಂಡುಬಂದಿದೆ. ನ್ಯುಮೋನಿಯಾ ಮತ್ತು ಸೋಂಕು ಇದೆ. ರಕ್ತದಲ್ಲಿ ಬ್ಯಾಕ್ಟೀರಿಯಾ ಇರೋದು ಗೊತ್ತಾಗಿದೆ. ಹಾಗಾಗಿ ಇಲ್ಲೇ ಚಿಕಿತ್ಸೆ ಸದ್ಯಕ್ಕೆ ಮುಂದುವರೆಸಿದ್ದೇವೆ. ಮಠಕ್ಕೆ ಹೋಗುತ್ತೇನೆ ಎಂದು ಶ್ರೀಗಳು ನಿನ್ನೆಯಿಂದಲೇ ಹಠ ಮಾಡ್ತಿದ್ದಾರೆ.
110 ವರ್ಷ ವಯಸ್ಸಿಲ್ಲಿ ಸರ್ಜರಿ ಮಾಡೋದು ಸಾಧ್ಯವಿಲ್ಲ. ಹಾಗಾಗಿ ಎಂಡೋಸ್ಕೋಪಿ ಮೂಲಕ ಸ್ಟಂಟ್ ಹಾಕಲಾಗಿದೆ. ಯಾವುದೇ ಸರ್ಜರಿ ಮಾಡಿಲ್ಲ, ಸ್ಟಂಟ್ ಹಾಕದಿದ್ದರೆ ಪಿತ್ತನಾಳ ಬ್ಲಾಕ್ ಆಗಿ ಸಮಸ್ಯೆಯಾಗುವುದರಿಂದ ಸ್ಟಂಟ್ ಹಾಕಿದ್ದೇವೆ. ಇದನ್ನೇ ಬಹಳ ರಿಸ್ಕ್‌ನಲ್ಲಿ ಹಾಕಿದ್ದೇವೆ ಎಂದು ಮಾಹಿತಿ ನೀಡಿದರು.
ರಕ್ತದಲ್ಲಿ ಸೋಂಕು ಇರುವ ಕಾರಣ ಆ್ಯಂಟಿಬಯಾಟಿಕ್ಸ್ ಕೊಟ್ಟಿದ್ದೇವೆ. ಇನ್ನು 8-10 ದಿನಗಳವರಗೆ ಆ್ಯಂಟಿಬಯಾಟಿಕ್ಸ್ ಕೊಡಬೇಕು. ಮಠಕ್ಕೆ ಮರಳಿದರೂ ಇದೇ ಔಷಧಿ ಮುಂದುವರೆಸಬೇಕು. ಸದ್ಯ ಬಿಪಿ ನಾರ್ಮಲ್ ಆಗಿದೆ, ಕಿಡ್ನಿ ಫಂಕ್ಷನ್ ಕೂಡಾ ಸರಿಯಾಗಿದೆ. ಸಿಟಿ ಮತ್ತು ಅಲ್ಟ್ರಾ ಸೌಂಡ್ ಸ್ಕ್ಯಾನ್‌ನಲ್ಲಿ ಪಿತ್ತನಾಳದ ಬ್ಲಾಕ್ ಕ್ಲಿಯರ್ ಆಗಿದೆ. ಹಾಗಾಗಿ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದರು.
ಭಕ್ತರಿಗೆ ದರ್ಶನ ಕೊಟ್ಟರೆ ಬರುವ ಜನರಿಂದ ಸೋಂಕು ಹೆಚ್ಚುವ ಆತಂಕ ಇರುತ್ತದೆ. ಹಾಗಾಗಿ ಇಲ್ಲಿಯೂ ದರ್ಶನ ಕೊಡುವುದು ಬೇಡ ಎನ್ನುತ್ತಿದ್ದೇವೆ. ಮಠದಲ್ಲಿಯೂ ಕೆಲ ದಿನ ಭಕ್ತರ ಭೇಟಿ ಬೇಡವೆಂದು ಸಲಹೆ ನೀಡಿದ್ದೇವೆ. ಸ್ಥಳೀಯ ತಜ್ಞರೊಂದಿಗೆ ನಮ್ಮ ತಜ್ಞರು ಮಠದಲ್ಲಿ ಶ್ರೀಗಳಿಗೆ ಚಿಕಿತ್ಸೆ ಮುಂದುವರೆಸಲಿದ್ದಾರೆ ಎಂದು ಡಾ. ರವೀಂದ್ರ ಹೇಳಿದರು.
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಪಿತ್ತನಾಳಕ್ಕೆ ಸ್ಟಂಟ್‌ಗಳನ್ನು ಹಾಕಿದ್ದರೂ ಕೂಡ ಸಿದ್ದಗಂಗಾ ಶ್ರೀಗಳು ಶಿವನ ಆರಾಧನೆಯನ್ನು ಬಿಡಲಿಲ್ಲ. ಮಠದಿಂದಲೇ ಶಿಷ್ಯರು ತಂದಿದ್ದ ಪೂಜಾ ಪರಿಕರಗಳನ್ನು ಬಳಸಿಕೊಂಡು ಶಿವಪೂಜೆ ನೆರವೇರಿಸಿದರು.
Click this button or press Ctrl+G to toggle between Kannada and English