ಮಂಗಳೂರು: ಕೋಮು ಗಲಭೆಯಲ್ಲಿ ಮುಗ್ಧ ಅಲ್ಪಸಂಖ್ಯಾತರ ಮೇಲಿನ ಪ್ರಕರಣಗಳನ್ನು ಕೈಬಿಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಹಿಂದೂ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ. ಆದ್ದರಿಂದ ಈ ಆದೇಶವನ್ನು ಸರ್ಕಾರ ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಹಾಸಭಾ ರಾಜ್ಯಾಧ್ಯಕ್ಷ ನಾ.ಸುಬ್ರಹ್ಮಣ್ಯ ರಾಜು ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ವೇಳೆ ಎಸ್‌ಡಿಪಿಐ, ಪಿಎಫ್ಐ ಸಂಘಟನೆಗಳ ವಿರುದ್ಧದ 140ಕ್ಕೂ ಅಧಿಕ ಗಂಭೀರ ಪ್ರಕರಣಗಳನ್ನು ಹಿಂದಕ್ಕೆ ಪಡೆದಿತ್ತು. ಇದರಿಂದ ರಾಜ್ಯದಲ್ಲಿ ಕೋಮು ಗಲಭೆಗಳು ಜಾಸ್ತಿಯಾಗಿದೆಯೇ ವಿನಃ ಕಡಿಮೆಯಾಗಿಲ್ಲ.
ಈ ಪ್ರಕರಣಗಳನ್ನು ಹಿಂದಕ್ಕೆ ಪಡೆಯುದಾದರೆ ಪ್ರಕರಣ ದಾಖಲಿಸುವ ಅಗತ್ಯವಾದರೂ ಏನಿತ್ತು? ಇದೀಗ ಮತ್ತೆ ಓಟಿನ ಆಸೆಗಾಗಿ ಅಲ್ಪಸಂಖ್ಯಾತರ ಮೇಲಿನ ಕೋಮು ಗಲಭೆ ಪ್ರಕರಣಗಳನ್ನು ಸರಕಾರಕ್ಕೆ ಹಿಂದಕ್ಕೆ ಪಡೆಯಲು ಹೊರಟಿರುವುದನ್ನು ವಿರೋಧಿಸುವುದಾಗಿ ಹೇಳಿದರು.
ಎಲ್ಲ ವಿಚಾರಗಳಿಗೆ ಆಧಾರ್ ಕಾರ್ಡ್‌ಅನ್ನು ಕಡ್ಡಾಯಗೊಳಿಸುವ ಕೇಂದ್ರ ಸರ್ಕಾರ, ಮತದಾರರ ಗುರುತಿನ ಚೀಟಿ ಜೊತೆಗೆ ಆಧಾರ್ ಲಿಂಕ್ ಅನ್ನು ಯಾಕೆ ಮಾಡುತ್ತಿಲ್ಲ. ಇದನ್ನು ಜಾರಿಗೊಳಿಸಿದರೆ ಅನ್ಯ ರಾಜ್ಯಗಳಿಂದ ಇಲ್ಲಿಗೆ ಬಂದು ನಕಲಿ ಮತ ಚಲಾಯಿಸುವುದನ್ನು ತಪ್ಪಿಸಬಹುದು. ಮಂಗಳೂರಿನಲ್ಲಿ ಕೇರಳ ಯುವಕರನ್ನು ಮತದಾರರ ಪಟ್ಟಿಗೆ ಸೇರಿಸುವ ಪ್ರಯತ್ನ ನಡೆಯುತ್ತಿರುವುದೇ ಇದಕ್ಕೆ ಉದಾಹರಣೆ ಎಂದರು.
ಅಖಿಲ ಭಾರತ ಹಿಂದೂ ಮಹಾಸಭಾವು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ 150 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಫೆಬ್ರವರಿ ಅಂತ್ಯದಲ್ಲಿ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗುವುದು. ಹಿಂದುತ್ವಕ್ಕಾಗಿ ರಾಜಕೀಯ ಪ್ರವೇಶ ಅನಿವಾರ್ಯ ಎಂಬ ಕಾರಣಕ್ಕೆ ಮಹಾಸಭಾ ರಾಜಕೀಯ ಪ್ರವೇಶ ಮಾಡಿದೆ.
ರಾಜ್ಯ ಸರ್ಕಾರ ಭ್ರಷ್ಟಾಚಾರ ಹಾಗೂ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಇದನ್ನು ಪ್ರಶ್ನಿಸುವ ಅಥವಾ ವಿರೋಧಿಸುವ ವಿರೋಧ ಪಕ್ಷಗಳು ಕುರುಡುತನ ಪ್ರದರ್ಶಿಸುತ್ತಿವೆ. ಇದು ಹಿಂದೂಗಳ ದೌರ್ಭಾಗ್ಯವೇ ಸರಿ. ಇದರಿಂದಾಗಿ ಪೊಲೀಸ್ ಅಧಿಕಾರಿಗಳ ಆತ್ಮಸ್ಥೈರ್ಯ ಕುಗ್ಗಿಸಿದಂತಾಗುತ್ತದೆ. ಇದಕ್ಕೆ ಮುಂದಿನ ಚುನಾವಣೆಯಲ್ಲಿ ಹಿಂದೂಗಳು ಸೂಕ್ತ ಉತ್ತರ ನೀಡಲಿದ್ದಾರೆ ಎಂದರು.
ದ.ಕ.ಜಿಲ್ಲೆಯಲ್ಲಿ ಎಲ್ಲ 8 ವಿಧಾನಸಭಾ ಕ್ಷೇತ್ರಗಳಲ್ಲಿ ಹಿಂದೂ ಮಹಾಸಭಾದಿಂದ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 13 ಸ್ಥಾನಗಳಿಗೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಎರಡು ಸ್ಥಾನಗಳಿಗೆ ಸ್ಪರ್ಧಿಸಿ ಸೋತಿತ್ತು. ಆಗ ಮಹಾಸಭಾಕ್ಕೆ ಚಿಹ್ನೆಯ ತೊಂದರೆ ಎದುರಾಗಿತ್ತು. ಈ ಬಾರಿ ಮಹಾಸಭಾದ ಚಿಹ್ನೆಯನ್ನೇ ಹೊಂದುವ ಬಗ್ಗೆ ಪ್ರಯತ್ನಿಸಲಾಗುವುದು ಎಂದರು.
ಹಿಂದೂ ಮಹಾಸಭಾಕ್ಕೆ ಕಾಂಗ್ರೆಸ್ ನೇರ ಸ್ಪರ್ಧಿಯೇ ವಿನಃ ಬಿಜೆಪಿ ಅಲ್ಲ. ಹಿಂದೂಗಳ ರಕ್ಷಣೆ ಹಿಂದೂ ಮಹಾಸಭಾದಿಂದ ಮಾತ್ರ ಸಾಧ್ಯ ಎಂದು ಜನತೆಗೆ ತಿಳಿದಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ನ ಹಿಂದೂ ವಿರೋಧಿ ರಾಜಕಾರಣವನ್ನು ಕಂಡು ಜನತೆ ರೋಸಿಹೋಗಿದೆ. ಈ ಬಾರಿಯ ಚುನಾವಣೆಯಲ್ಲಿ ಹಿಂದೂ ಮಹಾಸಭಾ ಯಾವುದೇ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಪ್ರಸ್ತಾಪವೇ ಇಲ್ಲ ಎಂದರು.
ಮುಖಂಡರಾದ ಧರ್ಮೇಂದ್ರ, ರಾಜೇಶ್ ಪುತ್ರನ್, ರೋಹಿತ್, ರವಿ, ಭಂಡಾರ್ಕರ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English