ಯುವಕರು ಪಕೋಡ ಮಾರಿ ಬದುಕ್ತಿರೋದೆ ಮೋದಿ ಮೇಕ್‌ ಇನ್‌ ಇಂಡಿಯಾ: ಹೆಚ್‌ಡಿಕೆ ವ್ಯಂಗ್ಯ

1:55 PM, Tuesday, January 30th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

kumarswamyವಿಜಯಪುರ: ನಮ್ಮ ಯುವಕರು ಪಕೋಡ ಮಾರಾಟ ಮಾಡಿ ಬದುಬೇಕಿದೆ. ಇದೇ ಪ್ರಧಾನಿ ಮೋದಿ‌ ಅವರ ಮೇಕ್ ಇನ್ ಇಂಡಿಯಾ ಎಂದು ಉದ್ಯೋಗ ಸೃಷ್ಟಿ ಕುರಿತ ಪ್ರಧಾನಿ ಮೋದಿ ಹೇಳಿಕೆಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್. ಡಿ. ಕುಮಾರಸ್ವಾಮಿ ಟಾಂಗ್‌ ನೀಡಿದ್ದಾರೆ.

ಸೋಮವಾರದಿಂದ ಐದು ‌ದಿನಗಳ ವಿಜಯಪುರ‌ ಜಿಲ್ಲಾ ಪ್ರವಾಸದಲ್ಲಿರುವ ಅವರು ಮಾಧ್ಯಮದವರ ಜತೆ ಮಾತಾನಡಿದರು. ಪ್ರತಿ ವರ್ಷ 2ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಪ್ರಧಾನಿ ಮೇಕ್ ಇನ್ ಇಂಡಿಯಾ ಬಗ್ಗೆ ಮಾತನಾಡಿದ್ದರು. ಪಕೋಡ ಮಾರಾಟ ಮಾಡುವುದೂ ಸಹ‌ ಮೇಕ್ ಇನ್ ಇಂಡಿಯಾ ಎಂದು ಜನರಿಗೆ ಈಗ ಗೊತ್ತಾಗಿದೆ. ಉದ್ಯೋಗ ಕುರಿತು ಮೋದಿ ನೀಡಿದ ಭರವಸೆ ಯಾವುದು ಎಂದು ಜನರಿಗೆ‌ ಈಗ ಗೊತ್ತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು ನಾಡಿನ ಜನರ ತಲೆ ಮೇಲೆ 2.90 ಲಕ್ಷ ಕೋಟಿ ರೂ. ಸಾಲದ ಹೊರೆ ಹೊರೆಸಿರುವುದೇ ರಾಜ್ಯ ಸರ್ಕಾರದ ಸಾಧನೆ. ಈ ಬಾರಿ ಬಜೆಟ್ ಮಂಡನೆ ಮಾಡುತ್ತಿರುವುದು ಕೇವಲ ತಾತ್ಕಾಲಿಕ ಬಜೆಟ್ ಎಂದರು. ಮೈಸೂರು ಮಿನರಲ್ ಹಗರಣ ವಿಚಾರ ಸ್ಯಾಂಪಲ್ ಮಾತ್ರ, ಅಭಿ ಪಿಕ್ಚರ್ ಬಾಕಿ ಹೈ ಎಂದು ಹೇಳುವ ಮೂಲಕ ಹೆಚ್‌ಡಿಕೆ ಕುತೂಹಲವನ್ನು ಹಾಗೇ ಉಳಿಸಿದ್ದಾರೆ.

5000 ಕೋಟಿ ರೂ. ಹಗರಣದ ದಾಖಲೆಗಳ ಬಿಡುಗಡೆ ಮಾಡಿದ್ದೇನೆ. ಅವು ಸರ್ಕಾರದ ದಾಖಲೆಗಳಾದರೂ ಈವರೆಗೂ ಮುಖ್ಯಮಂತ್ರಿ ಪ್ರತಿಕ್ರಿಯೆ ನೀಡಿಲ್ಲ. ಸಚಿವ ವಿನಯ ಕುಲಕರ್ಣಿಗೆ ಬರೆದುಕೊಟ್ಟು ಹೇಳಿಕೆ ಕೊಡಿಸಲಾಗಿದೆ ಎಂದು ಕುಮಾರಸ್ವಾಮಿ ಟೀಕಿಸಿದರು.

ಬಿಜೆಪಿ ಹಾಗೂ ಎಐಎಂಐಎಂ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಆರೋಪಕ್ಕೆ ಪ್ರತಿಕ್ರಿಯಿಸಿದ ಹೆಚ್‌ಡಿಕೆ, ಒಳ ಒಪ್ಪಂದದ ಬಗ್ಗೆ ಸ್ಪಷ್ಟ ಮಾಹಿತಿ ಇದ್ದರೆ ಜನರ ಮುಂದೆ ಇಡಬೇಕು. ಕಾಂಗ್ರೆಸ್‌ಗೆ ಮುಸ್ಲಿಂ ಮತಗಳು ಹಿನ್ನಡೆಯಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಧೂಳಿಪಟ ಆಗುವ ಭಯವಿರುವುದರಿಂದ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

ಒಂದು ಬಾರಿ ಕಾಂಗ್ರೆಸ್ ಹಾಗೂ ಒಂದು ಬಾರಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ನೋಡಿದ್ದೇವೆ. ಆದ್ದರಿಂದ, ರಾಷ್ಟ್ರೀಯ ಪಕ್ಷಗಳ ಜೊತೆಗೆ ಮೈತ್ರಿ ಇಲ್ಲ. ಈ ಬಾರಿ ಸ್ವತಂತ್ರವಾಗಿ 113 ಸಂಖ್ಯೆಯನ್ನು ಜನ ಕೊಡಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಹೆಚ್. ಡಿ. ದೇವೇಗೌಡರ ಆಶೀರ್ವಾದ ಹಾಗೂ ಮಾರ್ಗದರ್ಶನದೊಂದಿಗೆ ಸುಮಾರು 5 ಲಕ್ಷ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಮಾಡಲಾಗುವುದು. ಆ ಸಮಾವೇಶದಲ್ಲಿ ಜೆಡಿಎಸ್ ಕಾರ್ಯಕರ್ತರ ಸಮ್ಮುಖದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಕುಮಾರಸ್ವಾಮಿ ಇದೇ ವೇಳೆ ತಿಳಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English