ಉಡುಪಿ: ಉಡುಪಿ ಜಿಲ್ಲೆಯ 5 ವಿಧಾನ ಸಭಾ ಕ್ಷೇತ್ರಗಳ ಪೈಕಿ ಕುಂದಾಪುರ ವಿಧಾನಸಭಾ ಕ್ಷೇತ್ರ ಹೆಚ್ಚು ಕುತೂಹಲ ಮೂಡಿಸಿದೆ. ಜಿಲ್ಲೆಯಲ್ಲಿ ಸ್ವಲ್ಪವಾದರೂ ಕೃಷಿ ಜೀವಂತವಾಗಿರುವ ತಾಲೂಕು ಕುಂದಾಪುರ. ಇಲ್ಲಿನ ಸುಂದರ ಪ್ರಕೃತಿ ಮಡಿಲು, ಮರವಂತೆಯ ಕಡಲಿನ ಸೌಂದರ್ಯ ಎಲ್ಲವೂ ಚಿತ್ತಾಕರ್ಷಕ.
ಪ್ರಕೃತಿಯ ಸೌಂದರ್ಯದ ನಡುವೆಯೂ ಇಲ್ಲಿ ಆಗಾಗ ನಕ್ಸಲರ ಗುಂಡಿನ ಸದ್ದು ಜಿಲ್ಲಾಡಳಿತವನ್ನು ಕಂಗೆಡಿಸುತ್ತಿದೆ. ಕುಂದಗನ್ನಡದ ಕಡಲತಡಿಯ ನಗರ ಕುಂದಾಪುರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆಯೇ ಇಲ್ಲಿಯವರೆಗೆ ಪೈಪೋಟಿ ನಡೆಯುತ್ತಾ ಬಂದಿದೆ. ಇಲ್ಲಿ ಜೆಡಿಎಸ್ ಆಟಕ್ಕೂಂಟು ಲೆಕ್ಕಕ್ಕಿಲ್ಲದ ಪರಿಸ್ಥಿತಿ.
ಈ ಕ್ಷೇತ್ರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿಯಿಂದ ಸ್ಪರ್ಧಿಸಲು ಆರಂಭಿಸಿದ ಮೇಲೆ ಬಿಜೆಪಿ ಇಲ್ಲಿ ನಿರಂತರವಾಗಿ ಗೆಲುವನ್ನು ಕಂಡಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಹಾಲಾಡಿ ಶ್ರೀನಿವಾಸ ಶೆಟ್ಟಿ ಪಕ್ಷದ ಮೇಲೆ ಮುನಿಸಿಕೊಂಡು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಪಕ್ಷೇತರರಾಗಿಯೂ ಸ್ಪರ್ಧಿಸಿ 40 ಸಾವಿರ ಮತಗಳ ಅಂತರದಿಂದ ಗೆದ್ದ ಹಾಲಾಡಿ ತನ್ನ ಜನಪ್ರಿಯತೆ ಏನೆಂಬುದನ್ನು ಪಕ್ಷಕ್ಕೆ ತೋರಿಸಿಕೊಟ್ಟಿದ್ದರು. ಇದೇ ಕಾರಣದಿಂದ ಈ ಬಾರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯುಡಿಯೂರಪ್ಪ ಹಾಲಾಡಿ ಅವರ ಮನ ಒಲಿಸಿ ಮತ್ತೆ ಬಿಜೆಪಿಗೆ ಸೇರುವಂತೆ ಮಾಡಿದ್ದಾರೆ.
ಹಾಲಾಡಿ ವಿರುದ್ಧ ಬಿಜೆಪಿಯಲ್ಲೇ ಅಸಮಧಾನ ಹಾಲಾಡಿ ಬಿಜೆಪಿ ಸೇರುತ್ತಿರುವುದು ಕುಂದಾಪುರದ ಬಿಜೆಪಿಯಲ್ಲಿ ಅಪಸ್ವರ ಎಬ್ಬಿಸಿದೆ. ಅದಕ್ಕೆ ಕಾರಣ ಕಳೆದ ಬಾರಿ ಹಾಲಾಡಿ ಪಕ್ಷ ಬಿಟ್ಟಾಗ ಬಿಜೆಪಿಯಿಂದ ಸ್ಪರ್ಧಿಸಿದ್ದ ಕಿಶೋರ್. ಬಿಜೆಪಿ ಪಕ್ಷದೊಳಗೆ ಅಸಮಾಧಾನದ ಹೊಗೆಯಾಡುತ್ತಿದ್ದು, ಇತ್ತೀಚೆಗೆ ಕುಂದಾಪುರದಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಂದರ್ಭದಲ್ಲಿ ಈ ಅಸಮಾಧಾನ ಬಹಿರಂಗವಾಗಿ ಪ್ರಕಟವಾಗಿತ್ತು. ಹಾಲಾಡಿ ವರ್ಷಸ್ಸು ವರದಾನ ಹಾಲಾಡಿ ಸೇರ್ಪಡೆಯನ್ನು ಹಲವು ಬಿಜೆಪಿ ಕಾರ್ಯಕರ್ತರು ಯಡಿಯೂರಪ್ಪ ಅವರಲ್ಲಿ ಬಹಿರಂಗವಾಗಿಯೇ ಪ್ರಶ್ನಿಸಿದ್ದರು.
ಆದರೆ ಹಾಲಾಡಿ ಅವರ ವರ್ಚಸ್ಸು ಬಿಜೆಪಿಗೆ ವರದಾನವಾಗಲಿದೆ ಎಂದು ಅಂದಾಜಿಸಲಾಗಿದೆ. ಕಾಂಗ್ರೆಸ್ ನಿಂದ ರಾಕೇಶ್ ಮಲ್ಲಿ? ಕಾಂಗ್ರೆಸ್ ನಿಂದ ಈ ಬಾರಿ ಕುಂದಾಪುರದಲ್ಲಿ ಬಂಟ್ವಾಳ ಮೂಲದ ರಾಕೇಶ್ ಮಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಮಲ್ಲಿ ಸದ್ಯ ಕುಂದಾಪುರದಲ್ಲಿ ಬೀಡುಬಿಟ್ಟು ಜನ ಸಂಪರ್ಕ ಸಾಧಿಸುವಲ್ಲಿ ನಿರತರಾಗಿದ್ದಾರೆ. ಇಂಟಕ್ ನ ಹಲವು ಸಮ್ಮೇಳನಗಳನ್ನು ಆಯೋಜಿಸಿ ಯುವಕರನ್ನು ಪಕ್ಷದತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಬಂಟ ಬಿಲ್ಲವ ಸಮುದಾಯಗಳೇ ನಿರ್ಣಾಯಕ ಆದರೆ ತಮ್ಮೂರಿನ ಪ್ರತಿನಿಧಿಯ ಬಗ್ಗೆ ಇಲ್ಲಿನ ಜನ ಹೆಚ್ಚು ಒಲವು ವ್ಯಕ್ತಪಡಿಸುವ ಸಾಧ್ಯತೆ ದಟ್ಟವಾಗಿದೆ. ಈ ಕ್ಷೇತ್ರದ ಜಾತಿವಾರು ಲೆಕ್ಕಾಚಾರದ ಪ್ರಕಾರ ಬಂಟ ಮತ್ತು ಬಿಲ್ಲವ ಸಮುದಾಯವೇ ನಿರ್ಣಾಯಕವಾಗಿದೆ. ಈ ಹಿನ್ನಲೆಯಲ್ಲಿ ಈ ಬಾರಿಯ ಚುನಾವಣಾ ಕದನ ಕುತೂಹಲ ಮೂಡಿಸಿದೆ.
Click this button or press Ctrl+G to toggle between Kannada and English