ಮಂಗಳೂರು: ಕೂಳೂರು, ಬೆಂಗರೆ, ಜೋಕಟ್ಟೆಯ ತೋಕೂರು ಪ್ರದೇಶಗಳಲ್ಲಿ ಫಲ್ಗುಣಿ ನದಿ ನೀರು ಕಲುಷಿತಗೊಳ್ಳುತ್ತಿರುವ ಬಗ್ಗೆ ಇಂದು ನಡೆದ ಮಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲಿ ಪ್ರಸ್ತಾಪಗೊಂಡಿತು. ಮೇಯರ್ ಕವಿತಾ ಸನಿಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯ ದಯಾನಂದ ಶೆಟ್ಟಿ ಈ ಬಗ್ಗೆ ಪ್ರಸ್ತಾಪಿಸಿ, ಫಲ್ಗುಣಿ ನದಿಯಲ್ಲಿ ಕಲುಷಿತ ನೀರು ಹರಿಯುತ್ತಿರುವುದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿರುವ ಬಗ್ಗೆ ವರದಿಯಾಗಿದೆ. ಕಳೆದ ಬಾರಿ ಮರವೂರಿನಲ್ಲಿ ಸಮಸ್ಯೆ ಎದುರಾದಾಗ ಸಮಿತಿ ರಚಿಸಲಾಗಿದ್ದು, ಅದರ ವರದಿ ಏನಾಗಿದೆ ಎಂದು ಪ್ರಶ್ನಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಮನಪಾ ಆಯುಕ್ತ ಮುಹಮ್ಮದ್ ನಝೀರ್, ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಈಬಗ್ಗೆ ಜಿಲ್ಲಾ ಪಂಚಾಯತ್, ಮನಪಾ, ಕೈಗಾರಿಕೆಗಳು, ಪರಿಸರ ಮಾಲಿನ್ಯ ಅಧಿಕಾರಿಗಳನ್ನು ಒಳಗೊಂಡ ಸಭೆ ನಡೆದಿದೆ. ಸಭೆಯಲ್ಲಿ ಮನಪಾದ ಕೆಲವು ಮನೆಗಳ ಒಳಚರಂಡಿ ನೀರು ಕೂಡಾ ನದಿಗೆ ಸೇರುತ್ತಿರುವ ಬಗ್ಗೆ ಪ್ರಸ್ತಾಪವಾಗಿದ್ದು, ಅದನ್ನು ತಡೆಯಲು ಸೂಚನೆ ನೀಡಲಾಗಿದೆ. ಮರವೂರಿನಲ್ಲಿ ಹೊಸ ಕಿಂಡಿ ಅಣೆಕಟ್ಟು ನಿರ್ಮಾಣವಾದ ಬಳಿಕ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಉಪ್ಪು ನೀರಿನ ಅಂಶ ಜಾಸ್ತಿ ಆಗಿ ಸಮಸ್ಯೆ ಆಗಿದೆ.
ಅಣೆಕಟ್ಟಿನ ಒಂದು ಭಾಗದಿಂದ ನೀರನ್ನು ಕುಡಿಯಲು ಉಪಯೋಗಿಸುತ್ತಿರುವ ಕಾರಣ ಸದ್ಯ ಇನ್ನೊಂದು ಭಾಗದಲ್ಲಿ ಅಧಿಕಗೊಳ್ಳುತ್ತಿರುವ ಉಪ್ಪುನೀರನ್ನು ಹರಿದು ಬಿಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಪರಿಶೀಲನೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸದಸ್ಯ ದಯಾನಂದ ಪ್ರತಿಕ್ರಿಯಿಸಿ ತೋಕೂರು- ಜೋಕಟ್ಟೆ ಭಾಗದಲ್ಲಿ ಕೆಲವೊಂದು ಕಾರ್ಖಾನೆಗಳವರು ತಮ್ಮ ತ್ಯಾಜ್ಯದ ನೀರನ್ನು ನದಿಗೆ ಬಿಡುತ್ತಿರುವುದ ರಿಂದ ಈ ಸಮಸ್ಯೆ ಆಗುತ್ತಿದ್ದು, ಈ ಬಗ್ಗೆ ಗಮನ ಹರಿಸಬೇಕೆಂದರು.ಮೊದಲ ಹಂತದ ಎಡಿಬಿ ಯೋಜನೆ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತು ಈಗಾಗಲೇ ನಾವು ಪ್ರಸ್ತಾವಿಸಿದ್ದೇವೆ.
ಎಡಿಬಿ ಯೋಜನೆಯ ಕುರಿತು ಹಸ್ತಾಂತರವಾದ ದಾಖಲೆಗಳ ವಿವರ ಕೊಡಿ ಎಂದು ಕಳೆದ ಸಭೆಯಲ್ಲಿ ಆಗ್ರಹಿಸಿದರೆ ಕಡತ ಸಂಖ್ಯೆಗಳನ್ನು ಮಾತ್ರ ಈ ಬಾರಿಯ ಸಭೆಯಲ್ಲಿ ನೀಡಿದ್ದೀರಿ ಎಂದು ಮನಪಾ ಪ್ರತಿಪಕ್ಷ ನಾಯಕ ಗಣೇಶ್ ಹೊಸಬೆಟ್ಟು, ಸದಸ್ಯರಾದ ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ವಿಜಯ ಕುಮಾರ್ ಅವರು ಆಕ್ಷೇಪಿಸಿದರು.
ಬಿಜೆಪಿಯ ಪ್ರೇಮಾನಂದ ಶೆಟ್ಟಿ ಮಾತನಾಡಿ, ಪಾಲಿಕೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಕಡತಗಳು ಆಯಕ್ತರ ಕೊಠಡಿಯಲ್ಲೇ ಕೊಳೆಯುತ್ತಿದೆ. ಗುತ್ತಿಗೆದಾರರಿಗೂ ಹಣ ಪಾವತಿಯಾಗುತ್ತಿಲ್ಲ. ಅಧಿಕಾರಿಗಳನ್ನು ಪ್ರಶ್ನಿಸಿದರೆ ಹಣದ ಕೊರತೆ ಇದೆ ಎನ್ನುತ್ತಾರೆ. ಪಾಲಿಕೆಯಲ್ಲಿ ಕೃತಕ ಆರ್ಥಿಕ ಅಭಾವ ಉಂಟಾಗಿದೆ ಎಂದು ದೂರಿದರು. ಕಾಂಗ್ರೆಸ್‌ನ ಎ.ಸಿ.ವಿನಯ್‌ರಾಜ್ ಮಾತನಾಡಿ, ಬಂಟ್ಸ್ ಹಾಸ್ಟೆಲ್ ರಸ್ತೆ ಅಭಿವೃದ್ದಿ ಕಾಮಗಾರಿ ಏಳು ತಿಂಗಳಾದರೂ ಆರಂಭವಾಗಿಲ್ಲ.
ಪಾಲಿಕೆಯ 43 ಕಾಮಗಾರಿಗಳ ಪೈಕಿ 7 ಕಾಮಗಾರಿ ಮಾತ್ರ ಪ್ರಗತಿಯಲ್ಲಿದೆ ಎಂದರು. ಸುಧೀರ್ ಶೆಟ್ಟಿ ಮಾತನಾಡಿ, ಕ್ರೀಡಾ ಚಟುವಟಿಕೆಗೆ ಮಂಜೂರಾದ ಹಣ ಕೂಡಾ ಪಾವತಿಯಾಗಿಲ್ಲ ಎಂದರು.
ತನ್ನ ವಾರ್ಡ್‌ನ ಅಭಿವೃದ್ದಿಯನ್ನು ಪಾಲಿಕೆಯ ಆಡಳಿತ ನಿರ್ಲಕ್ಷಿಸುತ್ತಿದೆ ಎಂಬ ಬಿಜೆಪಿಯ ಸುಮಿತ್ರಾ ಕರಿಯ ಅವರ ಆಕ್ಷೇಪಕ್ಕೆ ಉತ್ತರಿಸಿದ ಮನಪಾ ಆಯುಕ್ತ ಮುಹಮ್ಮದ್ ನಝೀರ್, ಮಂಗಳೂರು ಮಹಾನಗರ ಪಾಲಿಕೆಯ ಎಲ್ಲ 60 ವಾರ್ಡ್‌ಗಳ ವಿವಿಧ ಅಭಿವೃದ್ಧಿ ಕಾಮಗಾರಿಗೆ ಒಟ್ಟು 79.14 ಕೋಟಿ ರೂ. ಮಂಜೂರಾಗಿದೆ. ಪಾಲಿಕೆಯ ಎಲ್ಲ ಸದಸ್ಯರಿಗೆ ತಮ್ಮ ವಾರ್ಡ್ ವಿವಿಧ ಕಾಮಗಾರಿಗೆ ವರ್ಷಕ್ಕೆ 50 ಲಕ್ಷ ರೂ. ಸದಸ್ಯ ನಿಧಿ ಒದಗಿಸಲಾಗುತ್ತಿದೆ. ಇದಲ್ಲದೆ ಎಲ್ಲ 60 ವಾರ್ಡ್‌ಗಳಿಗೆ 79.14 ಕೋಟಿ ರೂ. ಮಂಜೂರಾಗಿದೆ ಎಂದರು.
ಬಿಜೆಪಿಯ ವಿಜಯ್ ಕುಮಾರ್ ಶೆಟ್ಟಿ ಮಾತನಾಡಿ, ಮೇಯರ್ ಅವರು ಪ್ರತೀ ತಿಂಗಳು ಫೋನ್ ಇನ್ ಕಾರ್ಯಕ್ರಮ ಮಾಡುತ್ತಿದ್ದಾರೆ. ಆದರೆ, ಅದರಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಇತ್ಯರ್ಥ ಮಾಡುವಲ್ಲಿ ವಿಫಲರಾಗಿದ್ದಾರೆ. ನವೆಂಬರ್‌ನಲ್ಲಿ 28 ಕರೆಗಳ ಪೈಕಿ ಒಬ್ಬರು ಕರೆ ಮಾಡಿದ ಕೆಲಸ ಮಾತ್ರ ಮಾಡಲಾಗಿದೆ. ಹೀಗಾಗಿ ಯಾವುದೇ ಕೆಲಸ ಆಗುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ ಎಂದು ದೂರಿದರು.
ಮೇಯರ್ ಮಾತನಾಡಿ, ಜನರ ಸಮಸ್ಯೆಗಳನ್ನು ಆಲಿಸಿ, ಅಧಿಕಾರಿಗಳ ಗಮನಸೆಳೆಯುವ ಕಾರಣಕ್ಕಾಗಿ ಫೋನ್ ಇನ್ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಕರೆ ಮಾಡಿದವರ ಸಮಸ್ಯೆಗಳನ್ನೂ ಇತ್ಯರ್ಥ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಕೆಲವು ಸಮಸ್ಯೆಗಳನ್ನು ಶೀಘ್ರದಲ್ಲಿ ಇತ್ಯರ್ಥ ಮಾಡಲಾಗುವುದಾದರೆ, ಉಳಿದ ಕೆಲಸಗಳಿಗೆ ಅಂದಾಜು ಪಟ್ಟಿ, ಟೆಂಡರ್ ಸೇರಿದಂತೆ ವಿವಿಧ ಹಂತಗಳನ್ನು ದಾಟುವಾಗ ಸ್ವಲ್ಪ ಸಮಯ ಆಗಲಿದೆ ಎಂದರು.
ಸಭೆಯಲ್ಲಿ ಉಪ ಮೇಯರ್ ರಜನೀಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ರವೂಫ್, ನಾಗವೇಣಿ, ಸಬಿತಾ ಮಿಸ್ಕಿತ್ ಉಪಸ್ಥಿತರಿದ್ದರು. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಕ್ರಮ ನೀರಿನ ಸಂಪರ್ಕ ಕಡಿತಗೊಳಿಸುವುದು, ಸ್ಕಿಲ್‌ಗೇಮ್ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡದರೂ ಕೂಡ ಅಧಿಕಾರಿಗಳಿಂದ ಪ್ರಾಮಾಣಿಕ ಸಹಕಾರ ಸಿಗುತ್ತಿಲ್ಲ.
ಹೀಗಾಗಿ ಎಲ್ಲಾ ಕೆಲಸವನ್ನು ಮೇಯರ್ ಅವರೇ ಮಾಡುವ ಪರಿಸ್ಥಿತಿ ಬಂದಿದೆ ಎಂದು ಮಂಗಳೂರು ಮೇಯರ್ ಕವಿತಾ ಸನಿಲ್ ಅಧಿಕಾರಿಗಳ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ಸಭೆಯಲ್ಲಿ ನಡೆಯಿತು.
ಮೇಯರ್ ಹುದ್ದೆಯಲ್ಲಿದ್ದ ನಾನು ಏನಿದ್ದರೂ ಸೂಚನೆ ನೀಡಬಹುದು. ಆದರೆ ಅದನ್ನು ಜಾರಿಗೊಳಿಸಬೇಕಾದದ್ದು ಅಧಿಕಾರಿಗಳು. ಕುಡಿಯುವ ನೀರಿನ ತೆರಿಗೆ, ಆಸ್ತಿ ತೆರಿಗೆ ಸಮರ್ಪಕವಾಗಿ ಮಾಡಬೇಕು ಇಲ್ಲದಿದ್ದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರೂ ಕೂಡ ಅನುಷ್ಠಾನ ಆಗುತ್ತಿಲ್ಲ ಎಂದು ಮೇಯರ್ ಆಕ್ಷೇಪಿಸಿದರು.
ಗುತ್ತಿಗೆದಾರರಿಗೆ ಸರಿಯಾದ ಸಮಯದಲ್ಲಿ ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ ಪಾಲಿಕೆಯ ಟೆಂಡರ್ ವಹಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಬಿಜೆಪಿ ಸದಸ್ಯರು ದೂರಿಸಿದರು. ಮೇಯರ್ ಪ್ರತಿಕ್ರಿಯಿಸಿ, ಪಾಲಿಕೆಯಲ್ಲಿ ನೀರಿನ ಹಾಗೂ ಆಸ್ತಿ ತೆರಿಗೆ ಸರಿಯಾಗಿ ಸಂಗ್ರಹವಾಗುತ್ತಿಲ್ಲ. ನೀರಿನ ಬಿಲ್ ಸುಮಾರು 70 ಕೋಟಿ ರೂ.ಗಳಷ್ಟು ಬಾಕಿ ಇದೆ.
ಪ್ರಸ್ತುತ ವರ್ಷ 26 ಕೋಟಿ ರೂ.ಗಳಷ್ಟು ನೀರಿನ ಬಿಲ್ ಬಾಕಿಯಿದೆ. ಪಾಲಿಕೆ ಅಧಿಕಾರಿಗಳು ಬಡವರ 500, 1 ಸಾವಿರ ರೂ. ಬಿಲ್ ಸಂಗ್ರಹಿಸುತ್ತಿದ್ದಾರೆಯೇ ಹೊರತು ದೊಡ್ಡ ದೊಡ್ಡ ಕುಳಗಳನ್ನು ಬಿಡುತ್ತಿದ್ದಾರೆ. ನಾನೊಬ್ಬಳು ಏನು ಮಾಡುವುದು? ಎಂದು ಪ್ರಶ್ನಿಸಿದರು.
ಜೆಡಿಎಸ್ ಸದಸ್ಯ ಅಬ್ದುಲ್ ಅಝೀಝ್ ಮಾತನಾಡಿ, ಕೆಲಸ ಮಾಡದ ಅಧಿಕಾರಿಗಳನ್ನು ಅಮಾನತು ಮಾಡಿ. ಮೇಯರ್ ಯಾಕೆ ಅಧಿಕಾರಿಗಳು ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು. ಮೇಯರ್ ಮಾತನಾಡಿ, ಮಾರ್ಚ್ ಅಂತ್ಯದೊಳಗೆ ನೀರಿನ ಬಿಲ್ ಮತ್ತು ಆಸ್ತಿ ತೆರಿಗೆ ಸಂಗ್ರಹಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
Click this button or press Ctrl+G to toggle between Kannada and English