ಸುಬ್ರಹ್ಮಣ್ಯ : ಆಗ ಕಾರ್ಗಿಲ್ ಯುದ್ಧದ ಸಮಯ. 1999ನೇ ಇಸವಿ. ಮೂರನೇ ತರಗತಿ ಕಲಿಯುತ್ತಿದ್ದ ಬಾಲಕ ದೂರದರ್ಶನದಲ್ಲಿ ಬರುತ್ತಿದ್ದ ಯುದ್ಧದ ಸನ್ನಿವೇಶಗಳನ್ನು, ಬಂದೂಕು ಹಿಡಿದ ಸೈನಿಕರ ದೃಶ್ಯಗಳನ್ನು ನೋಡುತ್ತಿದ್ದ. ಶಾಲೆಯಿಂದ ಬಂದು ಮನೆಯಲ್ಲಿ ತಲೆದಿಂಬು ಬಂಕರಾಗಿಸಿ, ಆಟಿಕೆ ಗನ್‌ನಿಂದ ಡಿಶುಂ ಡಿಶುಂ ಎಂದು ಮಾಡುವುದು ಸಾಮಾನ್ಯವಾಗಿತ್ತು. ಈಗ ಅದೇ ಬಾಲಕ ಸೇನೆಯಲ್ಲಿ ಕ್ಯಾಪ್ಟನ್ ಹುದ್ದೆಗೇರಿದ್ದಾರೆ. ಅವರೇ ಕಲ್ಮಡ್ಕ ಗ್ರಾಮದ ಕ್ಯಾ.ಪ್ರಶಾಂತ ಜಿ ಕಶ್ಯಪ್. ಜಮ್ಮು ಮತ್ತು ಕಾಶ್ಮಿರದ 20ನೇ ಇನ್‌ಫೆಂಟ್ರಿಯ ಕುಮೌನ್ ರೆಜಿಮೆಂಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಶಾಂತ್ ಡಾ. ಈಶ್ವರಯ್ಯ ಸುಗುಣ ಜಿ. ದಂಪತಿ ಅವರ ಏಕೈಕ ಪುತ್ರ.
ವೈದ್ಯಕೀಯ ಕಲಿಕೆಗೆ ಪ್ರಶಾತ್ ಅವರಿಗೆ ಆಸಕ್ತಿ ಇತ್ತು. ಆದರೆ ಅವಕಾಶ ಸಿಗದಿದ್ದಾಗ ಎಂಜಿನಿಯರಿಂಗ್ ಮುಗಿಸಿದರು. ಆದರೆ ಸೇನೆ ಬಗ್ಗೆ ಆಕರ್ಷಣೆ ಇದ್ದೇ ಇತ್ತು. ಪರಿಣಾಮ ಸೇನೆಗೆ ಸೇರಿದರು.
ಬೆಳ್ಳಾರೆ ಜ್ಞಾನಗಂಗಾ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಪ್ರಗತಿ ಕಾಣಿಯೂರು ಶಾಲೆಯಲ್ಲಿ ಪ್ರೌಢ ಶಿಕ್ಷಣ, ಬೆಂಗಳೂರಿನ ಪಿಇಎಸ್‌ಐಟಿಯಲ್ಲಿ ಎಂಜಿನಿಯರಿಂಗ್ ಪೂರ್ಣಗೊಳಿಸಿ ಇಂಡೋ ಅಮೆರಿಕನ್ ಹೈಬ್ರೀಡೀಡ್ಸ್ ಸಂಸ್ಥೆಯಲ್ಲಿ ಕೆಲ ಸಮಯ ಉದ್ಯೋಗ ನಡೆಸಿದರು. ಇದೇ ವೇಳೆ ಸೇನಾ ಸೇರಲು ಅರ್ಜಿ ಸಲ್ಲಿಸಿದ್ದರು.
ಆರಂಭದಲ್ಲಿ ಮೈಸೂರಲ್ಲಿ ಫ್ಲೈಯಿಂಗ್ ಆಫೀಸರ್ ನೇಮಕಾತಿಗೆ ಹಾಜರಾಗಿದ್ದರು. ಆದರೆ ಅವಕಾಶ ಕೈತಪ್ಪಿದಾಗ ಭೂಸೇನೆಗೆ ಅರ್ಜಿ ಸಲ್ಲಿಸಿದ್ದರು. ಪ್ರವೇಶ ಪರೀಕ್ಷೆಯಲ್ಲಿ ದೇಶದ 262 ಮಂದಿಯ ಪೈಕಿ ಆಂಧ್ರಪ್ರದೇಶ, ಕೇರಳ, ಕರ್ನಾಟಕದಿಂದ ಪ್ರಶಾಂತ್ ಅವರು ಸಹಿತ ಮೂವರೇ ಆಯ್ಕೆಯಾಗಿದ್ದರು. ಬಳಿಕ (ಅಖಿಲ ಭಾರತ ರಕ್ಷಣಾ ಸೇವೆಗಳ (ಸಿ.ಡಿ.ಎಸ್.) ಪರೀಕ್ಷೆಯಲ್ಲಿ ದೇಶದಲ್ಲಿ 67ನೇ ರ್‍ಯಾಂಕ್ ಪಡೆದು ನಾನ್‌ಟೆಕ್ನಿಕಲ್ ಆಫೀಸರ್ ಆಗಿ ನೇಮಕಗೊಂಡು ಲೆಫ್ಟಿನೆಂಟ್ ಹುದ್ದೆ ಪಡೆದರು.
2016ರಲ್ಲಿ ಚೆನ್ನೈನಲ್ಲಿ ಭಾರತೀಯ ಸೇನೆಯ ಅಧಿಕಾರಿಗಳ ತರಬೇತಿ ಶಾಲೆ (ಒಟಿಎಸ್)ಗೆ ಆಯ್ಕೆಯಾದರು. ತರಬೇತಿ ಪೂರ್ಣಗೊಳಿಸಿ ರಾಷ್ಟ್ರಪತಿಗಳ ಪಾಸಿಂಗ್ ಹೌಸ್ ಪೆರೇಡ್ ಲೆಫ್ಟಿನೆಂಟ್‌ನ ಸೇನಾಧಿಕಾರಿಯಾದರು. ರಾಜಸ್ಥಾನ, ಉತ್ತರಪ್ರದೇಶ, ದೆಹಲಿ, ಪಂಜಾಬ್ ಗಳಲ್ಲಿ ಸೇವೆ ಸಲ್ಲಿಸಿರುವ ಪ್ರಶಾಂತ್ ಅವರು ಈಗ ಉತ್ತರಾಖಂಡದ 20ನೇ ಇನ್‌ಫೆಂಟ್ರಿಯ ಕುಮೌನ್ ರೆಜಿಮೆಂಟ್ (ಉತ್ತರಾಖಂಡದ ಬುಡಕಟ್ಟು ಜನಾಂಗಕ್ಕೆ ಸೇರಿದ ಅತಿ ಶೂರ, ಗುರಿ ನಿಪುಣ ಜವಾನರ ರೆಜಿಮೆಂಟ್) ನ ಸೆಕೆಂಡ್ ಇನ್ ಕಮಾಂಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪಾಕಿಸ್ತಾನದ ಉಗ್ರರು ವಿವಿಧ ವೇಷ ತೊಟ್ಟು, ಭಾರತೀಯ ಯೋಧರ ಮೇಲೆ ದಾಳಿ ನಡೆಸುತ್ತಾರೆ. ಆದರೆ ನಮ್ಮ ಯೋಧರು ಹೇಡಿಗಳಲ್ಲ. ಮುಖಾಮುಖಿ ಹೋರಾಟದ ಮೂಲಕವೇ ಪ್ರತ್ಯುತ್ತರ ನೀಡುತ್ತೇವೆ. ಗಡಿಯಲ್ಲಿ ಪ್ರತಿಕ್ಷಣವೂ ತೀರ ಎಚ್ಚರಿಕೆಯಿಂದಲೇ ಕಳೆಯಬೇಕಿದೆ. ಪಾಕ್ ಕಡೆಯಿಂದ ದಾಳಿಗಳು ಮುಂದುವರಿಯುತ್ತಲೇ ಇವೆ. ಹೀಗೆ ಯೋಧರು ಎದುರಿಸುವ ಸವಾಲಿನ ಕ್ಷಣಗಳು, ಕಾರ್ಯಾಚರಣೆಗಳ ಅನುಭವಗಳನ್ನು ಕ್ಯಾ. ಪ್ರಶಾಂತ್ ಹೇಳುತ್ತಿದ್ದರೆ ರೋಮಾಂಚನ!
ಪ್ರಶಾಂತ್ ಅವರ ಅಕ್ಕ ಶ್ರೀವಿದ್ಯಾ ಬೆಂಗಳೂರಿನಲ್ಲಿ ಉದ್ಯೋಗಿ. ತಮ್ಮ ಎಂದರೆ ಅವರಿಗೆ ಬಲು ಅಕ್ಕರೆ. ಸೋದರನ ಪ್ರತಿ ಪ್ರಯತ್ನದ ಹಿಂದೆ ಅಕ್ಕ ಆಸರೆಯಾಗಿ ನಿಂತಿದ್ದಾರೆ. ಸೈನ್ಯ ಸೇರಿ ದೇಶ ಸೇವೆ ಮಾಡುತ್ತಿರುವುದಕ್ಕೆ ಅತೀವ ಸಂತಸವಿದೆ. ತನ್ನ ಪ್ರತಿ ಯಶಸ್ಸಿನ ಹಿಂದೆ ಅಕ್ಕನ ಹಾರೈಕೆ ಇದೆ ಎಂದು ಕ್ಯಾ.ಪ್ರಶಾಂತ್ ಸ್ಮರಿಸುತ್ತಾರೆ.
Click this button or press Ctrl+G to toggle between Kannada and English