ಪರಿಶಿಷ್ಟರ ಕುಂದುಕೊರತೆಗಳ ಅಹವಾಲು ಸ್ವೀಕಾರ

5:35 PM, Thursday, February 1st, 2018
Share
1 Star2 Stars3 Stars4 Stars5 Stars
(5 rating, 1 votes)
Loading...

belthangadyಬೆಳ್ತಂಗಡಿ : ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪ್ರಾದೇಶಿಕ ಕಚೇರಿ ಮಂಗಳೂರಿನ ಪೊಲೀಸ್‌ ಅಧೀಕ್ಷಕ ಸಿ.ಬಿ. ವೇದಮೂರ್ತಿ ಅವರು ಬುಧವಾರ ಬೆಳ್ತಂಗಡಿ ತಾಲೂಕು ಪ್ರವಾಸದಲ್ಲಿ ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರ ಕುಂದುಕೊರತೆಗಳ ಅಹವಾಲು ಸ್ವೀಕಾರ ನಡೆಸಿದರು.

ಕೊಯ್ಯೂರಿನ ಪಿಜಕ್ಕಳದ ಪಿಜಕ್ಕರೆ ಎಂಬ ಮಹಿಳೆ ಪಕ್ಕದ ಜಾಗದ ಚನನ ಗೌಡ ಅವರು ದೌರ್ಜನ್ಯ ನಡೆಸುತ್ತಿದ್ದಾರೆ, ಕೋವಿ ತೋರಿಸಿ ಬೆದರಿಕೆ ಹಾಕುತ್ತಿದ್ದಾರೆ, ಪೊಲೀಸರು ಬಂದರೂ ಪ್ರಯೋಜನವಾಗಿಲ್ಲ ಎಂದು ದೂರಿದರು. ಎಸ್‌ಐ ಅವರಿಗೆ ಈ ಕುರಿತು ತನಿಖೆ ನಡೆಸುವಂತೆ ಎಸ್‌ಪಿ ಸೂಚಿಸಿದರು.

ಉಜಿರೆ ಸಿದ್ಧವನ ಸಮೀಪ ನೇಮಣ್ಣ ನಾೖಕ ಅವರಿಗೆ ಪಂ. ಮೂಲಕ ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಕೆಗೆ ಪಕ್ಕದ ಜಾಗದವರು ತಕರಾರು ಮಾಡಿ ನೀರಿಗೆ ಅಡ್ಡಿ ಮಾಡುತ್ತಿದ್ದಾರೆ ಎಂಬ ದೂರು ಬಂದಾಗ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಮೂಲಕ ಉಜಿರೆ ಪಿಡಿಒ ಅವರನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.

ಕುಕ್ಕೇಡಿ ಪಂ.ನ ನಿಟ್ಟಡೆಯಲ್ಲಿ ಕಾರ್ತಿಕ್‌ ರಾಜ್‌ ಅವರಿಗೆ ಅಪ್ಪಿ ಎಂಬವರಿಂದ ದಾರಿ ಸಮಸ್ಯೆ ಇದೆ ಎಂದು ದೂರು ನೀಡಿದರು. ಕಡಿರುದ್ಯಾವರದ ಮಾದ ದೂರು ನೀಡಿದ್ದು, ಜಾಗದಲ್ಲಿ ಅಕ್ರಮವಾಗಿ ಮೆಸ್ಕಾಂ ಲೈನ್‌ ಅಳವಡಿಸಲಾಗಿದೆ ಎಂದರು. ಆದರೆ ಈಗಾಗಲೇ ಇದ್ದ ಕಂಬದಲ್ಲಿ ಎಲ್‌ಟಿ ಲೈನ್‌ ತೆಗೆದು ಅದೇ ಕಂಬದಲ್ಲಿ ಎಚ್‌ಟಿ ಲೈನ್‌ ಹಾಕಲಾಗಿದೆ ಎಂದು ಮೆಸ್ಕಾಂ ಹಾಗೂ ಪೊಲೀಸರು ಸ್ಪಷ್ಟನೆ ನೀಡಿದರು.

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಬಸವರಾಜ್‌ ಅಯ್ಯಣ್ಣನವರ್‌, ಉಪತಹಶೀಲ್ದಾರ್‌ ರಾಮಣ್ಣ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ತಿಲಕ್‌ ಪ್ರಸಾದ್‌, ತೋಟಗಾರಿಕೆ ಅಧಿಕಾರಿ ಶಿವಪ್ರಕಾಶ್‌, ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ| ರತ್ನಾಕರ ಮಲ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಪ್ರಿಯಾ ಆಗ್ನೆಸ್‌, ಮೆಸ್ಕಾಂ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಶಿವಶಂಕರ್‌, ಸಬ್‌ ಇನ್ಸ್‌ ಪೆಕ್ಟರ್‌ ರವಿ, ನಗರ ಪಂ. ಯೋಜನಾಧಿಕಾರಿ ವೆಂಕಟರಮಣ ಶರ್ಮ ಮೊದಲಾದವರಿದ್ದರು.

ಇದಕ್ಕೂ ಮುನ್ನ ವೇದಮೂರ್ತಿಅವರು ಚರ್ಚ್‌ ರೋಡ್‌ನ‌ಲ್ಲಿರುವ ಬಾಲಕಿಯರ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿದ್ಯಾರ್ಥಿಗಳ ಜತೆ ಮಾತುಕತೆ ನಡೆಸಿ ಸೌಲಭ್ಯಗಳ ಕುರಿತು ವಿಚಾರಿಸಿದರು. ಪಡಿತರದ ಲೆಕ್ಕಾಚಾರ ಸರಿಯಾಗಿ ನೋಡಿಕೊಳ್ಳುವಂತೆ ನಿರ್ದೇಶಿಸಿದರು.

ಪತ್ರಕರ್ತರೊಂದಿಗೆ ವೇದಮೂರ್ತಿ ಅವರು ಮಾತನಾಡಿ, ನಕಲಿ ಜಾತಿ ಪ್ರಮಾಣಪತ್ರ ಕೊಡುವ ಕಾರ್ಯ ಕೆಲವೆಡೆ ನಡೆದಿದ್ದು ಹೊರ ರಾಜ್ಯದವರಿಗೆ ಅನಧಿಕೃತವಾಗಿ, ಪರಿಶೀಲನೆ ನಡೆಸದೆ ಜಾತಿ ಪ್ರಮಾಣಪತ್ರ ನೀಡಿದ ಅಂತಹ ಕೆಲವು ಕಂದಾಯ ನಿರೀಕ್ಷಕರು ಹಾಗೂ ಗ್ರಾಮಕರಣಿಕರ ವಿರುದ್ಧ ಪ್ರಕರಣ ದಾಖಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮೀಸಲಾದ ಅನುದಾನ ಖರ್ಚಾಗದೇ ಉಳಿದಲ್ಲಿ, ದುರುಪಯೋಗವಾದಲ್ಲಿ ನಮ್ಮ ಇಲಾಖೆಯ ಗಮನಕ್ಕೆ ತಂದರೆ ಕ್ರಮ ವಹಿಸಲಾಗುತ್ತದೆ ಎಂದರು.

ಪರಿಶಿಷ್ಟ ಜಾತಿ, ಪಂಗಡದವರಿಗೆ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಹೋಗಲು ವೆಚ್ಚವನ್ನು ಇಲಾಖೆಯಿಂದ ಭರಿಸುವ ಕಾಯ್ದೆ ಇದ್ದರೂ ನೀಡಲಾಗುತ್ತಿಲ್ಲ ಎಂದು ಸಿ.ಕೆ. ಚಂದ್ರಕಲಾ ದೂರಿದರು. ನಗರ ಪಂ. ವತಿಯಿಂದ ನೀಡಲಾಗುತ್ತಿರುವ ಆರೋಗ್ಯ ವಿಮೆಯಲ್ಲಿ ಸೀಮಿತ ಆಸ್ಪತ್ರೆಗಳು ಇರುವ ಕಾರಣ ಎಲ್ಲ ಪರಿಶಿಷ್ಟರಿಗೆ ಅನುಕೂಲವಾಗುತ್ತಿಲ್ಲ. ಅನೇಕರಿಗೆ ವಿಮಾ ಹಣ ಬಂದಿಲ್ಲ ಎಂದು ದಲಿತ ಹೋರಾಟಗಾರ ಸಂಜೀವ ಆರ್‌. ಹೇಳಿದರು. ಈ ಬಗ್ಗೆ ಗಮನ ಹರಿಸುವಂತೆ ಎಸ್‌ಪಿ ಅವರು ನ.ಪಂ. ಅಧಿಕಾರಿಗೆ ಸೂಚಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English