ಮಂಗಳೂರು: ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಏನನ್ನೂ ನೀಡದೆ, ಕೃಷಿ ನೀರಾವರಿಯನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. 1 ಲಕ್ಷ ಕೋಟಿ ಉದ್ಯೋಗ ಸೃಷ್ಟಿಯ ಭಾರಿ ಹೇಳಿಕೆ, ಕೇವಲ ಹೇಳಿಕೆಗೆ ಸೀಮಿತವಾಗಿದೆ. ಯುವ ಜನತೆಯ ನಂಬಿಕೆಗೆ ದ್ರೋಹ ಬಗೆದ ಕೇಂದ್ರ ಸರ್ಕಾರದ ಬಜೆಟ್ ನಿರಾಶದಾಯಕ ಎಂದು ರಾಜ್ಯ ಮುಖ್ಯ ಸಚೇತಕ ಐವನ್ ಡಿಸೋಜಾ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಕೇಂದ್ರ ಸರ್ಕಾರವು ಮೀನುಗಾರಿಕೆ ಮತ್ತು ಮೀನು ಮಾರಾಟಗಾರರಿಗೆ ಕೇಂದ್ರದಲ್ಲಿ ಸಚಿವಾಲಯವೊಂದನ್ನು ಸ್ಥಾಪಿಸುವುದಾಗಿ ನೀಡಿದ್ದ ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ. ಅಲ್ಲದೆ ರೈತರಿಗೆ ಸಾಲ ಮನ್ನಾ ಮಾಡುವ ವಾಗ್ದಾನ ಕೂಡ ಈಡೇರಿಲ್ಲ. ರೈತರ ಬೆಳೆಗೆ ನಿಗದಿತ ಬೆಲೆ ನೀಡದೆ ರೈತರಾಧಾರಿತ ಯಾವುದೇ ಉದ್ದಿಮೆ ಸೃಷ್ಟಿಸದೆ ಅನ್ಯಾಯ ಮಾಡಲಾಗಿದೆ ಎಂದರು.
ಮಂಗಳೂರು ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ. ರಾಜ್ಯದ ಯಾವುದೇ ಹೆದ್ದಾರಿಯನ್ನು ಮೇಲ್ದರ್ಜೆಗೆ ಏರಿಸಲು ಪರಿಗಣಿಸಿಲ್ಲ. ಒಟ್ಟಿನಲ್ಲಿ ಇದು ಕೇಂದ್ರ ಸರ್ಕಾರದ ಯಾವುದೇ ಯೋಜನೆಯು ಪ್ರಯೋಜನದಾಯಕವಾಗದ ಬಜೆಟ್ ಎಂದಿದ್ದಾರೆ.
ಕೇಂದ್ರ ಸರ್ಕಾರ ಇಂದು ಮಂಡಿಸಿದ ಬಜೆಟ್ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಇನ್ನಷ್ಟು ದಾರಿ ಮಾಡಿದೆ ಎಂದು ಆಹಾರ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಸೂಟು ಬೂಟುಧಾರಿಗಳನ್ನು ಓಲೈಸಲು ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. ಬಂಡವಾಳಶಾಹಿಗಳಿಗೆ ತೆರಿಗೆ ವಿನಾಯಿತಿ ನೀಡಿ, ಜನಸಾಮಾನ್ಯರನ್ನು ವಂಚಿಸಲಾಗಿದೆ. ಯುವಜನಾಂಗ ಮತ್ತು ವಿದ್ಯಾರ್ಥಿಗಳ ಭವಿಷ್ಯಕ್ಕೆ ಆಶಾದಾಯಕ ಯಾವುದೇ ಯೋಜನೆಗಳಿಲ್ಲ ಎಂದು ಸಚಿವ ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಇಂದು ಮಂಡಿಸಿದ ಬಜೆಟ್ ಯುವಜನರ ಪಾಲಿಗೆ ನಿರಾಶಾದಾಯಕ. ಬಿಜೆಪಿಯ ಚುನಾವಣಾ ಪ್ರಣಾಳಿಕೆಯ ಪ್ರಕಾರ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯಾಗಬೇಕು. ಆದರೆ ನೋಟ್ ಬ್ಯಾನ್, ಜಿಎಸ್‌ಟಿಯಂತಹ ನೀತಿಗಳಿಂದ ಹೊಸ ಉದ್ಯೋಗಗಳ ಸೃಷ್ಟಿಯ ಬದಲಿಗೆ ಲಕ್ಷಗಟ್ಟಲೆ ಉದ್ಯೋಗ ನಷ್ಟಗೊಂಡಿದೆ. ಇಂತಹ ಸಂದರ್ಭದಲ್ಲಿ ಈ ಬಾರಿಯ ಬಜೆಟ್‌ನಲ್ಲಾದರೂ ಉದ್ಯೋಗ ಸೃಷ್ಟಿಯ, ಸ್ವ ಉದ್ಯೋಗದ ಯೋಜನೆಗಳನ್ನು ಸರ್ಕಾರ ಘೋಷಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ಯುವಜನರಿಗೆ ಮೋದಿ ಸರಕಾರ ಮಂಡಿಸಿದ ಬಜೆಟ್ ನಿರಾಶೆ ತಂದಿದೆ. ಅವರ ಭವಿಷ್ಯವನ್ನು ಕರಾಳಗೊಳಿಸಿದೆ.
ಉದ್ಯೋಗ ಸೃಷ್ಟಿಯ ಬದಲಿಗೆ ಕಾರ್ಪೋರೇಟ್ ಜಗತ್ತಿಗೆ ರಿಯಾಯತಿ ಮುಂದುವರೆಸಲಾಗಿದೆ. ಗ್ರಾಮೀಣ ಭಾಗಗಳಲ್ಲಿ ಉದ್ಯೋಗ ಸೃಷ್ಟಿಸುವ ಕೃಷಿಯನ್ನು ಕಡೆಗಣಿಸಿದೆ. ಸಣ್ಣ ಕೈಗಾರಿಕೆ, ಉದ್ಯಮಗಳ ಉಸಿರುಗಟ್ಟಿಸುವ ನೀತಿ ಮುಂದುವರೆದಿದೆ. ಒಟ್ಟಾರೆ ದೇಶದ ದುಡಿಯುವ ಜನಗಳ, ಯುವಜನರ ಪಾಲಿಗೆ ಬಜೆಟ್ ಆತಂಕಕಾರಿಯಾಗಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ರೈತರ ಪರವಾದ ಬಜೆಟ್ ಮಂಡಿಸಿದೆ. ಕೃಷಿ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಿರುವ ಬಜೆಟ್. ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಮೂಲಕ ರೈತರ ಆದಾಯ ಹೆಚ್ಚಳಕ್ಕೆ ಅನುಕೂಲಗಳನ್ನು ಕಲ್ಪಿಸಿದೆ. ರೈತರ ಕಿಸಾನ್ ಕಾರ್ಡ್ ಮೀನುಗಾರರಿಗೂ ವಿಸ್ತರಣೆ. ರೈತ ಮಾರುಕಟ್ಟೆ ಸರಳ ಸಂಪರ್ಕ ಯೋಜನೆ, ಕೃಷಿ ವಸ್ತು ರಫ್ತು ಮೇಲಿನ ನಿರ್ಬಂಧ ತೆರವು, ಕೃಷಿಗಾಗಿಯೇ ಒಂದು ಲಕ್ಷ ಕೋಟಿ ಸಾಲ ನೀಡುವ ಗುರಿ ರೈತರ ಅಭಿವೃದ್ಧಿಗೆ ಪೂರಕವಾಗಿದೆ. 10 ಕೋಟಿ ಬಡ ಕುಟುಂಬಗಳಿಗೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆಗೆ ಆರೋಗ್ಯ ವಿಮೆ ನೀಡುವುದು ಐತಿಹಾಸಿಕ ಕ್ರಮ ಎಂದು ಸಂಸದ ನಳಿನ್ ಕುಮಾರ್ ಹೇಳಿದ್ದಾರೆ.
Click this button or press Ctrl+G to toggle between Kannada and English