ಪೊಲೀಸ್‌ ಫೋನ್‌ ಇನ್‌ ಕಾರ್ಯಕ್ರಮ

6:09 PM, Saturday, February 3rd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

police-sureshಮಂಗಳೂರು: ಆಟೋ ರಿಕ್ಷಾ ಚಾಲಕರು ಸಾರ್ವಜನಿಕರು ಕರೆದಲ್ಲಿಗೆ ಬಾಡಿಗೆಗೆ ಹೋಗದ ಬಗ್ಗೆ ಹಾಗೂ ಅಧಿಕ ಬಾಡಿಗೆ ದರ ವಸೂಲಿ ಮಾಡುತ್ತಿರುವ ಬಗ್ಗೆ ಶುಕ್ರವಾರ ನಡೆದ ಪೊಲೀಸ್‌ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ದೂರುಗಳು ಬಂದಿದ್ದು, ಇಂತಹ ನಿರ್ದಿಷ್ಟ ಪ್ರಕರಣಗಳ ಕುರಿತು ರಿಕ್ಷಾದ ನಂಬರ್‌ ದಾಖಲಿಸಿ, ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ (ನಂ. 100) ಕರೆ ಮಾಡಿ ತಿಳಿಸಿದರೆ ಅಂತಹ ಚಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ತಿಳಿಸಿದರು.

ನಗರದಲ್ಲಿ ಇರುವ ರಿಕ್ಷಾ ತಂಗುದಾಣಗಳು, ಅವುಗಳಲ್ಲಿ ಎಷ್ಟು ಆಟೋಗಳಿಗೆ ಪಾರ್ಕಿಂಗ್‌ ಮಾಡಲು ಅವಕಾಶವಿದೆ, ಎಷ್ಟು ಅಧಿಕೃತ ಹಾಗೂ ಅನಧಿಕೃತ ರಿಕ್ಷಾಗಳಿವೆ ಎನ್ನುವುದರ ಬಗ್ಗೆ ಟ್ರಾಫಿಕ್‌ ಪೊಲೀಸರು ಮನಪಾ ಅಧಿಕಾರಿಗಳ ಜತೆಗೂಡಿ ಪಟ್ಟಿ ತಯಾರಿಸಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದರು.

ಬಂದರ್‌ನಿಂದ ಮಂಗಳಾದೇವಿ ಮೂಲಕ ಬೆಳಗ್ಗಿನ ಜಾವ ಮೀನು ಹೇರಿಕೊಂಡು ಹೋಗುವ ಲಾರಿಗಳು ಕಡಿಮೆಯಾಗಿವೆ. ಆದರೆ ಟೆಂಪೋಗಳಲ್ಲಿ ಸಾಗಾಟ ಮಾಡಲಾಗುತ್ತಿದೆ. ಪೊಲೀಸರು ಇರುವಾಗ ಬರುವುದಿಲ್ಲ. ಸಿಸಿ ಕೆಮರಾ ದೃಶ್ಯಗಳನ್ನು ಪರಿಶೀಲಿಸಿ ಪ್ರಕರಣ ದಾಖಲಿಸಬೇಕು ಎಂದು ಸಾರ್ವಜನಿಕರೊಬ್ಬರು ಒತ್ತಾಯಿಸಿದರು.

ಫೋರಂ ಪಿಝಾ ಮಾಲ್‌ ಬಳಿ ಫ‌ುಟ್‌ಪಾತ್‌ನಲ್ಲಿ ಹೂ ಕುಂಡಗಳನ್ನು ಇಟ್ಟಿದ್ದು, ಪಾದಚಾರಿಗಳಿಗೆ ತೊಂದರೆ ಯಾಗುತ್ತಿದೆ. ಆದಷ್ಟು ಶೀಘ್ರ ತೆರವು ಮಾಡಬೇಕು ಎಂದು ಮಹಿಳೆಯೊಬ್ಬರು ಆಗ್ರಹಿಸಿದರು. ಈ ಬಗ್ಗೆ ತತ್‌ಕ್ಷಣ ಪರಿಶೀಲನೆ ನಡೆಸುವಂತೆ ಆಯುಕ್ತರು ಟ್ರಾಫಿಕ್‌ ಎಸಿಪಿ ಮಂಜುನಾಥ ಶೆಟ್ಟಿ ಅವರಿಗೆ ಸೂಚಿಸಿದರು.

ಮಂಗಳೂರು- ಕೊಲ್ಲೂರು ಮಧ್ಯೆ ಸಂಚರಿಸುವ ಎ.ಕೆ.ಎಂ.ಎಸ್‌. ಮತ್ತು ಮೂಕಾಂಬಿಕಾ ಖಾಸಗಿ ಎಕ್ಸ್‌ ಪ್ರಸ್‌ ಬಸ್‌ಗಳು ಸುರತ್ಕಲ್‌ನಲ್ಲಿ ನಿಲುತ್ತಿಲ್ಲ ಎಂದು ಮಹಿಳೆಯೊಬ್ಬರು ದೂರಿದರು. ಯಾವ ಬಸ್‌ಗಳು ನಿಲುಗಡೆಯಾಗುತ್ತಿಲ್ಲ ಎನ್ನುವುದನ್ನು ನಿರ್ದಿಷ್ಟವಾಗಿ ತಿಳಿಸುವಂತೆ ಆಯುಕ್ತರು ಸೂಚಿಸಿದರು. ನಿಯಮ ಪ್ರಕಾರ ಸುರತ್ಕಲ್‌ನಲ್ಲಿ ಬಸ್‌ ನಿಲುಗಡೆಗೆ ಅವಕಾಶವಿಲ್ಲ. ಆದರೆ ಹೆಚ್ಚಿನ ಬಸ್‌ ಗಳು ನಿಲುಗಡೆಯಾಗುತ್ತಿವೆ ಎಂದು ಕೆನರಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌ ಹೇಳಿದರು.

ಕಾಸರಗೋಡಿನ ವ್ಯಕ್ತಿಯೊಬ್ಬರು ಪೋನ್‌ ಮಾಡಿ ‘ನನ್ನ ವಿರುದ್ಧ ಮಂಗಳೂರಿನ ಬಂದರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕೇಸು ದಾಖಲಾಗಿದ್ದು, ಈಗ ಕಾಸರಗೋಡಿನಲ್ಲಿ ವಾಸ್ತವ್ಯ ಮಾಡುತ್ತಿದ್ದೇನೆ. ನನ್ನ ಹೆಸರು ರೌಡಿ ಲಿಸ್ಟ್‌ನಲ್ಲಿದ್ದು, ನಾನು ಪೊಲೀಸರು ಕರೆದಾಗಲೆಲ್ಲ ಠಾಣೆಗೆ ಹಾಜರಾಗುತ್ತಿದ್ದೇನೆ; ಆದ್ದರಿಂದ ನನ್ನ ಹೆಸರನ್ನು ರೌಡಿ ಲಿಸ್ಟ್‌ನಿಂದ ತೆಗೆದು ಹಾಕಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಪೊಲೀಸ್‌ ಆಯುಕ್ತರು, ರೌಡಿ ಲಿಸ್ಟ್‌ನಲ್ಲಿ ಒಂದು ಬಾರಿ ಹೆಸರು ಸೇರ್ಪಡೆಗೊಂಡರೆ ಬಳಿಕ ಅವರ ಹೆಸರನ್ನು ಅಳಿಸಿ ಹಾಕುವುದು ಆರೋಪಿಯ ನಡತೆಯನ್ನು ಅವಲಂಬಿಸಿರುತ್ತದೆ. ಪೊಲೀಸರು ಆರೋಪಿಯ ನಡತೆಯನ್ನು ಸತತವಾಗಿ ಪರಿಶೀಲಿಸುತ್ತಾರೆ ಹಾಗೂ ಹೆಸರನ್ನು ಅಳಿಸಿ ಹಾಕಬೇಕೇ ಬೇಡವೇ ಎಂಬುದನ್ನು ತೀರ್ಮಾನಿಸುತ್ತಾರೆ ಎಂದರು. ನಗರದ ಅತ್ರೆಬೈಲ್‌ಗೆ ಬಸ್‌ ಬರುತ್ತಿಲ್ಲ ಎಂದು ಸ್ಥಳೀಯರು ಇಂದಿನ ಫೋನ್‌ ಇನ್‌ ಕಾರ್ಯಕ್ರಮದಲ್ಲಿಯೂ ದೂರು ನೀಡಿದರು. ಇದಕ್ಕೆ ಉತ್ತರಿಸಿದ ಪೊಲೀಸ್‌ ಆಯುಕ್ತರು ಸಾರ್ವಜನಿಕರ ಬೇಡಿಕೆ ಇರುವುದರಿಂದ ಅತ್ರೆಬೈಲ್‌ ಗೆ ತಾತ್ಕಾಲಿಕ ಪರವಾನಿಗೆ ಆಧಾರದಲ್ಲಿ ಸರಕಾರಿ ಬಸ್‌ ಓಡಿಸುವಂತೆ ಕೆ.ಎಸ್‌. ಆರ್‌.ಟಿ.ಸಿ. ಅಧಿಕಾರಿಗಳಿಗೆ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದರು.

ಅತ್ರೆಬೈಲ್‌ಗೆ ಬಸ್‌ ಓಡಿಸಲು ಪರವಾನಿಗೆ ಇದ್ದರೂ ಬಸ್‌ ಮಾಲಕರು ಬಸ್‌ಗಳನ್ನು ಅಲ್ಲಿ ತನಕ ಓಡಿಸುತ್ತಿಲ್ಲ; ಕುಂಜತ್ತಬೈಲ್‌ನಿಂದಲೇ ಬಸ್‌ಗಳು ವಾಪಸಾಗುತ್ತಿವೆ. ಇದರಿಂದ ತಮಗೆ ಸಮಸ್ಯೆಯಾಗಿದೆ ಎಂದು ಅತ್ರೆಬೈಲ್‌ನ ಸಾರ್ವಜನಿಕರು ಕಳೆದ ಎರಡು ಫೋನ್‌ ಇನ್‌ ಕಾರ್ಯಕ್ರಮಗಳಲ್ಲಿ ದೂರು ನೀಡಿದ್ದರು. ಅತ್ರೆಬೈಲ್‌ಗೆ ಪರವಾನಿಗೆ ಹೊಂದಿರುವ ಬಸ್‌ ಮಾಲಕರ ಸಭೆಯನ್ನು ಕರೆದು ಚರ್ಚಿಸಲಾಗಿತ್ತು. ಅತ್ರೆಬೈಲ್‌ಗೆ ಬಸ್‌ ಓಡಿಸುವುದಾಗಿ ಎಲ್ಲ ಬಸ್‌ ಮಾಲಕರು ಸಭೆಯಲ್ಲಿ ಒಪ್ಪಿಗೆ ಸೂಚಿಸಿದ್ದರು. ಈಗ ಮತ್ತೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಆದ್ದರಿಂದ ಸರಕಾರಿ ಬಸ್‌ಗೆ ತಾತ್ಕಾಲಿಕ ಪರ್ಮಿಟ್‌ ನೀಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತಿದೆ ಎಂದು ಪೊಲೀಸ್‌ ಆಯುಕ್ತರು ವಿವರಿಸಿದರು.

ಇದು 69ನೇ ಫೋನ್‌ ಇನ್‌ ಕಾರ್ಯಕ್ರಮವಾಗಿದ್ದು, ಒಟ್ಟು 30 ಕರೆಗಳು ಬಂದವು. ಡಿಸಿಪಿ ಉಮಾ ಪ್ರಶಾಂತ್‌, ಎಸಿಪಿಗಳಾದ ವೆಲೆಂಟೈನ್‌ ಡಿ’ಸೋಜಾ ಮತ್ತು ಮಂಜುನಾಥ ಶೆಟ್ಟಿ ಟ್ರಾಫಿಕ್‌ ಪಿಸ್‌ಐ ಎ.ಎ. ಅಮಾನುಲ್ಲಾ, ಎಎಸ್‌ಐ ಯೂಸುಫ್‌, ಹೆಡ್‌ಕಾನ್ಸ್‌ ಟೆಬಲ್‌ ಪುರುಷೋತ್ತಮ, ಕೆನರಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌ ಅವರು ಉಪಸ್ಥಿತರಿದ್ದರು.

ಹಿರಿಯ ನಾಗರಿಕರಿಗೆ ಮತ್ತು ಮಹಿಳೆಯರಿಗೆ ಕೆಲವು ಬಸ್‌ಗಳಲ್ಲಿ ಮೀಸಲು ಸೀಟುಗಳನ್ನು ಇತರ ಪ್ರಯಾಣಿಕರು ಬಿಟ್ಟು ಕೊಡುತ್ತಿಲ್ಲ ಎಂಬ ದೂರಿಗೆ ಸ್ಪಂದಿಸಿದ ಪೊಲೀಸ್‌ ಆಯುಕ್ತರು ಈ ಬಗ್ಗೆ ಎಲ್ಲ ಬಸ್‌ ಕಂಡಕ್ಟರ್‌ಗಳಿಗೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದರು. ಕೆಲವು ಖಾಸಗಿ ಬಸ್‌ಗಳ ಚಾಲಕರು ಮತ್ತು ನಿರ್ವಾಹಕರು ಸಮವಸ್ತ್ರ ಧರಿಸದೆ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದರು.

ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಕೆಲಸ ಮಾಡುವವರಿಗೆ ಒಂದು ನಿಯಮ ಬೇಕು. ಆದ್ದರಿಂದ ಬಸ್‌ ನಿರ್ವಾಹಕರಿಗೆ ಸಮವಸ್ತ್ರ ಮತ್ತು ನೇಮ್‌ ಪ್ಲೇಟ್‌ ಧರಿಸುವುದನ್ನು ಕಡ್ಡಾಯಗೊಳಿಸಬೇಕು ಎಂದವರು ಸಲಹೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್‌ ಆಯುಕ್ತರು ಈ ಕುರಿತಂತೆ ವಿಶೇಷ ಕಾರ್ಯಾಚರಣೆ ನಡೆಸಿ ಬಸ್‌ ಸಿಬಂದಿ ಕಾರ್ಯವೈಖರಿಯನ್ನು ತಪಾಸಣೆಗೆ ಒಳಪಡಿಸಲಾಗುವುದು ಎಂದು ತಿಳಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English