ರಾಜ್ಯದಲ್ಲಿ ಮಾಫಿಯಾಗಳ ನಂಗಾನಾಚ್‌

1:52 PM, Monday, February 5th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

karnatakaಬೆಂಗಳೂರು: ಕರ್ನಾಟಕದಲ್ಲಿ ಆಡಳಿತದಲ್ಲಿರುವುದು 10 ಪರ್ಸೆಂಟ್‌ ಕಮಿಷನ್‌ ಸರ್ಕಾರವಾಗಿದ್ದು ಇದರ ಪತನಕ್ಕೆ ಕೌಂಟ್‌ಡೌನ್‌ ಶುರುವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಎಲ್ಲಾ ದಿಕ್ಕುಗಳಿಂದಲೂ ವಾಗ್ಧಾಳಿ ನಡೆಸಿದ್ದಾರೆ.

ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಬಿಜೆಪಿಯ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್‌ ಸರ್ಕಾರದಲ್ಲಿ ಎಲ್ಲವೂ ಕಮಿಷನ್‌ ಆಧಾರದ ಮೇಲೆಯೇ ನಡೆಯುತ್ತದೆ. 10 ಪರ್ಸೆಂಟ್‌ ಇಲ್ಲದೆ ಯಾವುದೇ ಕೆಲಸ ಆಗುವುದಿಲ್ಲ ಮತ್ತು ಆಗಲು ಬಿಡುವುದಿಲ್ಲ. ಇಂತಹ 10 ಪರ್ಸೆಂಟ್‌ ಸರ್ಕಾರ ಅಧಿಕಾರದಲ್ಲಿದ್ದರೆ ಜನ

ಇದೇ ವೇಳೆ ಕರ್ನಾಟಕವನ್ನು ಕಾಂಗ್ರೆಸ್‌ ಮುಕ್ತ ಮಾಡಿಯೇ ತೀರುತ್ತೇವೆ. ಕಾಂಗ್ರೆಸ್‌ ಮುಕ್ತ ಎಂದರೆ ಸಾರ್ವಜನಿಕ ಜೀವನ, ಆಡಳಿತದಲ್ಲಿ ಕಾಂಗ್ರೆಸ್‌ ಸಂಸ್ಕೃತಿ ಮುಕ್ತ ರಾಜ್ಯವಾಗಿ ಮಾಡುತ್ತೇವೆ ಎಂದು ಘೋಷಿಸಿದರು.ನಾಲ್ಕೂ ಕಡೆ ನೋಡುತ್ತಿದ್ದೇನೆ. ಈ ಹಿಂದೆ ಕರ್ನಾಟಕಕ್ಕೆ ಬಂದಿದ್ದರೂ ಇಂತಹ ದೃಶ್ಯ ನೋಡುವ ಭಾಗ್ಯ ಸಿಕ್ಕಿರಲಿಲ್ಲ. ನಿಮ್ಮ ಧ್ವನಿಯ ಶಕ್ತಿ ಏನು ಎಂಬುದು ಗೊತ್ತಾಗಿದೆ. ಬೆಂಗಳೂರಿನಲ್ಲಿ ಕರ್ನಾಟಕದ ಗೌರವದ ಉತ್ಸವ ನಡೆಯುತ್ತಿದೆ. ಇಲ್ಲಿ ಸೇರಿರುವ ಜನ ಸಾಗರ, ಎಲ್ಲಾ ಕಡೆ ಕಾಣಿಸುತ್ತಿರುವ ಕೇಸರಿ ಧ್ವಜವನ್ನು ಗಮನಿಸಿದಾಗ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ತೊಲಗುವ ಕೌಂಟ್‌ಡೌನ್‌ ಶುರುವಾಗಿದೆ ಎಂಬುದು ಸ್ಪಷ್ಟವಾಗಿದೆ. ದೇಶದಲ್ಲಿ ಬಂದ ಸ್ಥಿತಿಯೇ ಕರ್ನಾಕದಲ್ಲೂ ಕಾಂಗ್ರೆಸ್‌ಗೆ ಬರಲಿದೆ ಎಂದು ಹೇಳಿದರು.

ಶೋಷಿತರು, ಬಡವರು, ಮಧ್ಯಮ ವರ್ಗದವರು, ಉದ್ಯಮಿಗಳು ಸೇರಿದಂತೆ ಎಲ್ಲಾ ವರ್ಗಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಾಕಷ್ಟು ಅನುದಾನ ಕೊಡುತ್ತಿದ್ದರೂ ರಾಜ್ಯದ ಕಾಂಗ್ರೆಸ್‌ ಸರ್ಕಾರ ಅದನ್ನು ಜನರಿಗೆ ಸರಿಯಾಗಿ ತಲುಪಿಸುತ್ತಿಲ್ಲ. ಅದರ ಬದಲು ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದಂತೆ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದ್ದರೆ ರಾಜ್ಯದ ಅಭಿವೃದ್ಧಿ ಹೊಸ ಶಖೆಯತ್ತ ಸಾಗುತ್ತದೆ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನ ಬಿಜೆಪಿಯನ್ನು ಆರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ ಇಬ್ಬರು ಸಂಪುಟ ಸಚಿವರು, ಮತ್ತು ಒಬ್ಬ ನಾಯಕ ಮೇಲೆ ದಾಳಿ ನಡೆದಿದೆ. ಪ್ರತಿ ಮುಖಂಡನ ಮೇಲೆ ಭ್ರಷ್ಟಾಚಾರ, ಅಕ್ರಮ ಆಸ್ತಿಯ ಆರೋಪವಿದೆ. ಒಟ್ಟಾರೆ ರಾಜ್ಯದಲ್ಲಿ ಬಿಲ್ಡರ್‌ ಮಾಫಿಯಾ, ಟ್ರಾನ್ಸ್‌ಫ‌ರ್‌ ಮಾಫಿಯಾ, ಮರಳು ಮಾಫಿಯಾ ಮುಂತಾದ ಮಾಫಿಯಾಗಳ ನಂಗಾನಾಚ್‌ ನಡೆಯುತ್ತಿದೆ ಎಂದು ಹೇಳಿದ ಅವರು, ಬೆಂಗಳೂರಿನಲ್ಲಿ ಸ್ಟೀಲ್‌ ಬ್ರಿಡ್ಜ್ ಹೆಸರಲ್ಲಿ ಕಾಂಗ್ರೆಸ್‌ನವರು ಕೋಟ್ಯಂತರ ರೂ. ಲೂಟಿ ಮಾಡಲು ಮುಂದಾದರು ಆದರೆ, ಜನ ಅದಕ್ಕೆ ಅವಕಾಶ ನೀಡಲಿಲ್ಲ ಎಂದರು.

ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ಅದರಿಂದ ರಾಜ್ಯಕ್ಕೆ ಆದ ಅನುಕೂಲಗಳ ಬಗ್ಗೆ ವಿವರಿಸಿದ ಅವರು, ಜನಧನ ಯೋಜನೆಯಡಿ ಕರ್ನಾಟಕದಲ್ಲಿ 1.16 ಕೋಟಿ ಮಂದಿಗೆ ಹೊಸದಾಗಿ ಬ್ಯಾಂಕ್‌ ಖಾತೆ ಮಾಡಿಕೊಡಲಾಗಿದೆ. ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಒಂದು ಕೋಟಿ ಮಂದಿಗೆ ಸಾಲ ಒದಗಿಸಲಾಗಿದೆ. ವಿಮೆ ಯೋಜನೆಯಡಿ ರಾಜ್ಯದ ಒಂದು ಕೋಟಿ ಬಡವರು ಮತ್ತು ಕೆಳ ಮಧ್ಯಮವರ್ಗದವರನ್ನು ಜೋಡಿಸಲಾಗಿದೆ. ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ 8.5 ಲಕ್ಷ ಮಹಿಳೆಯರಿಗೆ ಉಚಿತ ಗ್ಯಾಸ್‌ ಸಂಪರ್ಕ ಕಲ್ಪಿಸಲಾಗಿದೆ. ಸ್ವತ್ಛ ಭಾರತ ಯೋಜನೆಯಡಿ 40 ಲಕ್ಷ ಶೌಚಾಲಯ ಒದಗಿಸಲಾಗಿದೆ. ಮಿಷನ್‌ ಇಂದ್ರಧನುಷ್‌ ಮೂಲಕ ರಾಜ್ಯದ ಬಡ 9 ಲಕ್ಷ ಮಕ್ಕಳು, ಒಂದೂವರೆ ಲಕ್ಷ ಮಹಿಳೆಯರಿಗೆ ಆರೋಗ್ಯ ಸೌಲಭ್ಯ ಒದಗಿಸಲಾಗಿದೆ. ಎಲ್ಲಾ ಮನೆಗಳಿಗೂ ವಿದ್ಯುತ್‌ ಸಂಪರ್ಕ ಕಲ್ಪಿಸುವ ಸೌಭಾಗ್ಯ ಯೋಜನೆಯಡಿ 7 ಲಕ್ಷ ಮನೆಗಳಿಗೆ ಉಚಿತ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ ಎಂದು ಹೇಳಿದರು.

ರಸ್ತೆ, ರೈಲ್ವೆ, ವೈಮಾನಿಕ ಕ್ಷೇತ್ರಗಳಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಸಿಕ್ಕಿದ ಸೌಲಭ್ಯಗಳ ಬಗ್ಗೆಯೂ ಸವಿಸ್ತಾರವಾಗಿ ವಿವರಿಸಿದ ಅವರು, ನನ್ನದೊಂದು ಕನಸಿದೆ. ಹವಾಯಿ ಚಪ್ಪಲಿ ಧರಿಸಿದವರೂ ವಿಮಾನದಲ್ಲಿ ಓಡಾಡಬೇಕು ಎಂಬುದು. ಆ ನಿಟ್ಟಿನಲ್ಲಿ 66 ಹೊಸ ವಿಮಾನ ನಿಲ್ದಾಣಗಳ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದರು.

ತಮ್ಮ ಭಾಷಣದಲ್ಲಿ ರೈತರ ಅಭಿವೃದ್ಧಿ ಮತ್ತು ಗ್ರಾಮೀಣ ಕ್ಷೇತ್ರಗಳ ಪ್ರಗತಿ ಬಗ್ಗೆ ಹೆಚ್ಚು ಆದ್ಯತೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಿಫಾರ್ಮ್, ಪರ್‌ಫಾರ್ಮ್ ಮತ್ತು ಟ್ರಾನ್ಸ್‌ಫಾರ್ಮ್ ನೀತಿಯಡಿ ಕೆಲಸ ಮಾಡುತ್ತಿದೆ. ಅತಿ ಸಣ್ಣ ವಿಷಯಗಳನ್ನೂ ಪರಿಗಣಿಸಿ ಆದ್ಯತೆ ನೀಡಲಾಗುತ್ತಿದೆ. ಇದರ ಪರಿಣಾಮ ಹಿಂದಿನ ಯಾವುದೇ ಸರ್ಕಾರಗಳು ರೈತರು ಮತ್ತು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಮಾಡಲಾಗದ ಕೆಲಸವನ್ನು ನಮ್ಮ ಸರ್ಕಾರ ಮಾಡುವಂತಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿಯಾದರೆ ಒಂದು ಲಕ್ಷ ಕೋಟಿ ರೂ. ನಿಗದಿಪಡಿಸಿ ರಾಜ್ಯದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇನೆ ಎಂದು ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಹೀಗಿರುವಾಗ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಣ್ಣು ನಂಬಿಕೊಂಡಿರುವ ರಾಜ್ಯದ ರೈತರು ಯಾವ ರೀತಿ ಅಭಿವೃದ್ಧಿ ಹೊಂದಬಹುದು ಎಂಬುದನ್ನು ಊಹಿಸಿ ಎಂದು ಹೇಳಿದರು.

ಇದುವರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಕೇಂದ್ರದಿಂದ ರಾಜ್ಯಕ್ಕೆ ನೀಡಿದ ಅನುದಾನದ ಲೆಕ್ಕ ಕೇಳಿದರೆ, ಈ ಬಾರಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಕೇಂದ್ರದಿಂದ ರಾಜ್ಯಕ್ಕೆ ಬಂದ ಅನುದಾನ ಮತ್ತು ಅದರಲ್ಲಿ ಖರ್ಚಾಗಿರುವ ಮೊತ್ತದ ಬಗ್ಗೆ ಮಾಹಿತಿ ನೀಡಿ, ಈ ಬಗ್ಗೆ ರಾಜ್ಯದ ಜನರಿಗೆ ಲೆಕ್ಕ ನೀಡುವಂತೆ ರಾಜ್ಯದ ಕಾಂಗ್ರೆಸ್‌ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ತಮ್ಮ ಭಾಷಣದಲ್ಲಿ ಎಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಪ್ರಸ್ತಾಪಿಸದೆ ಕಾಂಗ್ರೆಸ್‌ ಸರ್ಕಾರ ಎಂದಷ್ಟೇ ಹೇಳಿದ ಪ್ರಧಾನಿ, ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದಾಗ ಕರ್ನಾಟಕಕ್ಕೆ 73000 ಕೋಟಿ ರೂ. ಬಂದಿತ್ತು. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 14ನೇ ಹಣಕಾಸು ಯೋಜನೆಯಡಿ 2 ಲಕ್ಷ ಕೋಟಿ ರೂ. ಲಭ್ಯವಾಗುತ್ತಿದೆ. ಅದರ ಜತೆಗೆ ವಿವಿಧ ಯೋಜನೆಗಳಿಗೆ ಹೆಚ್ಚುವರಿಯಾಗಿ 40 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಅನುದಾನ ಕೇಂದ್ರದಿಂದ ಬಂದಿದೆ. ಈ ಎಲ್ಲಾ ಹಣವನ್ನು ಸರ್ಕಾರ ಸದ್ವಿನಿಯೋಗ ಮಾಡಿದ್ದರೆ ಕರ್ನಾಟಕ ಇನ್ನೂ ಈ ಪರಿಸ್ಥಿತಿಯಲ್ಲಿ ಇರುತ್ತಿತ್ತೇ ಎಂದು ಪ್ರಶ್ನಿಸಿದರು.

2022ರ ವೇಳೆಗೆ ದೇಶದ ಪ್ರತಿ ಬಡವನಿಗೂ ಸೂರು ಒದಗಿಸಲು ಪ್ರಧಾನಮಂತ್ರಿ ಆವಾಸ್‌ ಯೋಜನೆ ರೂಪಿಸಿ ರಾಜ್ಯಕ್ಕೆ 3.36 ಲಕ್ಷ ಮನೆ ಮಂಜೂರು ಮಾಡಲಾಗಿದೆ. ಆದರೆ, ರಾಜ್ಯದಲ್ಲಿ 38 ಸಾವಿರ ಮನೆ ಮಾತ್ರ ನಿರ್ಮಾಣವಾಗಿದ್ದು, ಉಳಿದ ಮನೆಗಳ ಕಾಮಗಾರಿ ಶುರುವಾಗಿಲ್ಲ. ಸ್ವತ್ಛ ಭಾರತ್‌ ಯೋಜನೆಯಡಿ 3.5 ಲಕ್ಷ ಶೌಚಾಲಯ ಕೊಟ್ಟಿದ್ದರೆ, 1.32 ಲಕ್ಷ ಶೌಚಾಲಯಗಳಷ್ಟೇ ನಿರ್ಮಾಣವಾಗಿದೆ. ಸ್ವತ್ಛ ಭಾರತ ಮಿಷನ್‌ನಡಿ 247 ಕೋಟಿ ರೂ. ನೀಡಿದ್ದರೆ, 70 ಕೋಟಿ ರೂ. ಕೂಡ ಇನ್ನೂ ಖರ್ಚಾಗಿಲ್ಲ. ಸ್ಮಾರ್ಟ್‌ ಸಿಟಿ ಮಿಷನ್‌ನಡಿ 836 ಕೋಟಿ ರೂ. ಕೊಟ್ಟಿದ್ದರೆ, 143 ಕೋಟಿ ರೂ.ನ ಕೆಲಸ ಇನ್ನೂ ಆರಂಭವಾಗಿಲ್ಲ. 309 ಕೋಟಿ ರೂ. ರಾಜ್ಯ ಸರ್ಕಾರದ ಖಜಾನೆಯಲ್ಲಿ ಉಳಿದಿದೆ. ಪ್ರಧಾನಮಂತ್ರಿ ಮಾತೃವಂದನ ಯೋಜನೆಯಡಿ 100 ಕೋಟಿ ರೂ. ಖರ್ಚು ಮಾಡಿಲ್ಲ. ದಕ್ಷಿಣ ಭಾರತದಲ್ಲಿ ಕೇಂದ್ರದ ಅನುದಾನವನ್ನು ಅತಿ ಕಡಿಮೆ ಖರ್ಚು ಮಾಡಿದ್ದು ರಾಜ್ಯದ ಕಾಂಗ್ರೆಸ್‌ ಸರ್ಕಾರ. ಈ ಬಗ್ಗೆ ಸರ್ಕಾರ ರಾಜ್ಯದ ಜನತೆಗೆ ಲೆಕ್ಕ ಕೊಡಬೇಕು ಎಂದು ಹೇಳಿದರು.

ಕರ್ನಾಟಕ, ಅದರಲ್ಲೂ ಬೆಂಗಳೂರಿನಲ್ಲಿ ಕಾನೂನಿಗಿಂತ ಅಪರಾಧ ಪ್ರಕರಣಗಳೇ ಹೆಚ್ಚು ಕಾಣುತ್ತಿವೆ. ಹೀಗಿರುವಾಗ ಜನಸಾಮಾನ್ಯರು ಸುರಕ್ಷಿತವಾಗಿರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಇಡೀ ವಿಶ್ವದಲ್ಲಿ ಕೇಂದ್ರದ ಈಸೀ ಆಫ್ ಡೂಯಿಂಗ್‌ ಚರ್ಚೆ ನಡೆಯುತ್ತಿದ್ದರೆ, ರಾಜ್ಯ ಸರ್ಕಾರ ಮಾತ್ರ ಈಸೀ ಆಫ್ ಡೂಯಿಂಗ್‌ ಮರ್ಡರ್‌ ಬಗ್ಗೆ ಚರ್ಚೆ ಮಾಡುತ್ತಿದೆ. ಅದನ್ನು ವಿರೋಧಿಸುವವರನ್ನು ಕೊಲ್ಲುವ ಕೆಲಸ ಆಗುತ್ತಿದೆ. ಇದೇ ರೀತಿ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯಾಗುತ್ತಿದ್ದು, ಇದು ಪ್ರಜಾತಂತ್ರಕ್ಕೆ ಅಪಾಯಕಾರಿ ಎಂದರು.

ಕೇಂದ್ರದ ಬಿಜೆಪಿ ಸರ್ಕಾರ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಪ್ರಯತ್ನಿಸಿದರೆ ರಾಜ್ಯದ ಕಾಂಗ್ರೆಸ್‌ ಸರ್ಕಾರ ರಾಜ್ಯವನ್ನು ಅವನತಿಯತ್ತ ಕೊಂಡೊಯ್ಯುತ್ತಿದೆ. ಆದ್ದರಿಂದ ರಾಜ್ಯ ಅಭಿವೃದ್ಧಿಯಾಗಲು ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English