ರಸ್ತೆ ಸುರಕ್ಷಾ ಪ್ರಾಧಿಕಾರದ ಕಟ್ಟುನಿಟ್ಟಿನ ಕ್ರಮ

11:59 AM, Wednesday, February 7th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

traffic-policeಮಂಗಳೂರು: ವಾಹನ ಚಾಲನೆ ಮಾಡುವಾಗ ರಸ್ತೆ ಅಪಘಾತ ತಡೆಯುವ ನಿಟ್ಟಿನಲ್ಲಿ ರಸ್ತೆ ಸುರಕ್ಷಾ ಪ್ರಾಧಿಕಾರ ಕಟ್ಟು ನಿಟ್ಟಿನ ಕಾನೂನು ಜಾರಿಗೆ ತರುತ್ತಿದೆ.

ಅದಕ್ಕೆ ಹೊಸ ಸೇರ್ಪಡೆ ಎಂಬಂತೆ ಸುರಕ್ಷೆಯ ದೃಷ್ಟಿಯಿಂದ ಕೆಲ ತಿಂಗಳ ಹಿಂದೆ ಸುಪ್ರೀಂ ಕೋರ್ಟ್‌ ರೋಡ್‌ ಸೇಫ್ಟಿ ಕಮಿಟಿಯನ್ನು ರಚನೆ ಮಾಡಿತ್ತು. ಈ ಕಮಿಟಿಯ ಪ್ರಕಾರ ಸಂಚರಿಸುವ ವಾಹನಗಳು ಸಾರಿಗೆ ನಿಯಮವನ್ನು ಚಾಚೂ ತಪ್ಪದೆ ಪಾಲಿಸಲೇಬೇಕು. ಇಲ್ಲವಾದರೆ ಚಾಲಕನ ಮೇಲೆ ಸಾರಿಗೆ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬಹುದು.

ಈ ನಿಯಮದ ಪ್ರಕಾರ ವಾಹನ ಚಾಲನೆಯ ಸಂದರ್ಭದಲ್ಲಿ ಮೊಬೈಲ್‌ನಲ್ಲಿ ಮಾತನಾಡುವಂತಿಲ್ಲ. ವಾಹನಗಳಲ್ಲಿ ಮಿತಿ ಮೀರಿ ಸರಕು ಸಾಗಿಸುವಂತಿಲ್ಲ. ಅತಿ ವೇಗ ಚಾಲನೆ ಮಾಡುವಂತಿಲ್ಲ. ಮದ್ಯಪಾನ ಮಾಡಿ ವಾಹನ ಸಂಚಾರ ಮಾಡುವಂತಿಲ್ಲ. ಗೂಡ್ಸ್‌ ವಾಹನದಲ್ಲಿ ಮಾನವ ಸಾಗಾಟ ಕೂಡ ಸಲ್ಲದು. ಸೆಕ್ಷನ್‌ 304 ಮಾರಣಾಂತಿಕ ಅಪಘಾತ ಮಾಡುವಂತಿಲ್ಲ ಎಂಬುವುದಾಗಿ ಸ್ಪಷ್ಟಪಡಿಸಲಾಗಿದೆ.

ಒಂದು ವೇಳೆ ಈ ನಿಯಮ ಪಾಲಿಸದಿದ್ದರೆ ಚಾಲಕರ ಪರವಾನಗಿಯನ್ನು ಮೂರು ತಿಂಗಳುಗಳ ಕಾಲ ರದ್ದು ಮಾಡಲಾಗುತ್ತದೆ. 2017ರ ಅಕ್ಟೋಬರ್‌ 1ರಿಂದ ಡಿಸೆಂಬರ್‌ 31ರ ವರೆಗೆ ಮಂಗಳೂರು ಸಾರಿಗೆ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಒಟ್ಟಾರೆಯಾಗಿ 72 ಮಂದಿಯ ಪರವಾನಗಿ ರದ್ದಾಗಿದೆ.

ಇದಕ್ಕೆಂದೇ ಸಾರಿಗೆ ಇಲಾಖೆ, ಪೊಲೀಸ್‌ ಇಲಾಖೆ ಜಂಟಿಯಾಗಿ ವಾಹನ ತಪಾಸಣೆ ನಡೆಸುತ್ತಿದ್ದಾರೆ. ಎನ್‌ ಎಂಪಿಟಿ, ಎಂಆರ್‌ಪಿಎಲ್‌, ಸುರತ್ಕಲ್‌, ನಂತೂರು, ಹೆದ್ದಾರಿಗಳ ಟೋಲ್‌ಗ‌ಳು ಸಹಿತ ನಗರದ ನಾನಾ ಕಡೆಗಳಲ್ಲಿ ವಾಹನಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಒಂದು ವೇಳೆ ಪೊಲೀಸರಿಂದ ಚಾಲಕರು ತಪ್ಪಿಸಿದರೂ, ನಗರದ ನಾನಾ ಕಡೆಗಳಲ್ಲಿ ಅಳವಡಿಸಲಾದ ಸಿ.ಸಿ. ಕೆಮರಾ ಮೂಲಕ ತಪ್ಪಿತಸ್ಥರ ಪತ್ತೆ ಮಾಡಲಾಗುತ್ತದೆ.

ನಿಯಮವನ್ನು ಪಾಲನೆ ಮಾಡದಿದ್ದರೆ ದಂಡ ಕಟ್ಟಲೂ ಚಾಲಕನಿಗೆ ಅವಕಾಶವಿರುವುದಿಲ್ಲ. ಕಡ್ಡಾಯವಾಗಿ ಆತನ ಪರವಾನಗಿ ಮೂರು ತಿಂಗಳ ಕಾಲ ಅಮಾನತ್ತಿನಲ್ಲಿರಿಸಲಾಗುತ್ತದೆ. ಪ್ರಕರಣವು ಸಾರಿಗೆ ಇಲಾಖೆಯ ಕಡತದಲ್ಲಿ ದಾಖಲಾಗುತ್ತದೆ. ಒಂದು ವೇಳೆ ತಪ್ಪುಗಳು ಪುನರಾವರ್ತನೆಯಾಗಿದ್ದು ಕಂಡು ಬಂದರೆ ಆತನ ಪರವಾನಗಿಯನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಅಧಿಕಾರ ಸಾರಿಗೆ ಇಲಾಖೆಗೆ ಇದೆ.

ಕರ್ನಾಟಕ ರಸ್ತೆ ಸುರಕ್ಷಾ ನೀತಿ- 2015ರ ಪ್ರಕಾರ ಪ್ರತೀ ವರ್ಷ ಸಾರಿಗೆ ಇಲಾಖೆಯು ಶೇ. 15ರಷ್ಟು ರಸ್ತೆ ಅಪಘಾತವನ್ನು ಕಡಿಮೆ ಮಾಡಲು ಕ್ರಮಕೈಗೊಳ್ಳಬೇಕು. ಅಪಘಾತ ತಡೆಯುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸುರಕ್ಷಾ ಸಭೆ ಸದ್ಯದಲ್ಲೇ ನಡೆಯಲಿದೆ. ಈ ಸಭೆಯಲ್ಲಿ ಪೊಲೀಸ್‌ ಇಲಾಖೆ, ರೈಲ್ವೇ ಇಲಾಖೆ, ಪಿಡಬ್ಲ್ಯೂಡಿ, ಬಿಎಸ್‌ಎನ್‌ಎಲ್‌ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಶಾಲಾ- ಕಾಲೇಜು ಆಡಳಿತ ಮಂಡಳಿ ಕೂಡ ಭಾಗವಹಿಸಲಿದೆ.

ಸುರಕ್ಷಿತವಾಗಿ ವಾಹನ ಚಾಲನೆ ಮಾಡಬೇಕು ಎಂದು ಪ್ರತಿಯೊಬ್ಬರ ಮನಸ್ಥಿತಿಯಲ್ಲೇ ಬರಬೇಕು. ಪ್ರತಿಯೊಬ್ಬ ಚಾಲಕನೂ ರಸ್ತೆ ಸುರಕ್ಷಾ ನಿಯಮ ಪಾಲನೆ ಮಾಡಬೇಕು. ಈ ಬಗ್ಗೆ ನಗರದಲ್ಲಿ ಹದ್ದಿನ ಕಣ್ಣು ಇಡಲಾಗಿದೆ. ಒಂದು ವೇಳೆ ತಪ್ಪಿದ್ದಲ್ಲಿ ದೊಡ್ಡ ಮಟ್ಟದ ದಂಡಕ್ಕೆ ಗುರಿಯಾಗಬೇಕಾಗುತ್ತದೆ. ಸುರಕ್ಷೆ ಪಾಲನೆ ಮಾಡುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಸದ್ಯದಲ್ಲೇ ಚಾಲಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English