ಸುಬ್ರಹ್ಮಣ್ಯ : ಬಿಜೆಪಿಯ ಭದ್ರ ಕೋಟೆ ಸುಳ್ಯ ವಿಧಾನಸಭಾ ಕ್ಷೇತ್ರವನ್ನು ಹೇಗಾದರೂ ಮಾಡಿ ಈ ಬಾರಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಶತಾಯಗತಾತಯ ಪ್ರಯತ್ನದಲ್ಲಿದೆ. ಸೂಕ್ತ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಒಂದು
ಹೆಜ್ಜೆ ಮುಂದೆ ಹೋಗಿದ್ದು, ಜಾನಪದ ವಾಚಸ್ಪತಿ ದಯಾನಂದ ಕತ್ತಲ್ಸರ್ ಅವರಿಗೆ ಗಾಳ ಹಾಕಲು ಮುಂದಾಗಿದೆ.
ಸುಳ್ಯ ವಿಧಾನಸಭಾ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಕತ್ತಲ್ಸರ್ ಅವರಿಗೆ ಕಾಂಗ್ರೆಸ್ ಸುಳ್ಯ ಘಟಕದಿಂದ ದಿಡೀರ್ ಕರೆ ಹೋಗಿದೆ. ಇದು ಸುಳ್ಯ ರಾಜಕೀಯ ಪಡಶಾಲೆಯಲ್ಲಿ ತೀವ್ರ ಸಂಚಲನ ಮೂಡಿಸಿದೆ. ಕಾಂಗ್ರೆಸ್ ಇಟ್ಟಿರುವ ಆಫರ್ ಬಗ್ಗೆ ನಿರ್ಧರಿಸಲು ಅವರು ಹತ್ತು ದಿನಗಳ ಕಾಲಾವಕಾಶ ಕೋರಿದ್ದಾರೆ.
ಜಾನಪದ ವಿದ್ವಾಂಸ ಕತ್ತಲ್ಸ್‌ರ್ ಧಾರ್ಮಿಕ ಕೇಂದ್ರಗಳಲ್ಲಿ ಭಾಷಣಕಾರರಾಗಿ ಗುರುತಿಸಿಕೊಂಡವರು. ರಾಷ್ಟ್ರೀಯ ಚಿಂತನೆ ಹೊಂದಿದ್ದು, ಹಿಂದೂಪರ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಜಾನಪದ, ಸಂಸ್ಕೃತಿ ಹಾಗೂ ಹಿಂದುತ್ವ ಪ್ರತಿಪಾದನೆಯ ಶೈಲಿಯ ತನ್ನ ಮಾತುಗಾರಿಕೆ ಮೂಲಕ ಅಪಾರ ಹಿಂದೂ ಕಾರ್ಯಕರ್ತರ ಪ್ರೀತಿಯನ್ನು ಗಳಿಸಿಕೊಂಡಿದ್ದಾರೆ. ಸುಳ್ಯ ಭಾಗದಲ್ಲಿ ಅವರಿಗೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ.
ಸುಳ್ಯದಲ್ಲಿ ಬೆಜೆಪಿ ಗೆಲುವಿನಲ್ಲಿ ಹಿಂದುತ್ವ ಪ್ರಬಲವಾಗಿ ಕೆಲಸ ಮಾಡುತ್ತದೆ ಎಂಬ ಸತ್ಯವನ್ನು ಅರಿತ ಕಾಂಗ್ರೆಸ್ ಇಲ್ಲಿ ಕತ್ತಲ್ಸರ್ ಅವರನ್ನು ಕಣಕ್ಕಿಳಿಸಿ ಬಿಜೆಪಿಗೆ ತಿರುಗೇಟು ನೀಡಲು ನಿರ್ಧರಿಸಿದೆ. ಇದು ಕೇಸರಿ ಪಡೆಯಲ್ಲಿ ತಳಮಳ ಸೃಷ್ಟಿಸಿದೆ.
ಸುಳ್ಯ ಮೀಸಲು ಕ್ಷೇತ್ರದಲ್ಲಿ ಸತತ 5 ಬಾರಿ ಸೋಲು ಅನುಭವಿಸಿರುವ ಕಾಂಗ್ರೆಸ್ ಈ ಬಾರಿ ಗೆಲುವುಗಾಗಿ ತನ್ನ ಎಲ್ಲ ಪ್ರಯತ್ನ ಮುಂದುವರೆಸಿದೆ. ಬಿಜೆಪಿಯಿಂದ ಐದು ಬಾರಿ ಗೆದ್ದಿರುವ ಬಿಜೆಪಿಯ ಎಸ್. ಅಂಗಾರ ಅವರೇ ಈ ಬಾರಿಯೂ ಅಭ್ಯರ್ಥಿಯಾಗುವ ಸಂಭವ ಹೆಚ್ಚು. ಇವರ ವಿರುದ್ಧ ಸತತ ಮೂರು ಬಾರಿ ಸೋತಿರುವ ಡಾ| ರಘು ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿ ಎಂದು ಹೇಳಲಾಗುತ್ತಿದ್ದರೂ ಕೈ ಪಡೆ ಪರ್ಯಾಯ ಅಭ್ಯರ್ಥಿ ಹುಡುಕಾಟದಲ್ಲಿ ತೊಡಗಿದೆ.
ಕಾಂಗ್ರೆಸ್‌ನ ನಂದರಾಜ್ ಸಂಕೇಶ್, ಡಾ| ಪರಮೇಶ್, ಶಶಿಧರಬೊಟ್ಟ, ಕೆ. ಕುಶಲ, ಲಕ್ಷ್ಮೀ ಕೃಷ್ಣಪ್ಪ ಅವರೂ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಪುತ್ತೂರಿನ ಸರಕಾರಿ ಅಧಿಕಾರಿ ಶಶಿಧರ ಕೋಡಿಜಾಲ್ ಅವರ ಹೆಸರೂ ತಳುಕು ಹಾಕಿಕೊಂಡಿದೆ.
ಮೀಸಲು ಕ್ಷೇತ್ರ ಸುಳ್ಯದಿಂದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವಂತೆ ಕಾಂಗ್ರೆಸ್‌ನಿಂದ ಕರೆ ಬಂದಿರುವುದು ನಿಜ.ನಮ್ಮ ಸಮುದಾಯದಲ್ಲಿ ರಾಜಕೀಯವಾಗಿ ಯಾರೂ ಗುರುತಿಸಿಕೊಂಡಿಲ್ಲ. ಸಮುದಾಯದ ಅಭಿವೃದ್ಧಿ ದೃಷ್ಟಿಯಿಂದಸಮುದಾಯದ ವ್ಯಕ್ತಿ ರಾಜಕೀಯ ಪ್ರತಿನಿಧಿಯಾಗಬೇಕೆಂಬ ಅಪೇಕ್ಷೆ ನಮ್ಮ ಸಮುದಾಯದ ಮಂದಿಯಲ್ಲಿದೆ. ಅವರಬೇಡಿಕೆಗೆ ಮನ್ನಣೆ ನೀಡುವ ದೃಷ್ಟಿಯಿಂದ ಅವಕಾಶ ದೊರೆತಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ಹೊಂದಿದ್ದೇನೆ.ರಾಷ್ಟ್ರೀಯ ವಿಚಾರಗಳನ್ನು ಪ್ರತಿಪಾದಿಸುತ್ತ ಬಂದಿರುವ ಕಾರಣ ಯಾವ ಪಕ್ಷದಿಂದ ಕಣಕ್ಕೆ ಇಳಿಯಬೇಕು ಎಂಬುದು ಇನ್ನೂ ಅಂತಿಮವಾಗಿಲ್ಲ ಎಂದು ದಯಾನಂದ ತಿಳಿಸಿದ್ದಾರೆ.
Click this button or press Ctrl+G to toggle between Kannada and English